ಹೊನ್ನಾವರ ಮತ್ತು ಭಟ್ಕಳದ ನಡುವಿದೆ ಮುರುಡೇಶ್ವರ. ರಾಷ್ಟ್ರೀಯ ಹೆದ್ದಾರಿಯಿಂದ ಒಂದು ಕಿ.ಮೀ ದೂರದಲ್ಲಿರುವ ಸಮುದ್ರ ಕಿನಾರೆಯ ಸುಂದರ ಪವಿತ್ರ ತಾಣವಿದು. ಪೂರ್ವಕ್ಕೆ ಗೋಪುರಗಟ್ಟಿರುವ ಬೆಟ್ಟಗಳು, ಪಶ್ಚಿಮದಲ್ಲಿ ಭೋರ್ಗರೆಯುತ್ತಿರುವ ಸಮುದ್ರ ಇದರ ನಡುವಿನ ದೇವಾಲಯ ಭಕ್ತರನ್ನು ಮತ್ತು ಪ್ರವಾಸಿಗಳನ್ನು ಆಕರ್ಷಿಸುತ್ತದೆ.
ಮುರುಡೇಶ್ವರ ದೇವಾಲಯದ ಐತಿಹ್ಯ ರಾಮಾಯಣ ಕಾಲದೊಂದಿಗೆ ಥಳುಕು ಹಾಕಿಕೊಂಡಿದೆ. ಇಂದ್ರ ಸೇರಿದಂತೆ ದೇವಾನುದೇವತೆಗಳು ಆತ್ಮಲಿಂಗವನ್ನು ಪೂಜಿಸುವ ಮೂಲಕ ಅಮರತ್ವ ಪಡೆಯುತ್ತಿದ್ದರು. ಹಾಗಾಗೂ ತಾನೂ ಅಮರತ್ವವನ್ನು ಪಡೆಯಬೇಕೆಂದು ಲಂಕಾ ರಾಜ ರಾವಣನಿಗೆ ಆತ್ಮಲಿಂಗವನ್ನು ಪೂಜಿಸುವ ಇಚ್ಚೆ ಉಂಟಾಯಿತು.
ಶಿವನಿಂದ ಆತ್ಮಲಿಂಗ ಪಡೆಯಲು ರಾವಣ ಶಿವಧ್ಯಾನ ಮಾಡಿದ. ರಾವಣನ ಪ್ರಾರ್ಥನೆಯಿಂದ ಸಂತುಷ್ಠನಾದ ಶಿವ ಪ್ರತ್ಯಕ್ಷವಾಗಿ ಏನು ವರಬೇಕು ಎಂದು ಕೇಳಿದ. ರಾವಣ ಕೇಳಿದ ವರವನ್ನು ಕರುಣಿಸಲು ಮುಂದಾದ ಶಿವಪರಮಾತ್ಮ ಶರತ್ತೊಂದನ್ನು ಮುಂದಿಟ್ಟು ವರಪಾಲಿಸುವುದಾಗಿ ಹೇಳಿದ. ಯಾವುದೇ ಕಾರಣಕ್ಕೂ ಲಿಂಗವನ್ನು ನೆಲದಲ್ಲಿರಿಸಬಾರದು,
ನೆಲದಲ್ಲಿರಿಸಿದುದೇ ಆದರೆ, ಅದು ಅಲ್ಲೇ ಅಂಟಿಕೊಳ್ಳುತ್ತದೆ ಎಂಬ ಎಚ್ಚರಿಕೆಯೊಂದಿಗೆ ರಾವಣ ಬೇಡಿದ ವರವನ್ನು ಕರುಣಿಸಿದ. ವರಪಡೆದ ರಾವಣ ಲಂಕಾದತ್ತ ತನ್ನ ಮರು ಪ್ರಯಾಣ ಬೆಳೆಸಿದ.
ಶಿವಪರಮಾತ್ಮ ರಾವಣನಿಗೆ ಆತ್ಮಲಿಂಗ ನೀಡಿದ ವಿಚಾರ ನಾರದ ಮುನಿಗಳಿಗೆ ತಿಳಿಯಿತು. ರಾಮಣನೇನಾದರೂ ಅಮರತ್ವವನ್ನು ಪಡೆದುದೇ ಆದಲ್ಲಿ ಭೂಲೋಕದಲ್ಲಿ ಅನಾಹುತ ಸೃಷ್ಟಿಸಿಯಾನೆಂಬ ಭೀತಿಯಿಂದ ಆತ್ಮಲಿಂಗವು ಲಂಕಾ ತಲುಪದಂತೆ ಹೇಗಾದರೂ ತಡೆಯಬೇಕು ಎಂದು ವಿಷ್ಣುವನ್ನು ಕೇಳಿಕೊಂಡರು.
ರಾವಣನೊಬ್ಬ ಕಟ್ಟುನಿಟ್ಟಿನ ಉಪಾಸಕನಾಗಿದ್ದು, ಏನೇ ಆದರೂ ಸಂಧ್ಯಾವಂದನೆಯನ್ನು ತಪ್ಪಿಸುವವನಲ್ಲ ಎಂದು ತಿಳಿದಿತ್ತು. ಹಾಗೂ ಗಣಪತಿ ದೇವರ ಸಹಾಯದೊಂದಿಗೆ ಸಂಚು ಹೂಡಿ ವಿಷ್ಣು, ರಾವಣ ಲಿಂಗದೊಡನೆ ಗೋಕರ್ಣ ಸಮೀಪಿಸುತ್ತಲೇ ಸೂರ್ಯನಿಗೆ ಅಡ್ಡಬಂದು ಸಂಜೆಯಾದಂತೆ ತೋರುವಂತೆ ಮಾಡಿದ. ಸಂಜೆಯಾಯಿತೆಂದು ಭಾವಿಸಿದ ರಾವಣ ಕೈಯಲ್ಲಿ ಲಿಂಗ ಹಿಡಿದು ಸಂಧ್ಯಾವಂದನೆ ಮಾಡುವಂತಿಲ್ಲವೆಂದು ಚಿಂತಾಕ್ರಾಂತನಾದ. ಅಷ್ಟರಲ್ಲಿ ಬ್ರಾಹ್ಮಣ ವಟುವಿನ ವೇಷದಲ್ಲಿ ಅಲ್ಲಿ ಸುಳಿದಾಡುತ್ತಿದ್ದ,
ಗಣಪತಿ ರಾವಣನ ಕಣ್ಣಿಗೆ ಬಿದ್ದಿದ್ದು, ಆತ್ಮಲಿಂಗವನ್ನು ಸಂಧ್ಯಾವಂದನೆ ಪೂರ್ಣಗೊಳ್ಳುವ ತನಕ ಹಿಡಿದುಕೊಳ್ಳುವಂತೆ ವಿನಂತಿಸಿ ನೆಲದಲ್ಲಿರಿಸದಂತೆ ಕೇಳಿಕೊಂಡ. ಇದಕ್ಕೆ ಪ್ರತಿಯಾಗಿ ಗಣಪತಿ, ಲಿಂಗವೇನಾದರೂ ಭಾರವಾದರೆ ಮೂರು ಬಾರಿ ರಾವಣನನ್ನು ಕೂಗಿ ಲಿಂಗವನ್ನು ನೆಲದಲ್ಲಿರಿಸುವುದಾಗಿ ಹೇಳಿದ.
ರಾವಣ ಸಂಧ್ಯಾವಂದನೆ ಪೂರೈಸುವ ಮುನ್ನವೇ, ಗಣಪತಿ ರಾವಣನನ್ನು ಮೂರು ಬಾರಿ ಕೂಗಿ ಲಿಂಗವನ್ನು ನೆಲದಲ್ಲಿರಿಸಿದ. ಇದಾದಬಳಿಕ ವಿಷ್ಣು ಕತ್ತಲಿನ ಭ್ರಮೆಯನ್ನು ಹೋಗಲಾಡಿಸಿದ. ಅಷ್ಟರಲ್ಲಿ ದೇವತೆಗಳ ಸಂಚನ್ನು ಅರಿತುಕೊಂಡ ರಾವಣ ಕೋಪೋದ್ರಿಕ್ತನಾಗಿದ್ದು, ಲಿಂಗವನ್ನು ಬುಡಮೇಲು ಮಾಡಲು ಯತ್ನಿಸಿದನಾದರೂ ಸಫಲವಾಗಲಿಲ್ಲ. ಸಿಟ್ಟು ತಣಿಯದ ರಾವಣ ಲಿಂಗದ ಕವಚವನ್ನು ಎಸೆದ. ಕೊನೆಗೆ ಲಿಂಗಕ್ಕೆ ಮುಚ್ಚಿದ್ದ ಬಟ್ಟೆಯನ್ನೂ ಎಸೆದಿದ್ದು, ಅದು ಕಂಡುಕ ಬೆಟ್ಟದ ಮೃದೀಶ್ವರದಲ್ಲಿ ಬಂದು ಬಿದ್ದಿತ್ತು. ಅದು ಕ್ರಮೇಣ ಮುರುಡೇಶ್ವರವಾಯಿತು.
ಮುರುಡೇಶ್ವರದಲ್ಲಿರುವ 123 ಅಡಿ ಎತ್ತರದ ಶಿವನ ಭವ್ಯ ಮೂರ್ತಿ ಅತೀ ದೂರಕ್ಕೆ ಕಾಣುತ್ತಿದ್ದು, ಇದು ಜಗತ್ತಿನಲ್ಲೇ ಅತೀ ಎತ್ತರದ ಶಿವವಿಗ್ರಹವಾಗಿದೆ. 10 ದಶ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮೂರ್ತಿಯನ್ನು ಶಿವಮೊಗ್ಗದ ಕಾಶಿನಾಥ ಮತ್ತು ಅವರ ಪುತ್ರ ಶ್ರೀಧರ್ ಅವರು ಇನ್ನಿತರ ಹಲವಾರು ಶಿಲ್ಪಿಗಳ ನೆರವಿನಿಂದ ಕಡೆದಿದ್ದಾರೆ. ದೇವಾಲಯದ ಎದುರಿಗೆ 20 ಅಂತಸ್ತಿನ ಬಹು ಎತ್ತರದ ಗೋಪುರವನ್ನು ನಿರ್ಮಿಸಲಾಗಿದೆ.