ಬೆಂಗಳೂರು: ಈ ವೀಕೆಂಡ್ ಸುದೀರ್ಘ ರಜೆಯಿದೆ. ಹೀಗಾಗಿ ಫ್ಯಾಮಿಲಿ ಸಮೇತ ಎಲ್ಲಾದರೂ ಪಿಕ್ನಿಕ್ ಹೋಗಬೇಕೆಂದು ಬಯಸಿದರೆ ನೀವು ಚುಂಚಿ ಫಾಲ್ಸ್ ಗೆ ಭೇಟಿ ಕೊಡಬಹುದು.
ಇದು ಮಳೆಗಾಲವಾಗಿದ್ದು ಜಲಪಾತಗಳು ಯಾವುದೇ ಇದ್ದರೂ ನೋಡಲು ನಯನಮನೋಹರವಾಗಿರುತ್ತದೆ. ಹಾಗಂತ ಜಲಪಾತಗಳಿಗೆ ಹೋದಾಗ ಸೆಲ್ಫೀ ಹುಚ್ಚಿನಲ್ಲಿ ಮೈ ಮರೆತು ಅಪಾಯ ಮೈಮೇಲೆಳೆದುಕೊಳ್ಳಬೇಡಿ. ಕೆಲವು ಫಾಲ್ಸ್ ಗಳನ್ನು ದೂರದಿಂದಲೇ ನೋಡಿ ಖುಷಿಪಟ್ಟರೇ ಚೆನ್ನ.
ಈ ವೀಕೆಂಡ್ ನೀವು ಭೇಟಿ ಕೊಡಬಹುದಾದ ಫಾಲ್ಸ್ ಗಳಲ್ಲಿ ಬೆಂಗಳೂರಿಗೆ ಸನಿಹವಿರುವ ಫಾಲ್ಸ್ ಎಂದರೆ ಚುಂಚಿ ಫಾಲ್ಸ್. ಇದು ಅರ್ಕಾವತಿ ನದಿ ನೀರಿನ ಫಾಲ್ಸ್ ಇದಾಗಿದೆ. ಬೆಂಗಳೂರಿನಿಂದ ಸುಮಾರು 83 ಕಿ.ಮೀ. ದೂರದಲ್ಲಿದೆ. ಮೇಕೆದಾಟಿಗೆ ಹೋಗುವ ದಾರಿಯಲ್ಲೇ ಈ ಫಾಲ್ಸ್ ಬರುತ್ತದೆ.
ಕಲ್ಲು ಗುಡ್ಡದ ನಡುವೆ ಅರ್ಕಾವತಿ ನದಿ ನೀರು ಹರಿದು ಹೋಗುವುದು ನೋಡಿದರೆ ಥೇಟ್ ಹೊಗೇನಕಲ್ ಫಾಲ್ಸ್ ನಂತೆಯೇ ಕಾಣುತ್ತದೆ. ಇದು ಪ್ರವಾಸಿಗರ ಫೇವರಿಟ್ ಪಿಕ್ನಿಕ್ ಸ್ಪಾಟ್ ಆಗಿದೆ. ಇಲ್ಲಿಗೆ ಎಂಟ್ರಿ ಫೀ ಎಂದು ಪ್ರತ್ಯೇಕ ಇಲ್ಲ. ವಾಹನ ಪಾರ್ಕಿಂಗ್ ಗಾಗಿ 30-50 ರೂ.ವರೆಗೆ ಚಾರ್ಜ್ ಮಾಡಲಾಗುತ್ತದೆ. ಇಲ್ಲಿಗೆ ಹೋಗುವ ದಾರಿ ಕೂಡಾ ಗುಡ್ಡ ಗಾಡಿನಿಂದ ಕೂಡಿದ್ದು ಅಲ್ಲಲ್ಲಿ ನಿಮ್ಮ ವಾಹನ ನಿಲ್ಲಿಸಿ ಸೆಲ್ಫೀ ತೆಗೆದುಕೊಳ್ಳಲು ಹೇಳಿ ಮಾಡಿಸಿದ ಜಾಗಗಳಿವೆ. ಮಳೆಗಾಲವಾಗಿರುವುದರಿಂದ ಚುಂಚಿ ಫಾಲ್ಸ್ ನಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿದ್ದು ಈಗ ಭೇಟಿ ನೀಡಲು ಬೆಸ್ಟ್ ಸಮಯವಾಗಿದೆ.
ನಿಮ್ಮದೇ ವಾಹನದಲ್ಲಿ ತೆರಳಿದರೆ ಸಮಯ ಉಳಿತಾಯವಾಗಲಿದೆ. ಬಸ್ ನಲ್ಲಿ ತೆರಳುವುದಿದ್ದರೆ ಕೆಆರ್ ಮಾರ್ಕೆಟ್ ನಿಂದ ಕನಕಪುರಕ್ಕೆ ಸಾಗುವ ಬಸ್ ನಲ್ಲಿ ತೆರಳಬೇಕು. ಕನಕಪುರದಿಂದ ಒಂದು ಆಟೋ ಮೂಲಕ ಚುಂಚಿ ಫಾಲ್ಸ್ ಗೆ ತೆರಳಬಹುದು. ಚುಂಚಿ ಫಾಲ್ಸ್ ತನಕ ಹೋಗುವ ಬಸ್ ಗಳು ವಿರಳವಾಗಿದೆ. ಫ್ಯಾಮಿಲಿ ಸಮೇತ ಹೋಗುವುದಿದ್ದರೆ ತಿಂಡಿ ಕಟ್ಟಿಕೊಂಡು ಹೋಗಿ ಅಲ್ಲೇ ಬೆಟ್ಟ ಗುಡ್ಡದ ನಡುವೆ ಕೂತು ಆಹಾರ ಸೇವನೆ ಮಾಡಬಹುದು.