ಹದಿಹರೆಯದ ಹೊಯ್ದಾಟದ ಮನಸ್ಸಿನ ಕನ್ನಡಿ ತೇರೇ ಸಂಗ್

IFM
ಮಾಹಿ (ಶೀನಾ ಶಹಬಾದಿ) ಪುರಿ ಕುಟುಂಬಕ್ಕೆ ಒಬ್ಬಳೇ ಮುದ್ದು ಮಗಳು. ಚೆಂದದ ಮುದ್ದುಮುದ್ದಾಗಿರುವ ಆಕೆಗೆ ಈಗಿನ್ನೂ 15 ವಯಸ್ಸು. ಇರೋದು ದೆಹಲಿಯಲ್ಲಿ. ಒಂದು ಉತ್ತಮ ಕುಟುಂಬಕ್ಕೆ ಸೇರಿದ ಆಕೆಗೆ ಉತ್ತಮ ವಿದ್ಯಾಭ್ಯಾಸ ನೀಡುತ್ತಿರುವುತ್ತಾರೆ ಆಕೆಯ ಹೆತ್ತವರು. ಕಬೀರ್‌ (ರಸ್ಲಾನ್ ಮುಮ್ತಾಜ್)ಗೆ ವಯಸ್ಸು 17. ಆತನೊಬ್ಬ ಟಿಪಿಕಲ್ ಸಾಧಾರಣ ಕುಟುಂಬದಿಂದ ಬಂದವನು. ಮಧ್ಯಮವರ್ಗದ ಮನೆಯಲ್ಲಿರುವ ಆತ ಸಮಾಜದ ಕೆಳಸ್ತರದವನು. ಸ್ವಲ್ಪ ಹಠಮಾರಿ. ನಿರ್ಲಕ್ಷ್ಯದ ಸ್ವಭಾವ. ಪ್ರೀತಿ, ಪ್ರೇಮ ಆತನ ತಲೆಯಲ್ಲಿದ್ದರೂ ಆತ ರೊಮ್ಯಾಂಟಿಕ್ ಅಲ್ಲ.

IFM
ಎಲ್ಲ ಯುವ ಹದಿಹರೆಯದವರಂತೆ ಮಾಹಿ ಹಾಗೂ ಕಬೀರ್ ಫ್ರೆಂಡ್‍‌ಗಳಾಗುತ್ತಾರೆ. ಮಾಹಿಗೆ ಕಬೀರ್ನ ಸಿಟಿಯಿಂದ ದೂರವಿರುವ ಮನೆ, ಆತನ ಲೈಫ್ ಅಂದರೆ ತುಂಬ ಇಷ್ಟ. ಆದರೆ, ಕಬೀರ್‌ಗೆ ಮಾಹಿಯ ಸಿಟಿ ಲೈಫ್ ತುಂಬ ಇಷ್ಟ. ಆಕೆಯ ಲಕ್ಷೂರಿಯಸ್ ಜೀವನ ಇಷ್ಟ. ಹೀಗೆ ಅವರಿಬ್ಬರ ಗೆಳೆತನ ಗೆಳೆತನವನ್ನೂ ಮೀರಿ ಬೆಳೆಯುತ್ತದೆ. ಹೊಸವರ್ಷದ ಸಂದರ್ಭ ಗೆಳೆಯರೆಲ್ಲ ನಡೆಸಿದ ಕ್ಯಾಂಪಿಂಗ್ ಟ್ರಿಪ್‌ನಲ್ಲಿ ಈ ಇಬ್ಬರೂ ಗೆಳೆಯರು ಸ್ವಲ್ಪ ಹೆಚ್ಚೇ ಹತ್ತಿರವಾಗುತ್ತಾರೆ. ಅದು ಮಿತಿಯನ್ನೂ ದಾಟುತ್ತದೆ. ಈ ಮಿತಿ ದಾಟಿದ ಘಳಿಗೆಯ ಫಲವಾಗಿ ಮಾಹಿ ಗರ್ಭಿಣಿಯಾಗುತ್ತಾಳೆ. ಆಕೆಗೆ ಆಗ ಕೇವಲ 15 ವಯಸ್ಸು.

ಜೀವನದಲ್ಲಿ ಆಗಿಹೋದ ಒಂದೇ ಒಂದು ತಪ್ಪನ್ನು ಒಪ್ಪಿಕೊಳ್ಳುವ ಹಗ್ಗಜಗ್ಗಾಟದ ಕೌಟಂಬಿಕ ಕಥೆಯಲ್ಲಿ ಹದಿಹರೆಯದವರು ಸಿಕ್ಕಿಹಾಕಿಕೊಳ್ಳುವ ಆತುರದ ಘಳಿಗೆಯ ಫಲವನ್ನು ತೇರೇ ಸಂಗ್ ಚಿತ್ರದಲ್ಲಿ ಹೆಣೆಯಲಾಗಿದೆ. ಹದಿಹರೆಯದ ಹುಡುಗಿಯರು ಗರ್ಭಿಣಿಯರಾಗಿ ಅನುಭವಿಸುವ ಯಾತನೆಯ ಕಥೆಯಿದು. ಅವರ ಮನಸ್ಸಿನಲ್ಲಿರುವ ಹೊಯ್ದಾಟವನ್ನು ಹೇಳಲು ಈ ಕಥೆಯನ್ನು ತಂದಿದ್ದಾರೆ. ಚಿತ್ರದ ಹೆಸರು ತೇರೇ ಸಂಗ್. ಸಮಾಜದ ಒಂದು ಪುಟ್ಟ ಸಮಸ್ಯೆಯ ಗಂಭೀರತೆಯನ್ನು ತೆರೆಯ ಮೇಲೆ ತೋರಿಸುವ ಜವಾಬ್ದಾರಿ ಹೊತ್ತಿದೆ ಈ ಚಿತ್ರ.

ಸತೀಶ್ ಕೌಶಿಕ್ ನಿರ್ದೇಶನದ ಈ ಚಿತ್ರಕ್ಕೆ ಎ ಕಿಡಲ್ಟ್ ಲವ್ ಸ್ಟೋರಿ ಎಂಬ ಟ್ಯಾಗ್‌ಲೈನನ್ನೂ ನೀಡಲಾಗಿದೆ. ಹದಿಹರೆಯದ ಹೈಸ್ಕೂಲು ಹುಡುಗರ ಪ್ರೇಮಕಥೆಯೇ ಈ ಚಿತ್ರದ ಜೀವಾಳ. ಭರತ್ ಶಾ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಅನುಪಮ್ ಖೇರ್‌ರಂತಹ ಖ್ಯಾತ ನಾಮರೂ ಸೇರಿದಂತೆ ನಾಲ್ಕು ಮಂದಿ ಈ ಚಿತ್ರವನ್ನು ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಕರೋಲ್ ಬಾಗ್ ಫಿಲಂ ಅಂಡ್ ಎಂಟರ್‌ಟೈನ್‌ಮೆಂಟ್ ಹಾಗೂ ಸೋನಿ ಪಿಕ್ಚರ್ಸ್ ಜಂಟಿ ಬ್ಯಾನರ್‌ನಡಿ ಹೊರಬರುತ್ತಿದೆ. ಆಗಸ್ಟ್ ಏಳರಂದು ಬಿಡುಗಡೆ ಕಾಣುತ್ತಿರುವ ಈ ಚಿತ್ರವನ್ನು ಭಾರತದ ಡಾಲ್‌ಹೌಸಿ ಹಾಗೂ ದೆಹಲಿಯಲ್ಲಿ ಶೂಟಿಂಗ್ ನಡೆಸಲಾಗಿದೆ. ಚಿತ್ರದ ನಾಯಕ ಹಾಗೂ ನಾಯಕಿ ಇಬ್ಬರೂ ಹೊಸ ಮುಖಗಳು.
IFM