ಕಾವೇರಿ ಕುಂಡ ನೋಡಿ ಮೇಲಿರುವ ಅಗಸ್ತ್ಯ ಮುನಿ ದೇವಾಲಯ ದರ್ಶಿಸಿ, ಮೆಟ್ಟಿಲುಗಳನ್ನು ಬಳಸಿ ಬ್ರಹ್ಮಗಿರಿಯ ತುತ್ತತುದಿಗೇರಿದರೆ, ಕೊಡಗಿನ ವಿಹಂಗಮ ನೋಟವೊಂದನ್ನು ಕಣ್ಣಲ್ಲಿ ತುಂಬಿಕೊಳ್ಳಬಹುದು. ಕಾಲು ಬಚ್ಚುತ್ತದೆಂಬ ಕುಂಟು ನೆಪ ಬೇಡ.
ವಿರಾಜಪೇಟೆಯಿಂದ 64 ಕಿ.ಮೀ ದೂರದಲ್ಲಿರು ನಾಗರ ಹೊಳೆ ರಾಷ್ಟ್ರದ ಪ್ರಥಮ ಅಭಯಾರಣ್ಯವಾಗಿದೆ. ಅರಣ್ಯ ಇಲಾಖೆಯು ಮುಂಜಾನೆ ಮತ್ತು ಸಾಯಂಕಾಲಗಳಲ್ಲಿ ಪ್ರವಾಸಿಗಳಿಗಾಗಿ ವಾಹನದಲ್ಲಿ ಸವಾರಿ ತೆರಳುತ್ತದೆ. ಕಾಡುಕೋಣ, ಜಿಂಕೆ, ನವಿಲು, ಆನೆ ಸೇರಿದಂತೆ ಕೆಲವು ಪ್ರಾಣಿಪಕ್ಷಿಗಳು ಕಾಣಸಿಗುವುದು ನಿಶ್ಚಿತ. ಅದೃಷ್ಟವಂತರು ನೀವಾಗಿದ್ದರೆ, ಒಂದು ಚಿರತೆ, ಹುಲಿ ಇಲ್ಲವೇ ಕಾಳಿಂಗ ಸರ್ಪದಂತ ಭಯಂಕರ ಜಂತುಗಳು ನಿಮಗೆದುರಾಗಬಹುದು.
ಇಷ್ಟಲ್ಲದೆ ಮಡಿಕೇರಿಯಿಂದ 20 ಕಿ.ಮೀ ದೂರದಲ್ಲಿರುವ ಚೆಟ್ಟಳ್ಳಿ ಫಾರ್ಮ್, 36 ಕಿ.ಮೀ ದೂರದಲ್ಲಿ ಕುಶಾಲನಗರ ಸಮೀಪದಲ್ಲಿರುವ ಕಾವೇರಿ ನಿಸರ್ಗಧಾಮ, 40 ಕಿ.ಮೀ ದೂರದಲ್ಲಿರುವ ಹಾರಂಗಿ ಅಣೆಕಟ್ಟು, ಕುಶಾಲನಗರದ ಬೈಲುಗುಪ್ಪೆಯಲ್ಲಿರುವ ಟಿಬೇಟಿಯನ್ ಕಾಲನಿ, ಅಲ್ಲಿರುವ ದೇವಾಲಯ ಎಲ್ಲವೂ ನೋಡುವಂತಹುದೇ.