ಜನವರಿ 16ರಂದು ತೆರೆ ಕಾಣಲಿರುವ 'ಚಾಂದ್ನಿ ಚೌಕ್ ಟು ಚೀನಾ' ಚಿತ್ರದಲ್ಲಿ ನಿರ್ದೇಶಕ ನಿಖಿಲ್ ಅಡ್ವಾಣಿ ಸಾಹಸ, ಸಸ್ಪೆನ್ಸ್, ಕಾಮಿಡಿ, ಡ್ಯಾನ್ಸ್.. ಹೀಗೆ ಮನರಂಜನೆಗೆ ಬೇಕಾದ ಎಲ್ಲಾ ಸರಕನ್ನೂ ಕಟ್ಟಿಕೊಟ್ಟಿದ್ದಾರಂತೆ. ಭಾರೀ ಪ್ರಚಾರ ಪಡೆಯುತ್ತಿರುವ ಚಿತ್ರದ ಬಗ್ಗೆ ಈಗಾಗಲೇ ನಿರೀಕ್ಷೆಗಳು ಎತ್ತರದಲ್ಲಿವೆ. ಅಕ್ಷಯ್ ಕುಮಾರ್ ಜತೆ ದೀಪಿಕಾ ಪಡುಕೋಣೆ ಸೇರಿದ್ದಾಳೆಂದ ಮೇಲೆ ನಿರೀಕ್ಷೆಗಳು ಕೂಡ ಸಹಜ.
IFM
ಇದು ಆತ್ಮವಿಶ್ವಾಸಕ್ಕೆ ಸಂಬಂಧಿಸಿದ ಕಥೆ. ಪ್ರೇಕ್ಷಕರು ಎರಡೂವರೆ ಗಂಟೆಗಳ ಕಾಲ ಅನುಭವಿಸುವಷ್ಟು ಹಳೆ ಬಾಲಿವುಡ್ ಚಿತ್ರಗಳ ಶೈಲಿಯ ಮಸಾಲೆ ಚಿತ್ರದಲ್ಲಿದೆ ಎಂದು ನಾನು ಭರವಸೆ ಕೊಡಬಲ್ಲೆ ಎಂದು ಚಿತ್ರದ ಬಗ್ಗೆ ಮಾತನಾಡುತ್ತಾ ನಿರ್ದೇಶಕ ನಿಖಿಲ್ ಅಡ್ವಾಣಿ ತಿಳಿಸಿದ್ದಾರೆ.
ಇಲ್ಲಿ ಅಕ್ಷಯ್ ಕುಮಾರ್‌ನದ್ದು ಭಾರತೀಯ ಅಡುಗೆದಾರ ಸಿದ್ಧು ಪಾತ್ರ. ಚೀನಾಕ್ಕೆ ಹೋಗುವ ಸಿದ್ಧು ಅಲ್ಲಿ ಎದುರಿಸುವ ತಾಪತ್ರಯಗಳನ್ನು ತಮಾಷೆ ಮತ್ತು ಸಾಹಸಯುತವಾಗಿ ಬಿಂಬಿಸುವುದೇ ಚಿತ್ರದ ಹೈಲೈಟ್. ಗ್ಲಾಮರಸ್ ಇಮೇಜಿಗೆ ತಕ್ಕಂತೆ ದೀಪಿಕಾ ಪಡುಕೋಣೆ ಇದ್ದಾರೆ. ಹಳೆ ಹುಲಿ ಮಿಥುನ್ ಚಕ್ರವರ್ತಿ ಅಕ್ಷಯ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.
IFM
ಸಿದ್ಧು ದೆಹಲಿಯ ಚಾಂದಿನಿ ಚೌಕ್‌ನಲ್ಲಿನ ಕೆಳಸ್ತರದ ವ್ಯಾಪಾರಿ. ರಸ್ತೆ ಬದಿಯ ಕಿಚಿಡಿ ಹೊಟೇಲಿನಲ್ಲಿ ತರಕಾರಿ ಹಚ್ಚುವುದು ಅವನ ಮುಖ್ಯ ಕೆಲಸ. ಈ ಗುಲಾಮಗಿರಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿರುತ್ತಾನೆ. ಅದಕ್ಕಾಗಿ ಸಿದ್ಧು ಜ್ಯೋತಿಷಿಗಳು, ಗಿಣಿ ಶಾಸ್ತ್ರಕಾರರು ಮತ್ತು ನಕಲಿ ಫಕೀರರ ಬಳಿ ಸುಳಿದಾಡುತ್ತಾನೆ. ತನಗಿಂತ ಇತರರ ಮೇಲೆ ಹೆಚ್ಚು ನಂಬಿಕೆ ಹೊಂದಿರುವ ವ್ಯಕ್ತಿತ್ವ ಸಿದ್ಧುವಿನದು. ಈ ನಿಟ್ಟಿನಲ್ಲಿ ತಂದೆ ದಾದಾ ಮಾಡಿದ ಯತ್ನಗಳೂ ವಿಫಲವಾಗುತ್ತವೆ. ಇಂಥಾ ಹೊತ್ತಿನಲ್ಲಿ ಚೀನಾದಿಂದ ಬಂದ ಇಬ್ಬರು ಅಪರಿಚಿತರು ಸಿದ್ಧುವನ್ನು ಬಂಧ ಮುಕ್ತಗೊಳಿಸಿ ತಮ್ಮ ದೇಶಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ಹೇಗ್ಹೇಗೋ ಮಾರ್ಷಲ್ ಆರ್ಟ್ಸ್ ಬಗ್ಗೆ ತಿಳಿದುಕೊಂಡು ಕಥೆ ಮುಂದುವರಿಯುತ್ತದೆ. ಚೀನಾದಲ್ಲಿ ನಡೆಯುವ ಅಪರಾ ತಪರಾಗಳು ಚಿತ್ರದಲ್ಲಿ ಮುಖ್ಯ ಪಾತ್ರ ಪಡೆಯುತ್ತವೆ.
IFM
ದೀಪಿಕಾ ಪಡುಕೋಣೆ ಅಕ್ಷಯ್ ಕುಮಾರ್‌ನ ಪ್ರೇಯಸಿ ಎಂದು ಬೇರೆ ಹೇಳಬೇಕಾಗಿಲ್ಲ. ಇಲ್ಲಿ ಆಕೆಯದ್ದು ದ್ವಿಪಾತ್ರ. ಚೀನೀ ಹುಡುಗಿಯ ಮಿಯಾವ್ ಮಿಯಾವ್ ಪಾತ್ರ ಭಿನ್ನವಾಗಿ ಮೂಡಿ ಬಂದಿದೆ ಎನ್ನುವುದು ಚಿತ್ರತಂಡದ ಮಾತು. ಶಾಂಘೈ ನಗರ, ಚೀನಾದ ಮಹಾಗೋಡೆ ಮುಂತಾದೆಡೆ ಚಿತ್ರೀಕರಿಸಲಾಗಿದೆ. ಸಾಹಸ ದೃಶ್ಯಗಳು, ಹಾಸ್ಯ ಮತ್ತು ಸೆಂಟಿಮೆಂಟ್ ಎಲ್ಲವೂ ಹದವಾಗಿ ಮಿಶ್ರಣವಾಗಿದ್ದು ಜನಮನ ಸೆಳೆಯುವಲ್ಲಿ ಸಫಲವಾಗಲಿದೆ ಎನ್ನುವುದು ನಿರ್ದೇಶಕರ ಅಂಬೋಣ.