ಚನ್ನಪಟ್ಟಣ ಬೈ ಎಲೆಕ್ಷನ್ ನಲ್ಲಿ ನಿಂತು ನಮ್ಮ ದುಡ್ಡು ಯಾಕೆ ವೇಸ್ಟ್ ಮಾಡ್ತೀರಿ: ಡಿಕೆ ಶಿವಕುಮಾರ್ ಗೆ ಜನರಿಂದ ತರಾಟೆ

Krishnaveni K

ಗುರುವಾರ, 20 ಜೂನ್ 2024 (14:10 IST)
ಬೆಂಗಳೂರು: ಎಚ್ ಡಿ ಕುಮಾರಸ್ವಾಮಿ ರಾಜೀನಾಮೆ ನೀಡಿದ ಬಳಿಕ ತೆರವಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ತಾನೇ ಸ್ಪರ್ಧಿಸುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಸುಳಿವು ನೀಡಿದ್ದಾರೆ. ಇದರ ಬೆನ್ನಲ್ಲೇ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಚನ್ನಪಟ್ಟಣಕ್ಕೆ ನಡೆಯುತ್ತಿರುವುದು ಉಪಚುನಾವಣೆ. ಡಿಕೆ ಶಿವಕುಮಾರ್ ಈಗಾಗಲೇ ಕನಕಪುರ ಕ್ಷೇತ್ರದ ಶಾಸಕರಾಗಿದ್ದಾರೆ. ಹೀಗಾಗಿ ಒಂದು ವೇಳೆ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರೆ ಡಿಕೆ ಶಿವಕುಮಾರ್ ಮತ್ತೆ ಒಂದು ಕ್ಷೇತ್ರವನ್ನು ಬಿಟ್ಟುಕೊಡಬೇಕಾಗುತ್ತದೆ.

ಆಗೊಂದು ವೇಳೆ ಅವರು ಚನ್ನಪಟ್ಟಣವನ್ನು ಆಯ್ಕೆ ಮಾಡಿದರೂ ಕನಕಪುರಕ್ಕೆ ಮತ್ತೊಮ್ಮೆ ಉಪ ಚುನಾವಣೆ ನಡೆಸಬೇಕಾಗುತ್ತದೆ. ಇದು ಸಾರ್ವಜನಿಕರ ಸಿಟ್ಟಿಗೆ ಕಾರಣವಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಡಿಕೆಶಿಯನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

ಈಗಾಗಲೇ ಶಾಸಕರಾಗಿರುವ ನೀವು ಉಪ ಚುನಾವಣೆ ನಿಂತು ಸೋತರೆ ನಮಗೆ ತೊಂದರೆಯಿಲ್ಲ. ಗೆದ್ದರೆ ಮತ್ತೊಮ್ಮೆ ಉಪ ಚುನಾವಣೆ ನಡೆಸಬೇಕಾಗುತ್ತದೆ. ಇದೇನು ಆಟವೇ? ಈ ರೀತಿ ಪದೇ ಪದೇ ಚುನಾವಣೆ ಮಾಡಲು ನಮ್ಮ ತೆರಿಗೆ ದುಡ್ಡು ಯಾಕೆ ದಂಡ ಮಾಡುತ್ತಿದ್ದೀರಿ? ನೀವು ಈಗಾಗಲೇ ಉಪಮುಖ್ಯಮಂತ್ರಿಯಾಗಿದ್ದೀರಿ. ಚನ್ನಪಟ್ಟಣದಲ್ಲಿ ಬೇರೆಯವರಿಗೆ ಅವಕಾಶ ಕೊಡಿ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ