ಪ್ರೇಕ್ಷಣೀಯ ಮೈಸೂರು-ಕೊಡಗಿನಲ್ಲಿ ಪ್ರವಾಸಿಗರ ದಂಡು

WD
ಈ ಬಾರಿಯ ಹೊಸವರ್ಷಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ಇಚ್ಚಿಸುತ್ತಿರುವ ದೂರದ ಪ್ರವಾಸಿಗರು ಈಗಾಗಲೇ ಕೊಡಗು ಹಾಗೂ ಮೈಸೂರಿಗೆ ಬಂದು ಠಿಕಾಣಿ ಹೂಡಿದ್ದಾರೆ. ಹೀಗಾಗಿ ಇಲ್ಲಿನ ಹೋಟೆಲ್, ರೆಸಾರ್ಟ್ ಹಾಗೂ ಹೋಂಸ್ಟೇಗಳು ಭರ್ತಿಯಾಗಿವೆ. ಈ ನಡುವೆ ಕ್ರಿಸ್ಮಸ್ ರಜೆಯ ಹಿನ್ನಲೆಯಲ್ಲಿ ಕಳೆದೊಂದು ವಾರದಿಂದ ಕೊಡಗು ಹಾಗೂ ಮೈಸೂರಿನಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ.

ಕೊಡಗಿನಲ್ಲಿರುವ ಹೋಂಸ್ಟೇ ಹಾಗೂ ಹೋಟೆಲ್ಗಳು ಭರ್ತಿಯಾಗಿರುವುದರಿಂದ ಹೊಸವರ್ಷವನ್ನು ಕೊಡಗಿನ ಕಾಫಿ ತೋಟಗಳ ನಡುವಿನ ಹೋಂಸ್ಟೇಗಳಲ್ಲಿ ಆಚರಿಸಬೇಕೆಂಬ ಬಯಕೆಯಲ್ಲಿದ್ದವರ ಪೈಕಿ ಹೆಚ್ಚಿನವರು ಅಲ್ಲಿಂದ ಮೈಸೂರಿನತ್ತ ಬರುತ್ತಿದ್ದಾರೆ. ಮೈಸೂರಿನ ಕೆಲವು ಪ್ರತಿಷ್ಠಿತ ಹೋಟೆಲ್ಗಳಲ್ಲಿ ಹೊಸವರ್ಷಾಚರಣೆಗಾಗಿ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ಕ್ರಿಸ್ಮಸ್ ರಜೆಯಲ್ಲಿ ಪ್ರವಾಸ ಬಂದವರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿರುವುದರಿಂದ ಮೈಸೂರಿನ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಕೆಆರ್ಎಸ್, ಶ್ರೀರಂಗಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಲ್ಲಿ ಬರೀ ಪ್ರವಾಸಿಗರೇ ಕಾಣುತ್ತಿದ್ದಾರೆ.
ಮೈಸೂರಿಗೆ ಕರ್ನಾಟಕದ ಪ್ರವಾಸಿಗರು ಮಾತ್ರವಲ್ಲದೆ, ಇತರೆ ರಾಜ್ಯಗಳ ಪ್ರವಾಸಿಗರು ಹಾಗೂ ವಿದೇಶಿ ಪ್ರವಾಸಿಗರು ಕೂಡ ಆಗಮಿಸುತ್ತಿದ್ದಾರೆ. ಸಾಮಾನ್ಯವಾಗಿ ದೂರದಿಂದ ಆಗಮಿಸುವ ಪ್ರವಾಸಿಗರು ಮೈಸೂರಿನಲ್ಲಿ ವಾಸ್ತವ್ಯ ಹೂಡುತ್ತಿದ್ದು, ಬಳಿಕ ನಂಜನಗೂಡು, ತಲಕಾಡು, ಮುಡುಕುತೊರೆ, ಶ್ರೀರಂಗಪಟ್ಟಣ, ದರಿಯಾದೌಲತ್, ರಂಗನತಿಟ್ಟು ಪಕ್ಷಿಧಾಮ, ಕೆಆರ್ಎಸ್ ಗೆ ಭೇಟಿ ನೀಡುತ್ತಿದ್ದಾರೆ.

ಕ್ರಿಸ್ಮಸ್ ದಿನದಂದು ಮೃಗಾಲಯಕ್ಕೆ ಸುಮಾರು 26,990 ಜನ ಪ್ರವಾಸಿಗರು ಭೇಟಿ ನೀಡಿದ್ದರೆ, ಅರಮನೆಗೆ ಸುಮಾರು 24,459ಜನ ಭೇಟಿ ನೀಡಿದ್ದಾರೆ. ಈ ವರ್ಷ ಮೃಗಾಲಯಕ್ಕೆ ಭೇಟಿ ನೀಡಿದವರ ಸಂಖ್ಯೆ ಕಳೆದ ವರ್ಷಕ್ಕೆ ಹೆಚ್ಚಿರುವುದರಿಂದ ಆದಾಯ ಸುಮಾರು ಹತ್ತು ಕೋಟಿ ರೂ. ಮೀರಲಿದೆ.

ಮಡಿಕೇರಿಯಲ್ಲಿ ಪ್ರವಾಸಿಗರು: ಮಂಜಿನ ನಗರಿ ಮಡಿಕೇರಿಯಲ್ಲಿಯೂ ಪ್ರವಾಸಿಗರ ದಂಡು ಕಂಡು ಬರುತ್ತಿದೆ. ಶಾಲಾ ಮಕ್ಕಳಾದಿಯಾಗಿ ಸಾವಿರಾರು ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳಿಗೆ ಲಗ್ಗೆ ಹಾಕುತ್ತಿದ್ದಾರೆ. ರಾಜಾಸೀಟ್, ಅಬ್ಬಿಫಾಲ್ಸ್, ಕುಶಾಲನಗರದ ಕಾವೇರಿ ನಿಸರ್ಗಧಾಮ, ದುಬಾರೆಯ ಆನೆಕ್ಯಾಂಪ್ನಲ್ಲಿಯೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪಟ್ಟಣದ ಜಂಜಾಟದಲ್ಲಿಯೇ ದಿನಕಳೆಯುವವರು ವರ್ಷದ ಮೊದಲ ದಿನವನ್ನಾದರೂ ನೆಮ್ಮದಿಯಾಗಿ ನಿಸರ್ಗದ ಮಡಿಲಲ್ಲಿ ಕಳೆಯೋಣವೆಂದು ತೀರ್ಮಾನಿಸಿ ಕೊಡಗಿನತ್ತ ಆಗಮಿಸಿರುವುದರಿಂದ ಎಲ್ಲಾ ಹೋಟೆಲ್, ರೆಸಾರ್ಟ್, ಹೋಂಸ್ಟೇಗಳು ಭರ್ತಿಯಾಗಿವೆ.

-ಬಿ.ಎಂ.ಲವಕುಮಾರ್, ಮೈಸೂರು

ವೆಬ್ದುನಿಯಾವನ್ನು ಓದಿ