ನೇತ್ರಾಣಿ ಇದೀಗ ಸ್ಕೂಬಾ ಡೈವಿಂಗ್ ತಾಣ...!

ಗುರುಮೂರ್ತಿ

ಮಂಗಳವಾರ, 9 ಜನವರಿ 2018 (18:44 IST)
ಸಮುದ್ರ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ ಕಡಲ ದಡದಲ್ಲಿ ಅಲೆಯ ಶಬ್ದವನ್ನು ಆಲಿಸಿ ನಡೆಯುವುದೇ ಒಂದು ಸಂಭ್ರಮ. ಅಬ್ಬರಿಸಿ ಬರುವ ಅಲೆಯೊಂದಿಗೆ ಆಟವಾಡುತ್ತ ಮುಸ್ಸಂಜೆಯ ಸಮಯವನ್ನು ಕಳೆಯುವುದು ಎಲ್ಲರಿಗೂ ಇಷ್ಟವೇ. ಅದನ್ನು ನೋಡಲೆಂದೇ ಸಾವಿರಾರು ಪ್ರವಾಸಿಗರು ಸಮುದ್ರವನ್ನು ನೋಡಲು ಬರುತ್ತಾರೆ. 
ದಡದಿ ನಿಂತು ನೋಡುವ ಪ್ರತಿಯೊಬ್ಬರೂ ಸಮುದ್ರದ ವಿಹಂಗಮ ನೋಟಕ್ಕೆ ಬೆರಗಾಗುವವರೇ, ಅಲ್ಲದೇ ಸಮುದ್ರದ ಆಳದಲ್ಲಿ ಏನಿರಬಹುದು ಎಂಬ ಕುತುಹಲ ಎಲ್ಲರಿಗೂ ಇರುವುದು ಸಾಮಾನ್ಯ. ಅದನ್ನು ಒಮ್ಮೆಯಾದರೂ ನೋಡಬೇಕು ಎನ್ನುವವರ ಸಂಖ್ಯೆಯೇನು ಇಂದು ಕಮ್ಮಿ ಇಲ್ಲ. ನಿಮಗೂ ಕಡಲ ತಳದಿ ಹೊಕ್ಕು ಅಲ್ಲಿನ ವಿಸ್ಮಯವನ್ನು ನೋಡಬೇಕು ಅನಿಸಿದರೆ ಈ ವರದಿ ನಿಮಗೆ ಉಪಯೋಗವಾಗಬಹುದು.
 
ಸ್ಕೂಬಾ ಡೈವಿಂಗ್ ಇದು ಸಮುದ್ರದಾಳಕ್ಕೆ ಆಕ್ಸಿಜನ್ ಸಿಲೆಂಡರ್‌ಗಳನ್ನು ಹಾಕಿಕೊಂಡು ಇಳಿಯುವ ಸಾಹಸಮಯ ಜಲಕ್ರೀಡೆ. ಇದರ ಕುರಿತು ಸಾಕಷ್ಟು ಜನರು ಓದಿರುತ್ತಾರೆ ಇಲ್ಲವೇ ಟಿವಿ ಮುಂತಾದವುಗಳಲ್ಲಿ ನೋಡಿರುತ್ತಾರೆ. ವಿದೇಶಗಳಲ್ಲಿ ಸಮುದ್ರಾಳದಲ್ಲಿ ಇಳಿದು ಒಳಗಿನ ಜೀವರಾಶಿಯನ್ನು ಚಿತ್ರಿಸುವುದು ಒಂದು ಹವ್ಯಾಸ ಅದನ್ನು ಟಿವಿಗಳಲ್ಲಿ ಯೂಟ್ಯೂಬ್ ಮುಂತಾದವುಗಳಲ್ಲಿ ನಾವು ನೋಡುತ್ತಿರುತ್ತೇವೆ. ಅಂತಹುದೇ ನಮ್ಮಲ್ಲೇ ಇದ್ದರೆ ನಾವು ಸಹ ಸಮುದ್ರದಾಳಕ್ಕೆ ಹೋಗಬಹುದಿತ್ತು ಎಂದೆಲ್ಲಾ ಅನಿಸುವುದು ಸಹಜವೇ.
ಹೌದು ಸ್ಕೂಬಾ ಡೈವಿಂಗ್ ನಮ್ಮಲ್ಲಿ ತುಂಬಾನೇ ವಿರಳ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇದರ ಕ್ರೇಜ್ ತುಂಬಾನೇ ಇದೆ. ಆದರೆ ನಮ್ಮಲ್ಲಿ ಸರಿಯಾದ ತರಬೇತಿ ಕೊರತೆಯಿಂದಾಗಿ ಸ್ಕೂಬಾ ಡೈವಿಂಗ್ ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಕಾಣಸಿಗುತ್ತದೆ, ಅವುಗಳೆಂದರೆ ಅಂಡಮಾನ್-ನಿಕೋಬಾರ್, ಪಾಂಡಿಚೇರಿ ಹಾಗೂ ಗೋವಾ. ಆದರೆ ಇದೀಗ ಅದನ್ನು ನಮ್ಮ ಕರ್ನಾಟಕದಲ್ಲೂ ಕಾಣಬಹುದಾಗಿದೆ. ನೀವು ಸಹ ಸ್ಕೂಬಾ ಡೈವಿಂಗ್‌ ಮಾಡಬೇಕು ಸಮುದ್ರದಾಳದಲ್ಲಿನ ಲೋಕವನ್ನು ಕಣ್ತುಂಬಿಕೊಳ್ಳಬೇಕು ಎಂದಾದರೆ ನೀವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಮುರುಡೇಶ್ವರದ ಸಮೀಪದಲ್ಲಿರುವ ನೇತ್ರಾಣಿಗೆ ಬರಬೇಕು.
 
ನೇತ್ರಾಣಿಯ ಒಡಲು
 
ಇದು ಒಂದು ಚಿಕ್ಕ ದ್ವೀಪವಾಗಿದ್ದು, ಹವಳದ ದಿಬ್ಬಗಳನ್ನು ಹೊಂದಿದೆ. ನೇತ್ರಾಣಿಯ ಪಕ್ಕದಲ್ಲಿಯೂ ಸಹ ಹಲವು ದ್ವೀಪಗಳಿದ್ದು ಭಾರತೀಯ ನೌಕಾಪಡೆಯಿಂದ ಗುರಿ ಅಭ್ಯಾಸಕ್ಕಾಗಿ ಬಳಸಲಾಗುತ್ತದೆ. ಖಾಲಿ ಗುಂಡುಗಳನ್ನು ನೇತ್ರಾಣಿ ಮತ್ತು ಪಕ್ಕದ ದ್ವೀಪದಲ್ಲಿ ನೀವು ಸಹ ಕಾಣಬಹುದು. ಮೊದಲು ಸೇನಾ ತರಬೇತಿಗಳನ್ನು ನೆಡೆಸುತ್ತಿದ್ದ ಕಾರಣ ಅಲ್ಲಿಗೆ ತೆರಳಲು ಅನುಮತಿಯ ಅಗತ್ಯವಿತ್ತು, ಆದರೆ ಇಂದು ಈ ಪ್ರದೇಶ ಪ್ರವಾಸಿಗರ ಸ್ವರ್ಗವಾಗಿದೆ. ಮೊದಲು ಈ ಪ್ರದೇಶಕ್ಕೆ ನಿರ್ಬಂಧ ಹೇರಲಾಗಿತ್ತು ಆದರೆ ಜಿಲ್ಲಾಡಳಿತವು ಇದೀಗ ಈ ಪ್ರದೇಶವನ್ನು ಪ್ರವಾಸಿತಾಣವಾಗಿ ಮಾಡಿದ್ದು ಇದರಿಂದ ಸಮುದ್ರದಾಳಕ್ಕೆ ಇಳಿದು ಅಲ್ಲಿನ ಸೌಂದರ್ಯವನ್ನು ನೋಡಲು ವೇದಿಕೆ ಕಲ್ಪಿಸಿದೆ.
ಈ ಸ್ಥಳವು ಸ್ಕೂಬಾ ಡೈವಿಂಗ್‌ಗೆ ಹೇಳಿ ಮಾಡಿಸಿದ ಜಾಗವಾಗಿದ್ದು ಸಮುದ್ರಕ್ಕೆ ನೀವು ಇಳಿಯುತ್ತಿದ್ದಂತೆ ನೀವು ಹಲವಾರು ರೀತಿಯ ಜಲಚರ ಜೀವರಾಶಿಯನ್ನು ಕಾಣಬಹುದಾಗಿದೆ. ಚಿಟ್ಟೆ ಮೀನು, ಬಂದೂಕು ಮೀನು, ಗಿಳಿ ಮೀನು, ಸಿಗಡಿಗಳು ಹೆಚ್ಚಾಗಿ ಈ ಸ್ಥಳದಲ್ಲಿ ಕಂಡುಬರುತ್ತವೆ. ಈ ಪ್ರದೇಶದಲ್ಲಿ ಓರ್ಕಾ ಮತ್ತು ತಿಮಿಂಗಲಗಳನ್ನು ಸ್ಕೂಬಾ ಡೈವಿಂಗ್ ಹೋದವರು ನೋಡಿರುವ ಉದಾಹರಣೆಯನ್ನು ನಾವು ಕಾಣಬಹುದಾಗಿದೆ. ಇಲ್ಲಿ ಮೀನುಗಳಷ್ಟೇ ಅಲ್ಲ ಸೂರ್ಯನ ಕಿರಣಗಳು ಸಮುದ್ರದ ಆಳವನ್ನು ಹೊಕ್ಕಾಗ ಅಡಿಯಲ್ಲಿ ಕಾಣಸಿಗುವ ಅದ್ಭುತ ಲೋಕ ಎಂತಹವರನ್ನಾದರೂ ಮನಸೂರೆಗೊಳ್ಳುವಂತೆ ಮಾಡುತ್ತದೆ. ಅಲ್ಲದೇ ಚಿಕ್ಕ ಪುಟ್ಟ ಬಂಡೆಗಳು ಕಡಿದಾದ ಮತ್ತು ಚೂಪಾಗಿರುವ ಕಲ್ಲುಗಳು ನೋಡುಗರನ್ನು ಚಕಿತಗೊಳಿಸುತ್ತದೆ. ನೇತ್ರಾಣಿ ಪಕ್ಕದಲ್ಲಿರುವ ಪಿಗೋನ್ ದ್ವೀಪದಲ್ಲೂ ಸಹ ಸ್ಕೂಬಾ ಡೈವಿಂಗ್ ಟ್ರಿಪ್ ಮಾಡಬಹುದಾಗಿದೆ.
 
ತಲುಪುವುದು ಹೇಗೆ:
 
ನೇತ್ರಾಣಿ ದ್ವೀಪವು ಕಾರವಾರದಿಂದ 130 ಕಿ.ಮೀ ದೂರದಲ್ಲಿದ್ದೂ, ಭಟ್ಕಳ ತಾಲೂಕಿನ ಮುರುಡೇಶ್ವರದ ಸಮೀಪವಿದೆ. ಮುರುಡೇಶ್ವರದಿಂದ ಸಮುದ್ರದ ತೀರದಿಂದ 1 ಗಂಟೆ 45 ನಿಮಿಷ 21 ಕಿ.ಮೀ ಸಮುದ್ರದಲ್ಲಿ ಪ್ರಯಾಣ ಮಾಡಿದರೆ ನೇತ್ರಾಣಿ ದ್ವೀಪವು ನಮ್ಮ ಕಣ್ಮುಂದೆ ಕಾಣಿಸಿಕೊಳ್ಳುತ್ತದೆ. ಇದು ನೋಡಲು ತುಂಬಾ ಆಕರ್ಷಣೀಯ ಸ್ಥಳವಾಗಿದ್ದು ಈ ದ್ವೀಪವು ಹೃದಯದ ಆಕಾರವನ್ನು ಹೊಂದಿರುವುದು ವಿಶೇಷ.
 
ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಹೋಗಲು ನಿಮಗೆ ನೇತ್ರಾಣಿ ಸ್ಕೂಬಾ ಅಡ್ವೆಂಚರ್ ಸಂಸ್ಥೆ ಮತ್ತು ವೆಸ್ಟ್ ಕೋಸ್ಟ್ ಅಡ್ವೆಂಚರ್ಸ್ ಕಂಪನಿ ಮತ್ತು ಮುಂಬಯಿ ವೆಸ್ಟ್ ಕೋಸ್ಟ್ ಸಂಸ್ಥೆ ಎಲ್ಲಾ ರೀತಿಯ ಸೌಕರ್ಯವನ್ನು ಮಾಡಿಕೊಡುತ್ತದೆ. ಇಲ್ಲಿರುವ ತರಬೇತಿದಾರರೊಂದಿಗೆ ನೀವು ಸ್ಕೂಬಾ ಡೈವಿಂಗ್ ಹೋಗಬಹುದು. ಅದಕ್ಕಾಗಿ ಪ್ರತಿ ವ್ಯಕ್ತಿಗೆ ರೂ. 5500 ಹಣವನ್ನು ನೀಡಬೇಕಾಗುತ್ತದೆ. ಅಲ್ಲದೇ ನಿಮಗೆ ಸಮುದ್ರದಡಿಯಲ್ಲಿ ಫೋಟೋ ತೆಗೆಸಿಕೊಳ್ಳಬೇಕು ಎಂದಾದರೆ ಪ್ರತಿ ವ್ಯಕ್ತಿಗೆ 500 ದರವನ್ನು ಸಂಸ್ಥೆಗೆ ನೀಡಬೇಕಾಗುತ್ತದೆ. ಈ ಪ್ರದೇಶದಲ್ಲಿ ನೀವೇ ಸ್ವತಃ ಸ್ಕೂಬಾ ಡೈವಿಂಗ್ ಹೋಗಲು ಅವಕಾಶವಿರುವುದಿಲ್ಲ. ಅಷ್ಟೇ ಅಲ್ಲ ನಿಮಗೆ ಬೇಕಾದ ಮಾಸ್ಕ್‌ಗಳು ಆಕ್ಸಿಜನ್ ಸಿಲೆಂಡರ್‌ಗಳು ಎಲ್ಲವನ್ನು ಅಲ್ಲಿರುವ ಸಂಸ್ಥೆ ನಿಮಗೆ ಒದಗಿಸುತ್ತದೆ. ಅಲ್ಲದೇ ನಿಮಗೆ ಈಜು ಬರದಿದ್ದರೂ ಸಹ ನೀವು ತರಬೇತಿದಾರರೊಂದಿಗೆ ಸಮುದ್ರಕ್ಕೆ ಇಳಿದು ಸಮುದ್ರದ ಅಡಿಯಲ್ಲಿರುವ ಪ್ರಪಂಚವನ್ನು ವೀಕ್ಷಿಸಬಹುದಾಗಿದೆ. 
 
ಯಾರಿಗೆ ನಿಷಿದ್ಧ
ಸ್ಕೂಬಾ ಡೈವಿಂಗ್ ಮಾಡಲು ಈಜು ಬರಬೇಕೆಂಬ ಯಾವುದೇ ಕಡ್ಡಾಯವಿರುವುದಿಲ್ಲ, ಹಾಗಾಗಿ ಸ್ಕೂಬಾ ಡೈವಿಂಗ್‌ಗೆ ಯಾರು ಬೇಕಾದರೂ ತೆರಳಬಹುದು. ಆದರೆ 10 ವರ್ಷಕ್ಕಿಂತಲೂ ಕಡಿಮೆ ವಯಸ್ಸು, ಆರೋಗ್ಯ ಸಮಸ್ಯೆ ಇರುವವರು, ಗರ್ಭಿಣಿ ಸ್ತ್ರೀಯರು ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಈ ಡೈವಿಂಗ್ ಅನ್ನು ನಿಷೇಧಿಸಲಾಗಿದೆ. ಅಲ್ಲದೇ ನೀವು ಸ್ಕೂಬಾ ಡೈವಿಂಗ್ ಹೋಗುವ ಮೊದಲು ನಿಮಗೆ ಈ ಮೇಲಿನ ಯಾವುದೇ ಸಮಸ್ಯೆಗಳಿಲ್ಲ ಎಂಬುದನ್ನು ನೀವು ಸಂಸ್ಥೆಗೆ ನೀಡುವ ದಾಖಲೆಯಲ್ಲಿ ಖಚಿತಪಡಿಸಬೇಕಾಗುತ್ತದೆ ತದನಂತರವಷ್ಟೇ ನೀವು ಡೈವಿಂಗ್‌ಗೆ ತೆರಳಬಹುದು.
 
ಊಟೋಪಚಾರ
ನೀವು ಸ್ಕೂಬಾ ಡೈವಿಂಗ್‌ಗೆ ಹೋಗಲು ಬಯಸಿದರೆ ನೀರು ತಿನಿಸುಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಏಕೆಂದರೆ ನಿಮಗೆ ನೇತ್ರಾಣಿ ತೀರದಲ್ಲಿ ಯಾವುದೇ ಉಪಹಾರದ ವ್ಯವಸ್ಥೆಗಳು ಲಭ್ಯವಿರುವುದಿಲ್ಲ. ನಿಮ್ಮನ್ನು ಅಲ್ಲಿಗೆ ಕರೆದೊಯ್ಯುವ ಸಂಸ್ಥೆಗಳು ಹಣ್ಣುಗಳು, ಬ್ರೆಡ್ ಮೊದಲಾದ ತಿನಿಸುಗಳನ್ನು ನೀಡಬಹುದು. ಆದರೆ ಅದನ್ನು ಖಚಿತಪಡಿಸಿಕೊಳ್ಳುವುದು ತುಂಬಾನೇ ಒಳ್ಳೆಯದು. ಅಲ್ಲದೇ ನೇತ್ರಾಣಿಯಲ್ಲಿ ನಿಮಗೆ ಉಳಿಯಲು ಯಾವುದೇ ಹೋಟೆಲ್‌ ಅಥವಾ ರೆಸಾರ್ಟ್ ‌ವ್ಯವಸ್ಥೆಗಳಿರುವುದಿಲ್ಲ. ಆದರೆ ನಿಮಗೆ ಮುರುಡೇಶ್ವರದಲ್ಲಿ ರೂಂಗಳು ಮತ್ತು ರೆಸಾರ್ಟ್‌ಗಳು ದೊರೆಯುತ್ತವೆ.
 
ಪೂರ್ವ ನೋಂದಣಿ ಮತ್ತು ಸಂಪರ್ಕ
ನೀವು ಸ್ಕೂಬಾ ಡೈವಿಂಗ್ ಹೋಗಲು ಬಯಸಿದರೆ, ನೀವು ಹೋಗುವ ದಿನಾಂಕಕ್ಕೆ ಮೊದಲು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ನಿಮ್ಮ ವಿವರಗಳೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಿ ಮುಂಗಡವಾಗಿ ಹಣವನ್ನು ಪಾವತಿಸಬೇಕು. ನಂತರ ಅವರು ಹೇಳಿದ ದಿನಾಂಕಕ್ಕೆ ನೀವು ಅಲ್ಲಿರುವಂತೆ ನಿಮ್ಮ ಪ್ರಯಾಣದ ಯೋಜನೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಇಲ್ಲವೇ ವೆಬ್‌ಸೈಟ್‌ನಲ್ಲಿರುವ ಫೋನ್ ಸಂಖ್ಯೆಗೆ ಕರೆಮಾಡಿ ನೀವು ಹೋಗುವ ದಿನಾಂಕಕ್ಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡ ನಂತರವಷ್ಟೇ ನೀವು ಅಲ್ಲಿಗೆ ತೆರಳುವುದು ಉತ್ತಮ.
 
ಜೀವನದಲ್ಲಿ ಏನಾದರೂ ಹೊಸತನ್ನು ಬಯಸುವವರು ಸಾಹಸ ಪ್ರವೃತ್ತಿಯುಳ್ಳವರಿಗೆ ಈ ಸ್ಥಳ ಹೇಳಿ ಮಾಡಿಸಿದ ಸ್ಥಳವಾಗಿದ್ದು, ಸಮುದ್ರ ಒಡಲ ರಮಣೀಯತೆಯನ್ನು ನೋಡುವುದರೊಂದಿಗೆ ವಿಭಿನ್ನ ಜೀವರಾಶಿಗಳೊಂದಿಗೆ ಬೆರೆಯುವ ಮನಸ್ಸು ನಿಮಗಿದ್ದಲ್ಲಿ ನೀವು ಒಮ್ಮೆ ಇಲ್ಲಿಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ