ದಕ್ಷಿಣ ಕರ್ನಾಟಕದಲ್ಲಿ ಪೂರ್ವ ಘಟ್ಟಗಳ ಉತ್ತುಂಗ ಶಿಖರಗಳಲ್ಲೊಂದಾದ ಮಲೆ ಮಹದೇಶ್ವರ ಬೆಟ್ಟ, ನಿಸರ್ಗದ ಮಡಿಲಲ್ಲಿ ನೆಲೆಗೊಂಡಿರುವ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಕರ್ನಾಟಕದಲ್ಲಿ ಮಲೆಮಹದೇಶ್ವರ ಬೆಟ್ಟ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಸುತ್ತಮುತ್ತ ದಟ್ಟ ಅರಣ್ಯದ ಮಧ್ಯೆ ಸುಮಾರು 3ಸಾವಿರ ಅಡಿ ಎತ್ತರದ ನಡುಮಲೆಯಲ್ಲಿ ಪ್ರಶಾಂತ ಪರಿಸರದಲ್ಲಿ ಶ್ರೀಕ್ಷೇತ್ರ ಸೌಂದರ್ಯೋಪಾಸನೆ ದೃಷ್ಟಿಯಿಂದಲೂ ಪ್ರಮುಖ ಸ್ಥಳವಾಗಿದೆ.
ಕೊಳ್ಳೇಗಾಲದಿಂದ ಮಧುವನಹಳ್ಳಿ, ಸಿಂಗಾನಲ್ಲೂರು, ಹನೂರು ಮಾರ್ಗವಾಗಿ ಕೌದಳ್ಳಿ ತಲುಪಿದರೆ, ಅಲ್ಲಿಂದ ಬೆಟ್ಟಕ್ಕೆ 16ಕಿ.ಮೀ.ಕಾಡುದಾರಿ. ಮುಂದೆ ತಾಳಬೆಟ್ಟ ಎಂಬ ಬೆಟ್ಟದ ತಪ್ಪಲು ಸಿಗುತ್ತದೆ. ಮಹದೇಶ್ವರನ ಭಕ್ತರಾಗಿದ್ದ ಶ್ರೀ ಜಯಚಾಮರಾಜ ಒಡೆಯರು ಮತ್ತು ಶ್ರೀಕೃಷ್ಣರಾಜ ಒಡೆಯರು ತಾಳಬೆಟ್ಟದಿಂದ ಕಾಲ್ನಡಿಗೆಯಲ್ಲೇ ಬೆಟ್ಟವೇರಿ ಮಾದಯ್ಯನ ದರ್ಶನ ಮಾಡುತ್ತಿದ್ದರಂತೆ.
ಶ್ರೀಮಲೆಮಹದೇಶ್ವರ ಉತ್ಸವ ಮಹಾಶಿವರಾತ್ರಿ, ದಸರಾ, ದೀಪಾವಳಿ, ಯುಗಾದಿ, ಕಾರ್ತಿಕ ಸೋಮವಾರ ಮತ್ತು ಪ್ರತಿ ತಿಂಗಳು ಕೃಷ್ಣ ಪಂಚಮಿ ಚತುದರ್ಶಿಯಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಹುಲಿವಾಹನ, ವೃಷಭ ವಾಹನ ಮತ್ತು ರುದ್ರಾಕ್ಷಿ ಮಂಟಪ ಉತ್ಸವಗಳು ಮನ ಸೆಳೆಯುತ್ತವೆ.
ಇವರು ಈ ಸ್ಥಳದ ಮೂಲ ನಿವಾಸಿಗಳಾಗಿದ್ದು, ಸೋಲಿಗ, ಜೇನುಕುರುಬ, ಕಾಡುಕುರುಬ ಮುಂತಾದ ಪಂಗಡಗಳಿಗೆ ಸೇರಿದವರಾಗಿದ್ದಾರೆ. ಮಹದೇಶ್ವರರ ಪ್ರಭಾವದಿಂದ ಲಿಂಗಧಾರಣೆ ಮಾಡಿ ತಮ್ಮಡಿಗಳಾಗಿದ್ದಾರೆ. ಆನುಮಲೆ, ಜೇನುಮಲೆ, ಕುನುಮಲೆ, ಪಚ್ಚೆಮಲೆ, ಪವಳಮಲೆ, ಪೊನ್ನಾಚಿಮಲೆ ಮತ್ತು ಕೊಂಗುಮಲೆ ಮುಂತಾದ ಏಳು ಮಲೆಗಳಿಂದ ಕೂಡಿದ ಈ ದಟ್ಟಾರಣ್ಯವೇ ಇವರ ವಾಸಸ್ಥಳ.