ಸೊಬಗಿನ ಗಿರಿವನಗಳ ಹಸಿರಿನ ಬೀಡಿದು ಕೊಡಗು

WD
ಭಾರತದ ಸ್ಕಾಟ್‌ಲ್ಯಾಂಡ್, ದಕ್ಷಿಣದ ಕಾಶ್ಮೀರ ಎಂಬೆಲ್ಲ ಉಪಮೆಗಳನ್ನು ಹೊತ್ತುಕೊಂಡ ಕೊಡಗು ಕರ್ನಾಟಕದ ಪುಟ್ಟ ಜಿಲ್ಲೆ. ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಮಲಗಿರುವ ಕೊಡಗು ತಂಪು ಹವೆಯ ರಮಣೀಯ ನಾಡು. ಈ ಕೊಡಗಿಗೆ ನೀವು ಒಮ್ಮೆ ಬಂದಿರಾದರೆ, ಮತ್ತೊಮ್ಮೆ ಕೊಡಗೇ ನಿಮ್ಮನ್ನು ಕರೆಯುತ್ತದೆ.

ಬೆಂಗಳೂರಿನಿಂದ 252 ಕಿ.ಮೀ ದೂರದಲ್ಲಿರುವ ಕೊಡಗಿನ ಮೂಲ ಹೆಸರು ಕೊಡೈಮಲೆನಾಡು. ಇಬ್ಬನಿ ಸುರಿಸುವ ಬೆಟ್ಟಗಳು, ದಟ್ಟಾರಣ್ಯ, ಎಕರೆಗಟ್ಟಲೆ ಕಾಫಿ, ಚಹಾ ತೋಟಗಳು, ಮಧ್ಯೆ ಕಿತ್ತಳೆ, ಮುಸಂಬಿಯ ಘಮ. ಹಾವಿನಂತೆ ಬಳುಕಿ ಮಲಗಿರುವ ರಸ್ತೆಗಳು ಇವೆಲ್ಲವೂ ಕೊಡಗನ್ನು ಮರೆಯದಂತೆ ಮಾಡುತ್ತವೆ. ಇಲ್ಲಿನ ಹವಾಮಾನ ಬ್ರಿಟೀಷರನ್ನು ಹಿಡಿದಿಟ್ಟಿತ್ತು.

ರಾಜಾ ಸೀಟ್, ಗದ್ದಿಗೆ, ಕೋಟೆ, ಓಂಕಾರೇಶ್ವರ ದೇವಸ್ಥಾನ ಕೊಡಗು ಜಿಲ್ಲಾಕೇಂದ್ರವಾದ ಮಡಿಕೇರಿಯಲ್ಲಿದೆ.ಹಿಂದಿನ ಕಾಲದಲ್ಲಿ ರಾಜರುಗಳು ಸಂಜೆಗಳನ್ನು ಕಳೆಯುತ್ತಿದ್ದ ತಾಣ ರಾಜಾ ಸೀಟ್. ಸುಂದರ ಉದ್ಯಾನವನದ ಇಲ್ಲಿ ಕುಳಿತರೆ ನಿಸರ್ಗ ಸೃಷ್ಟಿಯ ನೈಸರ್ಗಿಕ ಕಲಾಕೃತಿ ಕಣ್ಣಮುಂದೆ ಮೂಡುತ್ತದೆ. ಇಲ್ಲಿ ಕುಳಿತು ಸೂರ್ಯಾಸ್ತಮಾನದ ಸೊಭಗನ್ನು ಸವಿಯುವ ಚಂದವೇ ಬೇರೆ.

ಮಡಿಕೇರಿಯ ಮಹದೇವ ಪೇಟೆಯಲ್ಲಿರುವ ಎತ್ತರದ ದಿಣ್ಣೆಯಲ್ಲಿ ದೊಡ್ಡ ವೀರ ರಾಜೇಂದ್ರ, ಅವರ ಪತ್ನಿ ಹಾಗೂ ಲಿಂಗರಾಜೇಂದ್ರರ ಸಮಾಧಿಗಳಿವೆ. ಇಲ್ಲಿನ ವಾಸ್ತು ವೈಶಿಷ್ಠ್ಯತೆ ನೋಡುಗರನ್ನು ಸೆಳೆಯುತ್ತದೆ. ಇಲ್ಲಿಗೆ ಹೆಸರೇ ಗದ್ದಿಗೆ.

ಮಡಿಕೇರಿ ಪಟ್ಟಣದಿಂದ ಸುಮಾರು ಏಳು ಕಿಮೀ ದೂರದಲ್ಲಿರುವ ಅಬ್ಬೀ ಜಲಪಾತ ಭಲೇ ಭಲೇ ಎಂಬ ಉದ್ಗಾರ ಹೊರಡಿಸುತ್ತದೆ. ತಿರುವು ಮುರುವುಗಳು, ಏರು ತಗ್ಗುಗಳ ರಸ್ತೆ ಮೂಲಕ ಸಾಗಿದಾಗ ಸಿಗುವ 70 ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತ ಕಾಫಿ ತೋಟಗಳ ಮಧ್ಯೆ ಖಾಸಗೀ ಜಮೀನಿನೊಳಗೆ ನೆಲೆಗೊಂಡಿದೆ.
ಇದಲ್ಲದೆ, ವಿರಾಜಪೇಟೆಯಿಂದ ಸುಮಾರು 50 ಕಿ.ಮೀ ದೂರದಲ್ಲಿ ಇರ್ಪು ಎಂಬಲ್ಲಿ ಇನ್ನೊಂದು ಜಲಪಾತವಿದೆ.

ಚಂದ್ರಾವತಿ ಬಡ್ಡಡ್ಕ

ವೆಬ್ದುನಿಯಾವನ್ನು ಓದಿ