ಝಳು ಝುಳು ಸದ್ದು ಮಾಡುತ್ತಾ ವಿಶಾಲವಾಗಿ ಹರಡಿ ಹರಿಯುವ ಕಾವೇರಿ ನದಿ... ದಂಡೆಯ ಹೆಬ್ಬಂಡೆಗಳ ಮೇಲೆ ಎಳೆ ಬಿಸಿಲಿಗೆ ಮೈಯೊಡ್ಡಿ ಮಲಗಿರುವ ಮೊಸಳೆಗಳು... ನಡುಗಡ್ಡೆಯಲ್ಲಿ ಬೆಳೆದು ನಿಂತ ಹೆಮ್ಮರಗಳಲ್ಲಿ ಬೀಡು ಬಿಟ್ಟ ಹಕ್ಕಿಗಳು... ಅವುಗಳು ಹೊರಡಿಸುವ ಚಿಲಿಪಿಲಿ ನಿನಾದ... ದೋಣಿಯಲ್ಲಿ ಕುಳಿತು ನದಿಯಲ್ಲಿ ಗಿರಕಿ ಹೊಡೆಯುತ್ತಾ ಪಕ್ಷಿಗಳನ್ನು ವೀಕ್ಷಿಸುವ ವಿಹಾರಿಗಳು... ಇದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಬಳಿಯಿರುವ ರಂಗನತಿಟ್ಟಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕಾಣಸಿಗುವ ದಿನನಿತ್ಯದ ದೃಶ್ಯಗಳು.
ಕೃಷ್ಣರಾಜಸಾಗರ ಜಲಾಶಯದಿಂದ ಧುಮ್ಮಿಕ್ಕಿ ಹರಿಯುವ ಕಾವೇರಿ ನದಿ ಶ್ರೀರಂಗಪಟ್ಟಣದ ಬಳಿ ದ್ವೀಪ ಸೃಷ್ಟಿಸಿದ್ದು, ಈ ದ್ವೀಪವೇ ರಂಗನತಿಟ್ಟು. ಇಲ್ಲಿ ಬೆಳೆದು ನಿಂತಿರುವ ಹೆಮ್ಮರಗಳೇ ಪಕ್ಷಿಗಳಿಗೆ ಆಶ್ರಯ ತಾಣಗಳಾಗಿವೆ. ರಂಗನತಿಟ್ಟು ಮೈಸೂರು ಮಂಡ್ಯ ಹೆದ್ದಾರಿ ನಡುವೆ ಸಿಗುವ ಶ್ರೀರಂಗಪಟ್ಟಣದಿಂದ 4ಕಿ,ಮೀ., ಮೈಸೂರಿನಿಂದ 19ಕಿ.ಮೀ. ಹಾಗೂ ಬೆಂಗಳೂರಿನಿಂದ 128ಕಿ.ಮೀ ದೂರದಲ್ಲಿದೆ.
WD
ದೇಶ ವಿದೇಶಿ ಪಕ್ಷಿಗಳ ಆಗಮನ: ರಂಗನತಿಟ್ಟು ತನ್ನದೇ ಆದ ವೈಶಿಷ್ಟ್ಯದಿಂದಾಗಿ ದೇಶದಲ್ಲಿಯೇ ಎರಡನೇ ಅತಿ ದೊಡ್ಡ ಪಕ್ಷಿಧಾಮ ಎಂಬ ಖ್ಯಾತಿ ಪಡೆದಿದೆ. ಇಲ್ಲಿಗೆ ವಿವಿಧ ದೇಶಗಳಿಂದ ಯಾವುದೇ ಗಡಿಪಹರೆಯನ್ನು ಲೆಕ್ಕಿಸದೆ ನೂರಾರು ವರ್ಷಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಪಕ್ಷಿಗಳು ಬರುತ್ತಿವೆ. ಹಾಗೆ ಬರುವ ಪಕ್ಷಿಗಳು ತಮ್ಮ ಸಂತಾನೋತ್ಪತ್ತಿಯ ಬಳಿಕ ಸ್ವಸ್ಥಾನಕ್ಕೆ ಮರಳುತ್ತವೆ. ಪ್ರತಿವರ್ಷವೂ ರಂಗನತಿಟ್ಟಿಗೆ ದೂರದ ದಕ್ಷಿಣ ಆಫ್ರಿಕಾ, ಆಸ್ಟ್ತ್ರೇಲಿಯಾ, ನೆದರ್ಲ್ಯಾಂಡ್, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಸೈಬೀರಿಯಾ, ರಷ್ಯಾ, ಅಮೇರಿಕಾ, ನೈಜೀರಿಯಾಗಳಿಂದ ವಲಸೆ ಬರುವ ಅಪರೂಪದ ಹಕ್ಕಿಗಳು ಕಾವೇರಿ ನದಿದಂಡೆಯ ಹೆಮ್ಮರಗಳಲ್ಲಿ ಬೀಡುಬಿಡುತ್ತವೆ. ಇವುಗಳೊಂದಿಗೆ ನೀರು ಕಾಗೆ, ಕಾಜಾಣ, ಬೆಳ್ಳಕ್ಕಿ, ಪಲಕಮಣಿ, ಸ್ಪೂನ್ಬಿಲ್, ಚಿಲುಮೆ ಹಕ್ಕಿ, ಕೊಕ್ಕರೆ, ಹುಂಡಕೋಳಿ, ಪಿಕಳಾರ, ಮಿಂಚುಳ್ಳಿ, ಗುಳುಮುಳುಕು, ಬಕ, ಚೌಣಾ ಹಕ್ಕಿ, ನಿಶಾಚ, ಕೆಸರು ಹಕ್ಕಿ, ಸಿಳ್ಳಾರ, ನಾಮಗೋಳಿ, ಗೀಜುಗ, ಟಿಟ್ಟಿಭ, ಪಟ್ಟೆಚಿಕ್ಕು, ಎಲೆಹಕ್ಕಿ, ನೀರುಬಾತು, ಕೆರೆಕ್ರೌಂಚ, ರಾಜಹಕ್ಕಿ, ನೀರುಬಾತು ಸೇರಿದಂತೆ ನೂರಾರು ಬಗೆಯ ಸಹಸ್ರಾರು ಪಕ್ಷಿಗಳು ವಾಸ್ತವ್ಯ ಹೂಡಿ ರಂಗನತಿಟ್ಟಿಗೆ ಕಳೆಕಟ್ಟುತ್ತವೆ.
WD
ಮಳೆಗಾಲದಲ್ಲಿ ಧಾರಾಕಾರವಾಗಿ ಮಳೆಸುರಿದು ಪ್ರತಿಕೂಲ ಪರಿಣಾಮ ಉಂಟಾದಾಗ ಮಲೆನಾಡು ಸೇರಿದಂತೆ ದೂರದ ಊರುಗಳಿಂದ ಸುರಕ್ಷಿತ ತಾಣವಾದ ರಂಗನತಿಟ್ಟಿಗೆ ಪಕ್ಷಿಗಳು ಬರುತ್ತವೆ. ಪ್ರತಿವರ್ಷವೂ ಮಾರ್ಚ್‌ನಿಂದ ಆರಂಭವಾಗಿ ನವೆಂಬರ್ ತನಕ ಪಕ್ಷಿಗಳು ವಲಸೆ ಬರುವುದು ಸಾಮಾನ್ಯವಾಗಿರುತ್ತದೆ.
WD
ನೂರಾರು ವರ್ಷಗಳ ಹಿಂದೆಯೇ ರಂಗನತಿಟ್ಟಿಗೆ ಹಕ್ಕಿಗಳು ವಲಸೆ ಬಂದು ಸಂತಾನೋತ್ಪತ್ತಿ ಮಾಡಿಕೊಂಡು ಹೋಗುತ್ತಿದ್ದವಾದರೂ ಇದರ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಪಕ್ಷಿ ಪ್ರೇಮಿ ಸಲೀಂ ಆಲಿಯವರು ರಂಗನತಿಟ್ಟಿಗೆ ಬಂದು ಹೋದ ಬಳಿಕ ರಂಗನತಿಟ್ಟು ರಾಷ್ಟ್ತ್ರಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿತು ಎಂದರೆ ತಪ್ಪಾಗಲಾರದು.
WD
ಸಲೀಂ ಆಲಿ ಭೇಟಿ: 1938ರಲ್ಲಿ ಮೈಸೂರಿಗೆ ಬಂದಿದ್ದ ಖ್ಯಾತ ಪಕ್ಷಿಪ್ರೇಮಿ, ಪಕ್ಷಿ ಶಾಸ್ತ್ತ್ರಜ್ಞ ಸಲೀಂ ಆಲಿಯವರು ರಂಗನತಿಟ್ಟಿನಲ್ಲಿ ವಿವಿಧ ಬಗೆಯ ಪಕ್ಷಿಗಳು ವಾಸ್ತವ್ಯ ಹೂಡುತ್ತಿರುವ ಬಗ್ಗೆ ಮಾಹಿತಿ ಪಡೆದು ಅಲ್ಲಿಗೆ ತೆರಳಿದ್ದರು. ರಂಗನತಿಟ್ಟಿನ ಪ್ರಾಕೃತಿಕ ಸೌಂದರ್ಯ ಹಾಗೂ ಅಲ್ಲಿನ ಹೆಮ್ಮರಗಳಲ್ಲಿ ಸಾವಿರಾರು ಪಕ್ಷಿಗಳು ನೆಲೆವೂರಿದನ್ನು ಕಂಡ ಸಲೀಂ ಆಲಿಯವರಿಗೆ ಇದನ್ಯಾಕೆ ಪಕ್ಷಿಧಾಮವೆಂದು ಘೋಷಿಸಬಾರದು? ಎಂಬ ಪ್ರಶ್ನೆ ಉದ್ಭವಿಸಿತ್ತು. ತಡಮಾಡದೆ ಅವರು ರಂಗನತಿಟ್ಟನ್ನು ರಕ್ಷಿತ ಪಕ್ಷಿಧಾಮ ಎಂದು ಘೋಷಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದರು. ಇವರ ಸಲಹೆಯನ್ನು ಪರಿಗಣಿಸಿದ ಸರ್ಕಾರ ಕೇವಲ ಇಪ್ಪತ್ತೆಂಟು ಗಂಟೆಗಳಲ್ಲಿ ರಂಗನತಿಟ್ಟನ್ನು ಪಕ್ಷಿಧಾಮವನ್ನಾಗಿ ಘೋಷಿಸಿ ಆದೇಶ ಹೊರಡಿಸಿತ್ತು. ಅಲ್ಲಿಂದ ಇಲ್ಲಿಯ ತನಕ ಪಕ್ಷಿಧಾಮ ಹಲವು ರೀತಿಯಲ್ಲಿ ಅಭಿವೃದ್ದಿಯನ್ನು ಕಾಣುತ್ತಾ ಲಕ್ಷಾಂತರ ಪಕ್ಷಿಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಾ ಬಂದಿದೆ.
WD
ಪ್ರವಾಹ ನಿಯಂತ್ರಣ: ಕೆಲವು ವರ್ಷಗಳ ಹಿಂದೆ ಕಾವೇರಿ ಕಣಿವೆಯಲ್ಲಿ ಧಾರಾಕಾರ ಮಳೆ ಸುರಿದು ಕೆಆರ್ಎಸ್ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ಹೊರಬಿಟ್ಟಾಗ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಹ ಉಂಟಾಗಿ ಹಲವಾರು ಪಕ್ಷಿಗಳು ಕೊಚ್ಚಿ ಹೋಗಿದ್ದವು. ಆದರೆ ಈಗ ಪಕ್ಷಿಧಾಮದ ಪ್ಲಾಟ್ ಫಾರ್ಮ್‌ಗಳನ್ನು ಎತ್ತರಕ್ಕೇರಿಸಿ ಪ್ರವಾಹವನ್ನು ತಡೆಯಲಾಗಿದೆ. ಅಲ್ಲದೆ ನದಿ ತೀರದ ದೋಣಿ ಕೇಂದ್ರದುದ್ದಕ್ಕೂ ತಡೆಗೋಡೆಯನ್ನು ಎತ್ತರಕ್ಕೇರಿಸಲಾಗಿದೆ. ಪಕ್ಷಿಧಾಮದಲ್ಲಿ ವಿಹರಿಸಲು ಹಿಂದೆ ಚಪ್ಪಡಿ ಕಲ್ಲಿನ ಹಾದಿಯನ್ನು ನಿರ್ಮಿಸಲಾಗಿತ್ತಾದರೂ ಇದೀಗ ಚಪ್ಪಡಿ ಕಲ್ಲನ್ನು ತೆಗೆದು ಸಿಮೆಂಟ್ ಟೈಲ್ಸ್ ಬಳಸಿ ಆಧುನೀಕರಣಗೊಳಿಸಲಾಗಿದೆ. ನದಿ ನಡುವೆ ಬಂಡೆ ಕಲ್ಲುಗಳು ಹಾಗೂ ಮಣ್ಣನ್ನು ಹಾಕಿ ಕೃತಕ ನಡುಗಡ್ಡೆಯನ್ನು ನಿರ್ಮಿಸಿ ಹುಲ್ಲು ಹಾಗೂ ಮರಗಳನ್ನು ಬೆಳೆಸಲಾಗಿದೆ. ಇನ್ನು ಇಲ್ಲಿರುವ ಉದ್ಯಾನವನ ಹಾಗೂ ರಾಜರ ಕಾಲದಿಂದ ಇಲ್ಲಿರುವ ಕಲ್ಲಿನ ಮಂಟಪವನ್ನು ಆಧುನೀಕರಣಗೊಳಿಸಿ ಸುಂದರ ಶಿಲಾಕೃತಿಯ ಬಂಡೆಗಳಿಂದ ನಿರ್ಮಿಸಿದ ರಾಕ್ ಗಾರ್ಡನ್ ಆಕರ್ಷಣೀಯವಾಗಿದೆ.
-ಬಿ.ಎಂ.ಲವಕುಮಾರ್, ಮೈಸೂರು