ರೇ ಆಚಾರ್ಯ ಒಬ್ಬ ಫೋಟೋಗ್ರಾಫರ್. ಏನು ಮಾಡಿದರೂ ಸರಿಯಾಗದ ಯಾವತ್ತೂ ಹೆಣಗಾಡುತ್ತಿರುವ ವ್ಯಕ್ತಿ. ಆದರೆ ತನ್ನ ಅಜ್ಜನಿಂದ ಬಳುವಳಿಯಾಗಿ 'ವಿಶೇಷ' ಕ್ಯಾಮರಾವೊಂದು ಸಿಗುವವರೆಗೆ ಮಾತ್ರ ಈ ಎಲ್ಲಾ ಕಷ್ಟಗಳು. ಆ ವಿಶೇಷ ಕ್ಯಾಮರಾ ರೇಯ ಬದುಕಿನ ದಿಕ್ಕನ್ನೇ ಬದಲಿಸುತ್ತದೆ. ರಾತ್ರೋ ರಾತ್ರಿ ಆತ ಕಂಡ ಕನಸುಗಳೆಲ್ಲ ನನಸಾಗುತ್ತದೆ.
ಏರಿಳಿತದ ಬದುಕಿನಲ್ಲಿ ಸಾಗುತ್ತಿದ್ದವನಿಗೆ ವಿಚಿತ್ರ ಅನುಭವ. ಕಷ್ಟಗಳೆಲ್ಲ ಮಾಯವಾಗಿ ಅದೃಷ್ಟ ಖುಲಾಯಿಸಿದ್ದು ವೃತ್ತಿ ಬದುಕಿನಲ್ಲಿ ಮಾತ್ರವಲ್ಲ. ಎಲ್ಲಾ ವಿಭಾಗಗಳಲ್ಲೂ ಆತನದ್ದೇ ಕಾರುಬಾರು. ಹರಕುಬಟ್ಟೆಯಲ್ಲಿದ್ದ ರೇ ಶ್ರೀಮಂತನಾಗುತ್ತಾನೆ. ಜತೆಗೆ ಸೆಕ್ಸೀ ಡಿಜೆ ಸಿಮಿ ಕೂಡ ಈತನಿಗೊಲಿಯುತ್ತಾಳೆ. ಆ ನಂತರ ಆತನದ್ದು ಸುಖೀ ಜೀವನ.
ಉನ್ನತವಾದುವುಗಳು ನಮ್ಮತ್ತ ಬಂದಾಗ ಜವಾಬ್ದಾರಿ ಕೂಡ ಅದೇ ಮಟ್ಟದಲ್ಲಿರುತ್ತದೆ ಎನ್ನವುದು ರೇ ವಿಚಾರದಲ್ಲಿಯೂ ನಿಜವಾಗುತ್ತದೆ- ಜತೆಗೆ ಅದು ಅಪಾಯಕಾರಿ ಕೂಡ. ಆತನಿಗೀಗ ನೈಜತೆಯ ಮತ್ತೊಂದು ಭಾಗದ ಅನುಭವ. ತನ್ನ ವಿರೋಧಿಗಳ ಜತೆ ಹೋರಾಡುವುದಲ್ಲದೆ ವಿಧಿಯೊಂದಿಗೆ ಕಾಳಗಕ್ಕಿಳಿಯಬೇಕಾದ ಅನಿವಾರ್ಯತೆ ರೇ ಪಾಲಿಗೊಲಿಯುತ್ತದೆ.
'ಆ ದೇಖೇ ಝರಾ' ಒಂದು ಸಂಗೀತಮಯ ಪ್ರೇಮಕಥೆಯುಳ್ಳ ಚಿತ್ರ. ನಿಮ್ಮನ್ನು ಸೀಟಿನ ತುದಿಯವರೆಗೆ ತಂದು ನಿಲ್ಲಿಸುವ ಸನ್ನಿವೇಶಗಳು ಚಿತ್ರದಲ್ಲಿವೆ. ಕೊನೆಗೂ ರೇ ವಿಧಿಯಾಟದಲ್ಲಿ ಗೆಲುವು ಸಾಧಿಸುತ್ತಾನಾ ಎಂಬ ಪ್ರಶ್ನೆಗೆ ಉತ್ತರ - 'ಆ ದೇಖೇ ಝರಾ'.
ಚಿತ್ರದ ಪ್ರಮುಖ ತಾರಾಗಣದಲ್ಲಿ ನೀಲ್ ನಿತಿನ್ ಮುಖೇಶ್, ಮತ್ತು ಬಿಪಾಶಾ ಬಸು ನಟಿಸಿದ್ದರೆ, ರಾಹುಲ್ ದೇವ್‌ರದ್ದು ಅದೇ ಖಳನ ಪಾತ್ರ. ಸಿನಿಮಾದ ನಿರ್ದೇಶಕರು ಜೆಹಾಂಗೀರ್ ಸುರ್ತಿ- ಇದೇ ಮೊದಲ ಬಾರಿಗೆ ತೆರೆಯ ಹಿಂದಿನಿಂದ ಸೂತ್ರಧಾರನೆನಿಸಿಕೊಂಡಿದ್ದಾರೆ. ಸಂಗೀತ ಪ್ರೀತಮ್ ಮತ್ತು ಗೌರವ್ ದಾಸ್‌ಗುಪ್ತಾರದ್ದು. ಚಿತ್ರದ ಇದೇ ಮಾರ್ಚ್ 27ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.