ನಾಗರಹೊಳೆ ಅರಣ್ಯ ತುಂಬಾ ದಟ್ಟವಾಗಿದ್ದು, ಸದಾ ಹಸಿರಿನಿಂದ ಕೂಡಿರುತ್ತದೆ. ಇಲ್ಲಿ ವರ್ಷಪೂರ್ತಿ ನೀರಿರುವ ಅನೇಕ ಜಲಪಾತಗಳಿವೆ. ಈ ಅಭಯಾರಣ್ಯದಲ್ಲಿ ಆನೆ, ಕಡವೆ, ಕಾಡುಕೋಣ, ಚಿರತೆ, ಕಾಡುಬೆಕ್ಕು, ಬೊಗಳುವ ಜಿಂಕೆ, ಚುಕ್ಕೆ ಜಿಂಕೆ, ಹುಲಿ, ಕರಡಿ, ಕೆನ್ನಾಯಿ, ನರಿ ಮುಂತಾದ ಪ್ರಾಣಿಗಳು ಇಲ್ಲಿ ನಿರಾತಂಕವಾಗಿ ತಿರುಗಾಡುವುದನ್ನು ಕಾಣಬಹುದು.
ಪ್ರಾಣಿಗಳ ವೀಕ್ಷಣೆಗೆಂದೇ ನಾಗರಹೊಳೆಗೆ ದೇಶ-ವಿದೇಶಗಳಿಂದ ನೂರಾರು ಜನರು ಭೇಟಿ ನೀಡುತ್ತಾರೆ. ಅರಣ್ಯ ಇಲಾಖೆ ಪ್ರವಾಸಿಗರನ್ನು ಕಾಡಿನೊಳಗೆ ಕರೆದೊಯ್ದು ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಲು ಅನುಕೂಲ ಕಲ್ಪಿಸಿದೆ. ವಾಹನಗಳಲ್ಲಿ ಅಥವಾ ಆನೆಗಳ ಮೇಲೆ ಕುಳಿತು ಕಾಡಿನಲ್ಲಿ ಸಂಚರಿಸುತ್ತಾ ಅಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೆ ಹಿಂಡು-ಹಿಂಡಾಗಿ ತಿರುಗಾಡುವ ಕಾಡು ಪ್ರಾಣಿಗಳನ್ನು ಅವುಗಳ ಮೂಲ ನೆಲೆಯಲ್ಲೇ ನೋಡಿ ಆನಂದಿಸಬಹುದು. ಪ್ರಾಣಿಗಳನ್ನು ಹತ್ತಿರದಿಂದ ನೋಡಲು ಕಾಡಿನಲ್ಲಿ ವೀಕ್ಷಣಾಗೋಪುರಗಳನ್ನು ನಿರ್ಮಿಸಲಾಗಿದೆ.