ಪ್ರಕೃತಿ ಸೌಂದರ್ಯದ 'ತೊಣ್ಣೂರು'

ಶನಿವಾರ, 22 ನವೆಂಬರ್ 2014 (14:21 IST)
ಪಾಂಡವಪುರ ತಾಲೂಕಿನಲ್ಲಿರುವ ತೊಣ್ಣೂರು ನಿಸರ್ಗದ ಸೊಬಗನ್ನೆಲ್ಲ ತನ್ನಲ್ಲಿ ಹಿಡಿದಿಟ್ಟು ಪ್ರವಾಸಿಗರನ್ನು ಕೈಬೀಸಿ ಕರೆಯುವ ಪ್ರಾಕೃತಿಕ ಸೌಂದರ್ಯದ ಊರು. ಪ್ರಾಚೀನ ಗುಡಿಗಳು, ಮಂಟಪಗಳು ಮತ್ತು ಶಿಲಾಕೆತ್ತನೆಗಳ ಜೊತೆಗೆ ವಿಶಾಲವಾಗಿ ಹಬ್ಬಿರುವ 'ಮೋತಿ ತಲಾಬ್' ಕೆರೆಯೂ ಸೇರಿಕೊಂಡು ತೊಣ್ಣೂರಿನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.ಯದುಗಿರಿ ಬೆಟ್ಟಗಳ ದಕ್ಷಿಣ ತುದಿಯಲ್ಲಿ ನೆಲೆಗೊಂಡಿರುವ ಈ ಊರು ಸುಮಾರು ಹತ್ತು ಶತಮಾನಗಳ ಐತಿಹಾಸಿಕ, ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದೆ. 
 
ತೊಣ್ಣೂರಿನ ದೇವಾಲಯಗಳಲ್ಲಿ ನಂಬಿನಾರಾಯಣ ದೇವಾಲಯ ಪ್ರಸಿದ್ಧವಾಗಿದೆ. ಈಗ ಅದನ್ನು ಲಕ್ಷ್ಮೀನಾರಾಯಣ ದೇವಾಲಯ ಎಂದು ಕರೆಯುತ್ತಾರೆ. ಹೊಯ್ಸಳ ದೊರೆ ವಿಷ್ಣುವರ್ಧನ ತಲಕಾಡಿನಲ್ಲಿ ಚೋಳರ ವಿರುದ್ಧ ವಿಜಯ ಸಾಧಿಸಿದ ಕುರುಹಾಗಿ ಕಟ್ಟಿಸಿದ ಐದು ನಾರಾಯಣ ದೇವಾಲಯಗಳಲ್ಲಿ ಬೇಲೂರು(ವಿಜಯನಾರಾಯಣ), ತಲಕಾಡು(ಕೀರ್ತಿನಾರಾಯಣ), ಮೇಲುಕೋಟೆ(ಚಲುವನಾರಾಯಣ) ಮತ್ತು ಗದಗ್(ವೀರನಾರಾಯಣ) ಮುಂತಾದ ಸ್ಥಳಗಳಲ್ಲಿವೆ.
 
ಊರಿನ ಒಳಗೆ ಇರುವ ಈ ದೇವಾಲಯ ತೊಣ್ಣೂರಿನ ದೇವಾಲಯಗಳಲ್ಲೆ ಅತಿ ಪ್ರಾಚೀನವೂ, ದೊಡ್ಡದೂ ಆಗಿದೆ. ವಿಷ್ಣುವರ್ಧನನ ದಂಡನಾಯಕ ಸುರಗಿಯ ನಾಗಯ್ಯನಿಂದ 12ನೇ ಶತಮಾನದಲ್ಲಿ ಇದನ್ನು ಕಟ್ಟಿಸಲಾಗಿದೆ. ವಿಸ್ತಾರವಾದ ಪ್ರಾಕಾರದ ಮಧ್ಯೆ ನಿರ್ಮಿಸಲಾದ ಈ ದೇಗುಲ ಗರ್ಭಗುಡಿ, ನವರಂಗ, ಮುಖಮಂಟಪ ಹಾಗೂ ಪಾತಾಳಂಕಣ ಎಂಬ ಭಾಗಗಳನ್ನು ಹೊಂದಿದೆ.
 
ನಂಬಿನಾರಾಯಣ ದೇಗುಲದಿಂದ ಪೂರ್ವಾಭಿಮುಖವಾಗಿ ಒಂದು ಫರ್ಲಾಂಗ್ ದೂರದಲ್ಲಿರುವ 'ಕುಳಿತಿರುವ ಕೃಷ್ಣಸ್ವಾಮಿ' ದೇಗುಲ ತೊಣ್ಣೂರಿನ ಮತ್ತೊಂದು ಸುಂದರ ದೇವಾಲಯ. ಇದು ಹೊಯ್ಸಳ ಒಂದನೇ ನರಸಿಂಹನ ಕಾಲದಲ್ಲಿ ಕಾರೈಕುಡಿಯ ಕೊತ್ತಾಡಿ ದಂಡನಾಯಕನಿಂದ ಕ್ರಿ.ಶ.1158ರಲ್ಲಿ ನಿರ್ಮಿತವಾಗಿದೆ.
ತೊಣ್ಣೂರಿನ ಇನ್ನೊಂದು ಮುಖ್ಯ ಆಕರ್ಷಣೆ ಇಲ್ಲಿನ ಮೋತಿತಲಾಬ್(ಮುತ್ತಿನ ಕೆರೆ) ಕೆರೆ, ಈ ಕೆರೆಯಿಂದಾಗಿ ಊರನ್ನು ಕೆರೆತೊಣ್ಣೂರು ಎಂದೂ ಕರೆಯಲಾಗುತ್ತದೆ. ಈಗ ಮೇಲುಕೋಟೆಯಲ್ಲಿರುವ ಅಹೋಬಲ ಮಠದಲ್ಲಿರುವ ಕೃಷ್ಣನ ವಿಗ್ರಹ ರಾಮಾನುಜರಿಗೆ ಈ ಕೆರೆಯಲ್ಲಿ ಸಿಕ್ಕಿದ್ದು ಎಂದು ಪ್ರತೀತಿ.
 
ತೊಣ್ಣೂರಿನ ಕರೆ ಇತರ ಕೆರೆಗಳಂತಲ್ಲ, ಇಲ್ಲಿ ನಿಸರ್ಗವೇ ಬೆಟ್ಟಗುಡ್ಡಗಳಿಂದ ಕಟ್ಟಿ ನಿರ್ಮಿಸಿದೆ. ಈ ಕರೆಯ ನಿರ್ಮಾಣದಲ್ಲಿ ಮಾನವನ ಪಾಲು ಅಲ್ಪ, ಈ ಕೆರೆಯ ಇನ್ನೊಂದು ವೈಶಿಷ್ಟ್ಯವೆಂದರೆ ಇದರಲ್ಲಿ ಪಾಚಿ, ಕಳೆಗಳು ಬೆಳೆದು ನೀರನ್ನು ಕಲುಷಿತಗೊಳಿಸುವುದಿಲ್ಲ. ಕೆರೆಯ ನೀರು ಯಾವಾಗಲೂ ಗಂಗಾಜಲದಷ್ಟು ಸ್ವಚ್ಚ.
 
ಮೇಲುಕೋಟೆಗೆ ಆಗಮಿಸುವ ಪ್ರವಾಸಿಗರು ಸಮೀಪದಲ್ಲೇ ಇರುವ ತೊಣ್ಣೂರಿಗೆ ಭೇಟಿ ನೀಡಲು ಮರೆಯುವುದಿಲ್ಲ. ಬೆಂಗಳೂರು, ಮೈಸೂರು ಪ್ರದೇಶಗಳಲ್ಲಿರುವವರಿಗೆ ವಾರಾಂತ್ಯ ಪ್ರವಾಸಕ್ಕೆ ಯೋಗ್ಯ ತಾಣ ತೊಣ್ಣೂರು.
 
ಮಾರ್ಗ: ತೊಣ್ಣೂರು ಮೈಸೂರಿನಿಂದ 30ಕಿ.ಮೀ. ಹಾಗೂ ಬೆಂಗಳೂರಿನಿಂದ 130ಕಿ.ಮೀ. ದೂರದಲ್ಲಿದೆ. ಮೈಸೂರಿನಿಂದ ಶ್ರೀರಂಗಪಟ್ಟಣ ಪಾಂಡವಪುರ ಮಾರ್ಗವಾಗಿ ಹಾಗೂ ಬೆಂಗಳೂರಿನಿಂದ ಮಂಡ್ಯ, ಪಾಂಡವಪುರ ಮಾರ್ಗವಾಗಿ ಇಲ್ಲಿಗೆ ತಲುಪಲು ಬಸ್ ಸೌಕರ್ಯವಿದೆ. ಸದ್ಯಕ್ಕೆ ಇಲ್ಲಿ ಯಾವುದೇ ಫಲಹಾರ ಮಂದಿರಗಳಿಲ್ಲ. ಬರುವಾಗ ಜೊತೆಯಲ್ಲೇ ಊಟೋಪಚಾರದ ವ್ಯವಸ್ಥೆ ಮಾಡಿಕೊಂಡು ಬರುವುದು ಉತ್ತಮ.
ಕೃಪೆ:ಐ.ಸೇಸುನಾಥನ್

ವೆಬ್ದುನಿಯಾವನ್ನು ಓದಿ