ಪುಷ್ಪಗಿರಿಯ ಜಲಕನ್ಯೆ ಮಲ್ಲಳ್ಳಿ ಫಾಲ್ಸ್

WD
ಬಿ.ಎಂ.ಲವಕುಮಾರ್

ದೂರದಲ್ಲಿ ಮುಗಿಲನ್ನು ಚುಂಬಿಸಲೋ ಎನ್ನುವಂತೆ ನಿಂತ ಬೆಟ್ಟಶ್ರೇಣಿಗಳು... ಅವುಗಳ ನಡುವಿನ ಕಂದಕದಲ್ಲಿ ಒತ್ತೌತ್ತಾಗಿ ಬೆಳೆದು ನಿಂತ ವೃಕ್ಷ ರಾಶಿಗಳು... ಏಲಕ್ಕಿ, ಕಾಫಿ ತೋಟಗಳು... ಕಣ್ಣು ಹಾಯಿಸಿದುದ್ದಕ್ಕೂ ಹಸಿರು ಹಚ್ಚಡವನ್ನೊದ್ದ ನಿಸರ್ಗ... ಇಂತಹ ಒಂದು ದಟ್ಟಕಾನನದ ನಡುವಿನ ಸುಂದರ ಪರಿಸರದೊಳಗೆ ಹೆಬ್ಬಂಡೆಯ ಮೇಲೆ ಬೆಳ್ಳಿ ಬಳುಕಿದಂತೆ ಗೋಚರಿಸುತ್ತದೆ ಮಲ್ಲಳ್ಳಿ ಜಲಕನ್ಯೆ.

ಹೌದು! ಮಲ್ಲಳ್ಳಿ ಜಲಧಾರೆ ನೆಲೆ ನಿಂತ ಪರಿಸರವೇ ಹಾಗಿದೆ. ಇವತ್ತು ಕೊಡಗಿನಲ್ಲಿರುವ ಜಲಧಾರೆಗಳಿಗೆ ಹೋಲಿಸಿದರೆ ಇದು ವಿಭಿನ್ನವಾಗಿಯೂ, ವಿಶಿಷ್ಟವಾಗಿಯೂ ಗಮನಸೆಳೆಯುತ್ತದೆ. ಕೊಡಗಿನಲ್ಲಿರುವ ಬೆಟ್ಟಗಳಲ್ಲೊಂದಾದ ಪುಷ್ಪಗಿರಿ ಬೆಟ್ಟಶ್ರೇಣಿಯ ಕುಮಾರಪರ್ವತದ ನಡುವೆ ಕುಮಾರಧಾರಾ ನದಿಯಿಂದ ಸೃಷ್ಟಿಯಾಗಿರುವ ಈ ಜಲಧಾರೆಯತ್ತ ತೆರಳುವ ವೀಕ್ಷಕರ ಸಂಖ್ಯೆ ಕಡಿಮೆಯಾದರೂ ಶ್ರಮವಹಿಸಿ ತೆರಳಿದವರನ್ನು ಜಲಧಾರೆಯ ರುದ್ರನರ್ತನ ರೋಮಾಂಚನಗೊಳಿಸುತ್ತದೆ.
WD

ಹಾಗೆ ನೋಡಿದರೆ ಮಲ್ಲಳ್ಳಿ ಜಲಧಾರೆ ಸನಿಹಕ್ಕೆ ಹೋಗಿ ಬರುವುದು ಅಷ್ಟು ಸುಲಭವಲ್ಲ. ಪೇಟೆ, ಪಟ್ಟಣದಿಂದ ದೂರವಾಗಿ, ಬಸ್, ವಾಹನಗಳ ಸಂಚಾರದಿಂದ ವಂಚಿತವಾಗಿರುವ ಈ ತಾಣಕ್ಕೆ ಭೇಟಿ ನೀಡಬೇಕೆಂದರೆ, ದಿನವೊಂದನ್ನು ಮೀಸಲಿಡಬೇಕು. ರಕ್ತಹೀರಲು ಬರುವ ಜಿಗಣೆಗಳಿಂದ ತಪ್ಪಿಸಿಕೊಂಡು ಕಲ್ಲು-ಮುಳ್ಳು, ಏರು ತಗ್ಗುಗಳ ಹಾದಿಯನ್ನು ಕ್ರಮಿಸಿ ಶ್ರಮಪಡಬೇಕು. ಇದಕ್ಕೆಲ್ಲಾ ತಯಾರಿದ್ದರೆ ಮಾತ್ರ ನಾವು ಸನಿಹಕ್ಕೆ ತೆರಳಿ ಜಲಧಾರೆಯ ಸೊಬಗನ್ನು ಸವಿಯಲು ಸಾಧ್ಯ.
ಬೆಟ್ಟಗಳ ನಡುವಿನ ಹೆಬ್ಬಂಡೆಗಳ ಮೇಲಿನಿಂದ ಬೃಹತ್ ಕಂದಕಕ್ಕೆ ಸುಮಾರು ಎಂಬತ್ತು ಅಡಿ ಅಗಲವಾಗಿ ನೂರೈವತ್ತು ಅಡಿಯಷ್ಟು ಎತ್ತರದಿಂದ ಧುಮುಕುವ ಜಲರಾಶಿ ಬಳಿಕ ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ತಳಸೇರುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತದೆ. ಒಂದು ಹೆಬ್ಬಂಡೆಯಿಂದ ಇನ್ನೊಂದು ಹೆಬ್ಬಂಡೆಗೆ ಚಿಮ್ಮುವಾಗ ಕಾಣಸಿಗುವ ಸುಂದರ ದೃಶ್ಯ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಒಂದು ಕ್ಷಣ ಭೂತಾಯಿಯ ಒಡಲ ಬೆಳ್ಳಿಯೆಲ್ಲಾ ಕರಗಿ ಬಂಡೆಯ ಮೇಲೆ ಹರಿಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ.

WD

ಮಲ್ಲಳ್ಳಿ ಜಲಧಾರೆಯನ್ನು ಮಲ್ಲಳ್ಳಿ ಅಬ್ಬಿ, ಪುಷ್ಪಹಾರಿ ಜಲಧಾರೆ, ಕುಮಾರಧಾರಾ ಜಲಧಾರೆ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಈ ಜಲಧಾರೆಯು ಕುಮಾರ ನದಿಯಿಂದ ನಿರ್ಮಿತವಾಗಿದ್ದು, ನದಿಯನ್ನು ಇಲ್ಲಿನವರು ಮಲ್ಲಳ್ಳಿ ಹೊಳೆ, ಹೆಗ್ಗಡೆಮನೆ ಹೊಳೆ ಎಂಬುವುದಾಗಿಯೂ ಕರೆಯುವುದಿದೆ. ಇದರ ವೈಶಿಷ್ಟ್ಯತೆ ಎಂದರೆ ಜಿಲ್ಲೆಯಲ್ಲಿರುವ ಬೇರೆಲ್ಲಾ ನದಿಗಳು ಪೂರ್ವದಿಕ್ಕಿಗೆ ಹರಿದು ಕಾವೇರಿಯೊಂದಿಗೆ ಹರಿದು ಬಳಿಕ ಬಂಗಾಳಕೊಲ್ಲಿ ಸೇರಿದರೆ, ಈ ನದಿ ಮಾತ್ರ ಪಶ್ಚಿಮಕ್ಕೆ ಹರಿದು ಅರಬ್ಬಿ ಸಮುದ್ರ ಸೇರುತ್ತದೆ.

WD

ಜಲಧಾರೆ ಸೊಬಗನ್ನು ವೀಕ್ಷಿಸಲು ತೆರಳುವವರು ಜಲಧಾರೆಗೆ ಅನತಿ ದೂರದಲ್ಲಿರುವ ಮೈದಾನದಿಂದಲೇ ನಿಂತು ನೋಡಬಹುದು. ಇದಕ್ಕೆ ಅನುಕೂಲವಾಗುವಂತೆ ನಿಸರ್ಗವೇ ನಿರ್ಮಿಸಿದ ಹೆಬ್ಬಂಡೆಯ ವೀಕ್ಷಣಾ ಕಟ್ಟೆಯಿದೆ. ಅಲ್ಲಿಂದಲೇ ನಿಂತು ಜಲಧಾರೆಯ ಸೊಬಗನ್ನು ಸವಿಯಬಹುದಾಗಿದೆ. ಇನ್ನು ಇಲ್ಲಿಂದ ಕಡಿದಾದ ಹಾದಿಯಲ್ಲಿ ಜಾಗರೂಕತೆಯಿಂದ ಇಳಿದಿದ್ದೇ ಆದರೆ ಜಲಪಾತದ ತಳಭಾಗವನ್ನು ತಲುಪಬಹುದು. ಇಲ್ಲಿ ನಿಂತಿದ್ದೇ ಆದರೆ ಧುಮ್ಮಿಕ್ಕುವ ಶ್ವೇತಧಾರೆಯ ಸಿಂಚನ ಮೈಯ್ಯನ್ನು ಸ್ಪರ್ಶಿಸಿ ಪುಳಕಗೊಳಿಸುತ್ತದೆ.

WD

ದಶಕಗಳ ಹಿಂದೆ ಈ ಜಲಧಾರೆಯಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಸರ್ಕಾರದ ಮುಂದಿತ್ತಾದರೂ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟಿಸಿದ ಕಾರಣ ಅದನ್ನು ಕೈಬಿಡಲಾಯಿತು. ಆದರೆ ಇಲ್ಲಿ ಜಲವಿದ್ಯುತ್ ಉತ್ಪಾದಿಸಲು ಕೆಲವು ಖಾಸಗಿ ಕಂಪೆನಿಗಳು ಮುಂದೆ ಬಂದಿರುವ ವರದಿಗಳಿವೆ. ಇದು ಸಕಾರಗೊಂಡಲ್ಲಿ ಸುತ್ತಮುತ್ತಲಿನ ವಿದ್ಯುತ್ ಕಾಣದ ಹಳ್ಳಿಗಳಿಗೆ ಉಪಯೋಗವಾಗಬಹುದು ಎಂಬ ಆಶಾಭಾವನೆ ಇಲ್ಲಿನ ಕೆಲವು ಗ್ರಾಮಸ್ಥರದ್ದಾಗಿದೆ. ಜೊತೆಗೆ ಈ ಜಲಪಾತವನ್ನು ಅಭಿವೃದ್ದಿಪಡಿಸುವ ಬಗೆಗಿನ ಸುದ್ದಿಗಳಿದ್ದು ಅದು ಸಾಕಾರಗೊಂಡಲ್ಲಿ ಪ್ರವಾಸಿಗರಿಗೆ ಒಂದಷ್ಟು ಅನುಕೂಲವಾಗುವುದಂತು ನಿಜ.

ಜಲಧಾರೆಯತ್ತ ತೆರಳುವವರಿಗೆ ಕೇವಲ ಜಲಧಾರೆಯ ಸೊಬಗು ಮಾತ್ರವಲ್ಲದೆ, ಇಲ್ಲಿ ದಾರಿಯುದ್ದಕ್ಕೂ ಕಂಡುಬರುವ ನಿಸರ್ಗ ಸೌಂದರ್ಯ ಮೈ ಪುಳಕಗೊಳಿಸುತ್ತದೆ. ಮಲ್ಲಳ್ಳಿ ಜಲಧಾರೆಗೆ ಹಾದಿಯಲ್ಲೇ ಅಂಬೂರ ಅಬ್ಬಿ ಹಾಗೂ ಹಾಸರ ಅಬ್ಬಿ ಎಂಬ ಪುಟ್ಟ ಜಲಧಾರೆಗಳಿವೆ. ಬಹುಶಃ ಪಟ್ಟಣಕ್ಕೆ ಸನಿಹ ಇದ್ದಿದ್ದರೆ ಇದೊಂದು ಪ್ರೇಕ್ಷಣೀಯ ತಾಣವಾಗಿ ಖ್ಯಾತಿಪಡೆಯುವುದರೊಂದಿಗೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ತನ್ನತ್ತ ಸೆಳೆಯುತ್ತಿತ್ತೇನೋ? ಆದರೆ ಪಟ್ಟಣದಿಂದ ದೂರವಾಗಿ ರಸ್ತೆ, ವಾಹನಗಳ ಸೌಲಭ್ಯದಿಂದ ವಂಚಿತರಾಗಿರುವ ಕಾರಣ ಇದು ಇಂದಿಗೂ ಅಪರಿಚಿತಾಗಿಯೇ ಉಳಿಯುವಂತಾಗಿದೆ. ಚಾರಣಕ್ಕೆ ತೆರಳುವವರು ತೋಟದ ಕೆಲಸಕ್ಕೆ ಹೋಗುವವರು ಮಾತ್ರ ಇತ್ತ ತೆರಳುತ್ತಿರುತ್ತಾರೆ. ಉಳಿದಂತೆ ಈ ಜಲಧಾರೆಯತ್ತ ಸ್ಥಳೀಯ ಕೃಷಿಕರನ್ನು ಹೊರತುಪಡಿಸಿದರೆ ಇಲ್ಲಿ ಯಾರೂ ಕಾಣಸಿಗಲಾರರು. ಹಾಗಾಗಿ ಎಲ್ಲಾ ದಿನಗಳಲ್ಲಿಯೂ ಈ ತಾಣ ನಿರ್ಜನವಾಗಿಯೇ ಇರುತ್ತದೆ.

WD

ಮಲ್ಲಳ್ಳಿ ಜಲಧಾರೆಯನ್ನು ವೀಕ್ಷಿಸಲು ತೆರಳುವವರು ಕೊಡಗಿನ ತಾಲ್ಲೂಕು ಕೇಂದ್ರಗಳಲ್ಲೊಂದಾದ ಸೋಮವಾರಪೇಟೆಗೆ ತೆರಳಿದರೆ ಅಲ್ಲಿಂದ ಶಾಂತಳ್ಳಿ ಮೂಲಕ ಸುಮಾರು ಇಪ್ಪತ್ತು ಕಿ.ಮೀ. ತೆರಳಿದರೆ ಹಂಚಿನಳ್ಳಿ ಗ್ರಾಮ ಸಿಗುತ್ತದೆ. ಇಲ್ಲಿಂದ ಬಲಕ್ಕೆ ಮಣ್ಣು ರಸ್ತೆಯಲ್ಲಿ ನಾಲ್ಕು ಕಿ.ಮೀ. ಏರು-ತಗ್ಗುಗಳನ್ನು ದಾಟಿ ಮುನ್ನಡೆಯಬೇಕು. ಹೀಗೆ ನಡೆಯುವಾಗ ಆಯಾಸವಾಗುವುದು ಸಹಜ ಆದರೆ ಸುತ್ತಲಿನ ನಿಸರ್ಗ ಸೌಂದರ್ಯ ನಮ್ಮ ಆಯಾಸವನ್ನು ಹೊಡೆದೋಡಿಸಿ ಉಲ್ಲಾಸವನ್ನು ತುಂಬುತ್ತಿರುತ್ತದೆ. ಕಾಲ್ನಡಿಗೆಯ ಹಾದಿ ಮುಗಿಯುತ್ತಿದ್ದಂತೆಯೇ ವಿಶಾಲವಾದ ಮೈದಾನ ಎದುರಾಗುತ್ತದೆ. ಇಲ್ಲಿಂದ ನಿಂತು ನೋಡಿದರೆ ದೂರದಲ್ಲಿ ಹೆಬ್ಬಂಡೆಗಳ ನಡುವೆ ಶ್ವೇತಧಾರೆಯಾಗಿ ನಾಟ್ಯಾಂಗಿಯಂತೆ ಜಲಧಾರೆ ಕಂಗೊಳಿಸುತ್ತದೆ.
ಜಲಧಾರೆಯನ್ನು ವೀಕ್ಷಿಸಲು ಮಳೆಗಾಲದ ನಂತರದ ದಿನಗಳು ಉತ್ತಮವಾಗಿದ್ದು, ಆಹಾರ ಪದಾರ್ಥಗಳನ್ನು ಜೊತೆಯಲ್ಲಿಯೇ ಕೊಂಡೊಯ್ಯಬೇಕಾಗುತ್ತದೆ. ಏಕೆಂದರೆ ಕುಗ್ರಾಮವಾಗಿರುವುದರಿಂದ ಇಲ್ಲಿ ಯಾವುದೇ ಪದಾರ್ಥಗಳು ಸಿಗಲಾರದು. ಹಾಗೆಯೇ ಜನಜಂಗುಳಿಯಿಂದ ದೂರವಾಗಿ ಪ್ರಶಾಂತ ವಾತಾವರಣದಲ್ಲಿ ನೆಲೆ ನಿಂತಿರುವ ಈ ತಾಣಕ್ಕೆ ತೆರಳುವರು ಅಲ್ಲಿ ಪ್ಲಾಸ್ಟಿಕ್, ಗಾಜು ಮುಂತಾದ ವಸ್ತುಗಳನ್ನು ಎಸೆಯದೆ ಬಂದರೆ ಅದಕ್ಕಿಂತ ದೊಡ್ಡ ಉಪಕಾರ ಮತ್ತೊಂದಿಲ್ಲ. ಜಲಧಾರೆಯ ಸೊಬಗನ್ನು ದೂರದಿಂದಲೇ ನೋಡಿ ಹಿಂತಿರುಗುವುದು ಒಳ್ಳೆಯದು. ಸೌಂದರ್ಯಕ್ಕೆ ಮಾರು ಹೋಗಿ ಇಲ್ಲಿ ಸ್ನಾನ ಮಾಡುವ ಪ್ರಯತ್ನ ಮಾಡಬೇಡಿ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದಲ್ಲ. ಈಗಾಗಲೇ ಹಲವರು ಇಲ್ಲಿ ಬಂದು ಪ್ರಾಣ ಕಳೆದುಕೊಂಡಿದ್ದಾರೆ ಎಂಬುವುದು ನೆನಪಿರಲಿ.

WD

ವೆಬ್ದುನಿಯಾವನ್ನು ಓದಿ