ಬನ್ನಿ ಮಾರಾಯ್ರೆ ಒಮ್ಮೆ ಮಂಗ್ಳೂರಿಗೆ...

ರಾಜ್ಯದ ದಕ್ಷಿಣಕ್ಕಿರುವ ದಕ್ಷಿಣ ಕನ್ನಡ ಜಿಲ್ಲೆಗೊಮ್ಮೆ ಬಂದು ಹೋಗಿಯಲ್ಲ. ಇಲ್ಲಿ ನಿಮಗೆ ನೋಡಲು ಬೇಕಾದಷ್ಟುಂಟು!

ಅವಿಭಿಜಿತ ದಕ್ಷಿಣ ಕನ್ನಡ ದೇವಾಲಯಗಳ ತೊಟ್ಟಿಲು. ಸುಪ್ರಸಿದ್ಧ ದೇವಸ್ಥಾನಗಳಾದ ಧರ್ಮಸ್ಥಳ, ಸುಬ್ರಮಣ್ಯ, ಕಟೀಲು, ಉಡುಪಿ, ಕೊಲ್ಲೂರು, ಆನೆಗುಡ್ಡೆ, ಮಂಗಳಾದೇವಿ, ಶರವು, ಕದ್ರಿ, ಕುದ್ರೋಳಿ, ಪೊಳಲಿ, ಕುಡುಪು, ಕಾರಿಂಜೇಶ್ವರ, ನರಹರಿಪರ್ವತ, ಪಂಜದಲ್ಲಿರುವ ಪಂಚಲಿಂಗೇಶ್ವರ, ಪುತ್ತೂರು ಮಹಾಲಿಂಗೇಶ್ವರ, ಮೂಲ್ಕಿಯ ಬಪ್ಪನಾಡು ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳನ್ನು ಹೊಂದಿದೆ.

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಹಾಗೂ ಜೈನ ಮತಗಳ ಸುಪ್ರಸಿದ್ಧ ಧಾರ್ಮಿಕ ಸ್ಥಳಗಳುಅವಿಭಜಿತ ದಕ್ಷಿಣ ಕನ್ನಡದ ಮಡಿಲಲ್ಲಿವೆ. ಇಷ್ಟುಮಾತ್ರವಲ್ಲ, ದಕ್ಷಿಣ ಕನ್ನಡ ಬ್ಯಾಂಕಿಂಗ್ ಮತ್ತು ಶಿಕ್ಷಣ ಕ್ಷೇತ್ರದಲ್ಲೂ, ಹೋಟೆಲ್ ಸೇರಿದಂತೆ ಇತರ ಉದ್ಯಮಗಳಲ್ಲೂ ಸುಪ್ರಸಿದ್ಧ. ರಾಷ್ಟ್ರೀಕೃತ ಬ್ಯಾಂಕುಗಳಾದ ಸಿಂಡಿಕೇಟ್, ವಿಜಯಾ, ಕಾರ್ಪೋರೇಶನ್ ಮತ್ತು ಕೆನರಾ ಬ್ಯಾಂಕುಗಳ ತವರು ಕೂಡಾ ಹೌದು.

ಇದರೊಂದಿಗೆ, ಅರಬ್ಬೀ ಸಮುದ್ರದ ಕಿನಾರೆಯಲ್ಲಿರುವ ಈ ಜಿಲ್ಲೆಯಲ್ಲಿ ರಮಣೀಯ ಬೀಚುಗಳೂ ಇವೆ. ಬೆಳ್ತಂಗಡಿ ತಾಲೂಕಿನಲ್ಲಿರುವ ಪುರಾಣಪ್ರಸಿದ್ಧ ಧರ್ಮಸ್ಥಳ ದೇವಸ್ಥಾನ ರಾಷ್ಟ್ರಾದ್ಯಂತ ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ. ಸಿರಿವಂತ ದೇವಾಲಯವೆಂಬ ಪ್ರತೀತಿಗೆ ಒಳಗಾಗಿರುವ ದೇವಸ್ಥಾನ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಅನುಕೂಲಗಳನ್ನು ಒದಗಿಸಿ ಕೊಡುವಲ್ಲಿ ಮಾದರಿ ಎನಿಸಿದೆ. ಶ್ರೀಮಂಜುನಾಥ ಧರ್ಮಸ್ಥಳದಲ್ಲಿ ಮುಖ್ಯದೇವರು. ಇಲ್ಲಿನ ಹೆಸರೇ ಸೂಚಿಸುವಂತೆ ಇಲ್ಲಿ ಊಟ, ವಸತಿ ಎಲ್ಲವೂ ಧರ್ಮಾರ್ಥವೆ.

ಇಲ್ಲಿನ ಮಂಜೂಷಾ ವಸ್ತು ಸಂಗ್ರಾಹಾಲಯ, ಅಣ್ಣಪ್ಪ ಬೆಟ್ಟ, ಎಲ್ಲವನ್ನೂ ಕಳೆದು ಸ್ಥಿತ ಪ್ರಜ್ಞತೆಯಿಂದ ನಿಂತಿರುವ ಗೊಮ್ಮಟನ ಭವ್ಯ ಮೂರ್ತಿ ಸೇರಿದಂತೆ ನೋಡಲು ಬೇಕಷ್ಟು ಸ್ಥಳಗಳಿವೆ. ಇಲ್ಲಿಗೆ ಸಮೀಪದ ಕನ್ನಾಡಿ ಎಂಬಲ್ಲಿನ ರಾಮ ದೇವಾಲಯವು ಭವ್ಯವಾಗಿದೆ.ಧರ್ಮಸ್ಥಳ ಜಿಲ್ಲಾ ಕೇಂದ್ರ ಮಂಗಳೂರಿನಿಂದ 75 ಕಿ. ದೂರದಲ್ಲಿದೆ.

ಜಿಲ್ಲೆಯ ಇನ್ನೊಂದು ಸುಪ್ರಸಿದ್ಧ ದೇವಾಲಯ ಸುಬ್ರಹ್ಮಣ್ಯದಲ್ಲಿರುವ ಕುಕ್ಕೆ ಶ್ರೀ ಸುಬ್ರಮಣ್ಯ ದೇವಾಲಯ. ಸುಳ್ಯ ತಾಲೂಕಿನಲ್ಲಿರುವ ಈ ದೇವಾಲಯ ರಾಷ್ಟ್ರಾದ್ಯಂತ ಭಕ್ತರನ್ನು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ನಾಗದೋಷವಿರುವವರು ಇಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ.

ತಾಲೂಕಿನ ತೊಡಿಕಾನದಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಾಸ್ಥಾನವೂ ಪುರಾಣ ಪ್ರಸಿದ್ಧ. ದೇವಾಲಯದ ಪ್ರವೇಶದ ಎಡಭಾಗದಲ್ಲಿರುವ ಯಜ್ಞದ ಕುಂಡದಲ್ಲಿ ಪೌರಾಣಿಕ ಕಾಲದಲ್ಲಿ ಯಜ್ಞನಡೆಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಇಲ್ಲಿನ ದೇವರ ಮೀನುಗಳು ಪ್ರಮುಖ ಆಕರ್ಷಣೆ. ಚರ್ಮ ರೋಗವಿರುವವರು ಇಲ್ಲಿನ ಮೀನುಗಳಿಗೆ ಅಕ್ಕಿ ಹಾಕಿದಲ್ಲಿ ರೋಗ ವಾಸಿಯಾಗುತ್ತದೆ ಎಂಬ ನಂಬುಗೆ ಇದೆ.

ಅತ್ತ ಉಡುಪಿಯಾಚೆಗೆ ಹೋದರೆ ಅಲ್ಲಿಯೂ ಹಲವು ದೇವಾಲಯಗಳಿವೆ. ಭಕ್ತಕನಕ ದಾಸರಿಗೆ ದರ್ಶನ ನೀಡಲು ಶ್ರೀ ಕೃಷ್ಣ ಪರಮಾತ್ಮನೇ ತಿರುಗಿ ನಿಂತ ಸ್ಥಳವಿದು. ಇದರ ಕುರುಹಾಗಿರುವ ಕನಕನ ಕಿಂಡಿಯನ್ನು ಇಲ್ಲಿ ನೋಡಬಹುದು. ಕನಕ ದಾಸರಲ್ಲದೆ, ಚೈತನ್ಯ, ಪುರಂದರದಾಸರಂತಹ ಸಂತರೂ ಇಲ್ಲಿಗೆ ಭೇಟಿ ನೀಡಿದ್ದಾರೆ.

ಕಾಣಿಯೂರು, ಪೇಜಾವರ, ಅದಮಾರು, ಫಲಿಮಾರು, ಕೃಷ್ಣಾಪುರ, ಪುತ್ತಿಗೆ, ಸೋದೆ ಹಾಗೂ ಶಿರೂರು- ಈ ಅಷ್ಟಮಠಗಳು ಇಲ್ಲಿವೆ. ಉಡುಪಿಯ ಸಮೀಪದಲ್ಲಿರುವ ಮಣಿಪಾಲ ಶೈಕ್ಷಣಿಕವಾಗಿ ಮತ್ತು ವೈದ್ಯಕೀಯವಾಗಿ ಅಂತಾರಾಷ್ಟ್ರೀಯ ಭೂಪಟದಲ್ಲಿ ಗುರುತಿಸಿಕೊಂಡಿದೆ.ಮೂಡಬಿದ್ರೆಯ ಸಾವಿರ ಕಂಬದ ಬಸದಿ, ಕೊಡ್ಯಡ್ಕದ ಅನ್ನಪೂರ್ಣೇಶ್ವರಿ ದೇವಸ್ಥಾನವನ್ನು ನೀವು ನೋಡದೆ ಹೋದಲ್ಲಿ ನಿಮ್ಮ ಪ್ರವಾಸ ಸಂಪೂರ್ಣಗೊಳ್ಳುವುದಿಲ್ಲ.
ಇವಿಷ್ಟು ಮಂಗಳೂರ ಸುತ್ತಮತ್ತಲ ಊರುಗಳ ಸ್ಥಳಗಳಾಯ್ತು.

ಮಂಗಳೂರಿನಲ್ಲಿಯೇ ನೀವು ನೋಡಲು ಬೇಕಾದಷ್ಟು ಸ್ಥಳಗಳಿವೆ. ಮಂಗಳೂರು ಬಸ್ ನಿಲ್ದಾಣದಿಂದ ಆರು ಕಿ.ಮೀ ದೂರದ ಬೋಳೂರಿನಲ್ಲಿರುವ ಸುಲ್ತಾನ್ ಬತ್ತೇರಿ ಐತಿಹಾಸಿಕ ಮಹತ್ವದ್ದು. ಯುದ್ಧ ಹಡಗುಗಳ ಮೇಲೆ ಕಣ್ಣಿರಿಸಲು ಟಿಪ್ಪು ಸುಲ್ತಾನ್ ಇದನ್ನು ಕಟ್ಟಿಸಿರುವುದಾಗಿ ಇತಿಹಾಸ ಹೇಳುತ್ತದೆ. ಬಸ್ ನಿಲ್ದಾಣದಿಂದ ಒಂದು ಕಿ.ಮೀ ದೂರದಲ್ಲಿರುವ ಸೈಂಟ್ ಅಲೋಷಿಯಸ್ ಚರ್ಚ್ ನೋಡದಿದ್ದರೆ ನಿಮ್ಮ ಕಣ್ಮನಗಳಿಗೆ ದೊಡ್ಡ ನಷ್ಟ. 1899-1900ರ ಕಾಲದಲ್ಲಿ ನಿರ್ಮಾಣವಾಗಿರುವ ಈ ಚಾಪೆಲ್ ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇದರ ಒಳಗಡೆ ಛಾವಣಿ ಮತ್ತು ಗೋಡೆಗಳ ತುಂಬ ಇಟಲಿ ಕಲಾವಿದ ರೂಪಿಸಿರುವ ವರ್ಣಚಿತ್ರಗಳು ಅತ್ಯಾಕರ್ಷಕವಾಗಿವೆ.

ಅಲೋಷಿಯಸ್ ಕಾಲೇಜಿನ ಪಕ್ಕದಲ್ಲಿರುವ ಲೈಟ್ ಹೌಸ್ ಹಿಲ್ ಅಥನಾ ಬಾವುಟಗುಡ್ಡೆ ಉದ್ಯಾನವನದ ಕಲ್ಲುಬೆಂಚಿನಲ್ಲಿ ಕುಳಿತು ನೀವು ಸೂರ್ಯಾಸ್ತಮಾನದ ದೃಶ್ಯವನ್ನು ನೋಡಬಹುದು. ಇಲ್ಲಿ ಕುಳಿತರೆ ಸಮುದ್ರ ನಿಮ್ಮ ಕಣ್ಣೆಗೆಟಕುತ್ತದೆ.

ನಗರದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಸೀಮಂತಿ ಬಾಯ್ ಮ್ಯೂಸಿಯಮ್‌ನಲ್ಲಿ ಅಪೂರ್ವ ಸಂಗ್ರಹಗಳಿವೆ. ನಗರದಿಂದ ಐದು ಕಿ.ಮೀ ದೂರದಲ್ಲಿರುವ ಕದ್ರಿ ಪಾರ್ಕ್ ಸಾಯಂಕಾಲದ ಗಾಳಿ ಸೇವನೆಗೆ ಉತ್ತಮವಾಗಿದೆ. ಪಿಲಿಕುಳ ನಿಸರ್ಗಧಾಮ ಮಂಗಳೂರಿನ ಇನ್ನೊಂದು ಆಕರ್ಷಣೆ. ಉದ್ಯಾನವನ, ಮೃಗಾಲಯ, ಹಾಗೂ ಜಲೋದ್ಯಾನವನ್ನೂ ಹೊಂದಿರುವ ಪಿಲಿಕುಳದಲ್ಲಿ ಸಮಯ ಹೋದುದೇ ತಿಳಿಯುವುದಿಲ್ಲ.

ಬೋಟಿಂಗ್ ಹೋಗಬೇಕಿದ್ದರೆ, ನಗರದಿಂದ ಸುಮಾರು ಹತ್ತು ಕಿ.ಮೀ ದೂರದಲ್ಲಿನ ಕೂಳೂರಿಗೆ ಹೋಗಬಹುದು.ತೊಕ್ಕೊಟ್ಟು ಸಮೀಪವಿರುವ ಉಳ್ಳಾಲ ದರ್ಗಾಕ್ಕೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. 1958ರಲ್ಲಿ ನಿರ್ಮಿಸಲಾಗಿರುವ ಈ ದರ್ಗಾದಲ್ಲಿ ನಡೆಯು ಉರೂಸ್ ಸುಪ್ರಸಿದ್ಧ.ನಗರದೊಳಗೆಯೇ ಇರುವ ಶರವು ಗಣಪತಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನ, ಕದ್ರಿ ಮಂಜುನಾಥ ದೇವಾಲಯಗಳಿಗೆ ಭೇಟಿ ನೀಡಿ.

ಇಷ್ಟಾದ ಮೇಲೆ ಮಂಗಳೂರಿಗೆ ಹೋದ ನೀವು ಬೀಚ್‌ಗೆ ಭೇಟಿ ನೀಡದಿದ್ದರೆ ಹೇಗೆ. ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ, ಸಮ್ಮರ್ ಸ್ಯಾಂಡ್ಸ್, ಸುರತ್ಕಲ್, ಮುಕ್ಕಾ ಬೀಚ್‌ಗಳೆಲ್ಲ ಮಂಗಳೂರು ನಗರದ ಆಸುಪಾಸಿನಲ್ಲಿದ್ದರೆ, ಸುಮಾರು 50 ಕಿ.ಮೀ ದೂರದಲ್ಲಿರುವ ಕಾಪು ದೀಪಸ್ತಂಭ, ಉಡುಪಿಯಿಂದ ಐದು ಕೀ.ಮೀ ದೂರದಲ್ಲಿರುವ ಮಲ್ಪೆ ಬೀಚ್, ಸೈಂಟ್ ಮೇರೀಸ್ ದ್ವೀಪ, ಕುಂದಾಪುರ ಸಮೀಪದ ಮರವಂತೆ ಬೀಚ್‌ಗಳೆಲ್ಲವೂ ಪ್ರವಾಸಿಗರ ಹೃನ್ಮನಗಳನ್ನು ತಣಿಸುತ್ತವೆ.

ಇಲ್ಲಿ ಕನ್ನಡ, ತುಳು ಕೊಂಕಣಿ ಮತ್ತು ಬ್ಯಾರಿ ಭಾಷೆಗಳೊಂದಿಗೆ ಇತರ ಭಾಷೆಗಳೂ ನಿಮ್ಮ ಕಿವಿಗೆ ಬೀಳಬಹುದು. ವೇಗಾವಾಗಿ ಸಾಗುವ ಸಿಟಿಬಸ್‌ಗಳಲ್ಲಿ ಪ್ರಯಾಣಿಸುವುದಿದ್ದರೆ ಕೊಂಚ ಜಾಗೃತೆ. ವಿಪರೀತ ಸ್ಫರ್ಧೆಯ ಈ ಖಾಸಗೀ ಬಸ್‌ಗಳು ಎಲ್ಲೆಂದರಲ್ಲಿ ನುಗ್ಗುತ್ತಾ ಅತಿ ವೇಗದಿಂದ ಹಾರುತ್ತವೆ. ಈ ಬಸ್ಸಿಗೆ ನೀವು ಕಾಲಿಡುತ್ತಲೇ, ರೈಟ್.... ಪ್ಹೋಯಿ.... ಎಂಬ ರೈಟ್ ನೊಂದಿಗೆ ವಿಷಲ್‌ಗಳ ಬೊಬ್ಬೆಯೇ ಬಸ್ಸನ್ನಾಳುತ್ತಿರುತ್ತದೆ. ಆದರೆ ಇಲ್ಲಿ ಇರುವ ಬಸ್ ಸೇವೆ ಮಾತ್ರ ಬೇರೆಡೆ ಸಿಗುವುದು ವಿರಳ. ಪ್ರತೀ ನಿಮಿಷಕ್ಕೊಂದು ಬಸ್‌ಗಳು ಓಡಾಡುತ್ತಿದ್ದು, ನಿಮ್ಮ ಗಡಿಯಾರವೇನಾದರು ನಿಂತಿದ್ದರೆ ಈ ಬಸ್‌ಗಳ ಸಮಯಕ್ಕೆ ತಕ್ಕಂತೆ ಅದನ್ನು ಹೊಂದಿಸಿಕೊಳ್ಳಬಹುದು.

ಇಷ್ಟೆಲ್ಲ ಇರುವ, ಈ ಕನ್ನಡ ಭಾಷೆಯ ಮಂಗಳೂರು, ಕೊಂಕಣಿ ಭಾಷೆಯ ಕೊಡಿಯಾಲ, ತುಳುವಿನ ಕುಡ್ಲ, ಬ್ಯಾರಿ ಭಾಷೆಯ ಮೈಕಲ, ಮಲಯಾಳಂನ ಮಂಗಳಾಪುರಕ್ಕೊಮ್ಮೆ ಬಂದು ಹೋಗಿ.

ಚಂದ್ರಾವತಿ ಬಡ್ಡಡ್ಕ

ವೆಬ್ದುನಿಯಾವನ್ನು ಓದಿ