ಸಲ್ಮಾನ್, ಆಸಿನ್ ಜೋಡಿಯ 'ಲಂಡನ್ ಡ್ರೀಮ್ಸ್'

IFM
ನಮಸ್ತೇ ಲಂಡನ್ ಚಿತ್ರ ನಿರ್ದೇಶಿಸಿದ ಬಳಿಕ ಈಗ ಮತ್ತೆ ನಿರ್ದೇಶಕ ವಿಪುಲ್ ಶಾ ಮತ್ತೆ ಲಂಡನ್ ಕನಸು ಕಾಣುತ್ತಿದ್ದಾರೆ. ಈ ಬಾರಿ ಅವರ ಚಿತ್ರದ ಹೆಸರು ಲಂಡನ್ ಡ್ರೀಮ್ಸ್. ಸಲ್ಮಾನ್ ಖಾನ್, ಅಜಯ್ ದೇವಗನ್, ಆಸಿನ್ ತಾರಾಗಣವಿರುವ ಈ ಚಿತ್ರ ಸಂಗೀತವನ್ನೇ ತಳಹದಿಯಾಗಿಟ್ಟುಕೊಂಡು ಹೊರಬರುತ್ತಿರುವ ಚಿತ್ರ.

ಚಿತ್ರದ ಕಥೆ ಹೀಗೆ ಸಾಗುತ್ತದೆ. ಅವರಿಬ್ಬರು ಬಾಲ್ಯದಲ್ಲಿಯೇ ಅಮರ ಗೆಳೆಯರು. ಎರಡು ಕುಟುಂಬಕ್ಕೂ ಸಂಗೀತಕ್ಕೂ ಎಲ್ಲಿಲ್ಲದ ನಂಟು. ಅರ್ಜುನ್ (ಅಜಯ್ ದೇವಗನ್) ತನ್ನ ಅಜ್ಜನ ಆಸೆಯಂತೆ ಸಂಗೀತದ ಮೂಲಕ ಭವಿಷ್ಯ ರೂಪಿಸಿಕೊಳ್ಳಲು ಹೊರಡುತ್ತಾನೆ. ಆದರೆ ಮನ್ನು (ಸಲ್ಮಾನ್ ಖಾನ್) ಸಂಗೀತದಲ್ಲಿ ಆಸಕ್ತಿಯಿದ್ದರೂ ಹಾಡುವುದಕ್ಕಿಂತ ಹೆಚ್ಚು ಸಂಗೀತ ಕೇಳಿ ಆಸ್ವಾದಿಸುತ್ತಾನೆ. ಆದರೆ ಅದರಲ್ಲೇ ಭವಿಷ್ಯ ರೂಪಿಸಿಕೊಳ್ಳುವಂಥ ಕನಸೇನೂ ಆತನಿಗಿರುವುದಿಲ್ಲ. ಆದರೆ ಸಂಗೀತವೇ ಅವರಿಬ್ಬರ ಗೆಳೆತನಕ್ಕೆ ಬೆಸುಗೆಯಾಗಿರುತ್ತದೆ ಎಂದರೆ ತಪ್ಪಲ್ಲ.

IFM
ಸಂಗೀತದಲ್ಲಿ ಅಪಾರ ಸಾಧಿಸುವ ಕನಸು ಹೊತ್ತ ಅರ್ಜುನ್ ಲಂಡನ್‌ಗೆ ಹೋಗುತ್ತಾನೆ. ಅಲ್ಲಿ ಆತನ ಅಂಕಲ್ ಇರುತ್ತಾನೆ. ಅವರ ಸಹಾಯದಿಂದ ಗುರುತು ಪರಿಚಯವಿಲ್ಲದ ಲಂಡನ್‌ನಲ್ಲಿ ಸಂಗೀತದ ಕನಸು ಹೊತ್ತು ತಿರುಗಾಡುತ್ತಾನೆ ಅರ್ಜುನ್.

ಝೊಯೇಬ್ ಹಾಗೂ ವಾಸಿಮ್ ಎಂಬಿಬ್ಬರು ಸಹೋದರರ ರಾಕ್ ಬ್ಯಾಂಡ್ ಒಂದಕ್ಕೆ ಸೇರುತ್ತಾನೆ. ಅವರಿಬ್ಬರು ಸಹೋದರರು ಪಾಕಿಸ್ತಾನಿ ಮೂಲದವರು. ಇದೇ ಗುಂಪಿನಲ್ಲಿ ಪ್ರಿಯಾ (ಆಸಿನ್) ಕೂಡಾ ಇರುತ್ತಾಳೆ. ಆಕೆ ಸಂಗೀತದಲ್ಲಿ ದೊಡ್ಡ ಸಾಧಕಿಯಾಗಲು ಲಂಡನ್‌ಗೆ ಬಂದಿರುತ್ತಾಳೆ. ಆಕೆ ದಕ್ಷಿಣ ಭಾರತದ ಸಾದಾ ಸಂಪ್ರದಾಯಸ್ಥ ಕುಟುಂಬದಿಂದ ಬಂದವಳು. ಹಾಗೂ ಬಾಲ್ಯದಲ್ಲೇ ಕರ್ನಾಟಕ ಸಂಗೀತ ಹಾಗೂ ಭರತನಾಟ್ಯ ಕಲಿತು ಆ ಮೂಲಕ ರಾಕ್ ಸಂಗೀತದ ಕನಸು ಚಿಗುರಿಸಿಕೊಂಡವಳು.

ಅತ್ತ ಮನ್ನು ತನ್ನ ಹಳ್ಳಿಯಲ್ಲಿ ಮದುವೆ ಸಮಾರಂಭಗಳಿಗೆ ವಾದ್ಯ ನುಡೆಸುವ ತಂಡ ಕಟ್ಟಿಕೊಂಡು ಹಾಯಾಗಿರುತ್ತಾನೆ. ಆದರೆ ಲಂಡನ್‌ನಲ್ಲಿ ಇದೇ ಬ್ಯಾಂಡ್‌ಗೆ ಅರ್ಜುನ್ ಮನ್ನುವನ್ನು ಕರೆತಂದ ಕೆಲವೇ ದಿನಗಳಲ್ಲಿ ಅರ್ಜುನ್‌ಗೆ ತಾನು ಮಾಡಿದ ಕೆಲಸ ತನಗೇ ಮುಳುವಾಗುತ್ತದೆಂಬುದು ಅರಿವಾಗುತ್ತದೆ.
IFM


ಅರ್ಜುನ್ ಹಲವು ವರ್ಷಗಳಿಂದ ಕಠಿಣ ಅಭ್ಯಾಸ ಮಾಡಿಕೊಂಡು ಭಾರೀ ಮಹತ್ವಾಕಾಂಕ್ಷೆ ಹೊತ್ತ ರಾಕ್ ಸಂಗೀತವ್ನನು ಮನ್ನು ಕೆಲವೇ ದಿನಗಳಲ್ಲಿ ಕರಗತ ಮಾಡುತ್ತಾನೆ. ಅಷ್ಟೇ ಅಲ್ಲದೆ ಆತನ ಶೋಗೆ ಸಾವಿರಾರು ಜನರು ಗುಂಪುಗಟ್ಟಿ ಕೇಳುತ್ತಾರೆ. ಮನ್ನುವಿನ ವಿಶೇಷ ಸ್ಟೈಲ್ ಎಲ್ಲರನ್ನು ಮರುಳು ಮಾಡಿರುತ್ತದೆ. ಇದರಿಂದ ಅರ್ಜುನ್ ಮನಸ್ಸಿಗೆ ಅತೀವ ನೋವು, ಅಸೂಯೆ ಎಲ್ಲವೂ ಆಗುತ್ತದೆ. ದೇವರೇ ತನಗೆ ಮೋಸ ಮಾಡಿದನೆಂದು ಶಪಿಸುತ್ತಾನೆ.

ಆದರೂ ಅರ್ಜುನ್‌ನ ಈ ಅಸೂಯೆ ತಾರಕಕ್ಕೇರುವುದು ಮನ್ನು ಅದೇ ಬ್ಯಾಂಡ್‌ನ ಭಾರತೀಯ ಮೂಲದ ಹುಡುಗಿ ಪ್ರಿಯಾಳ ಹೃದಯ ಕದ್ದಾಗ. ಪ್ರಿಯಾ ಹಾಗೂ ಮನ್ನು ಪ್ರೀತಿಸಲು ಶುರು ಮಾಡಿದ್ದು ಅರ್ಜುನ್‌ಗೆ ವಿಪರೀತ ಹೊಟ್ಟೆಕಿಚ್ಚಾಗುತ್ತದೆ. ಇದರಿಂದ ಅರ್ಜುನ್ ತ್ನ ಜೀವದ ಗೆಳೆಯ ಮನ್ನುವನ್ನೇ ಮುಗಿಸಲು ಪ್ಲಾನ್ ರೂಪಿಸುತ್ತಾನೆ. ಪ್ರಖ್ಯಾತ ಸ್ಥಳದಲ್ಲಿ ಶೋ ನೀಡುವ ದನದ ಮೊದಲೇ ಮನ್ನುವಿನ ಅಂತ್ಯಕ್ಕಾಗಿ ಸಂಚು ರೂಪಿಸುತ್ತಾನೆ. ಅಷ್ಟೇ ಅಲ್ಲ, ಆ ಶೋನಲ್ಲಿ ತಾನೇ 25,000 ಮಂದಿಯ ಎದುರು ಹೀರೋ ಆಗಿ ಮೆರೆಯುತ್ತೇನೆಂದು ಕನಸು ಕಾಣುತ್ತಾನೆ. ಆದರೆ ಆ ಶೋ ನಡೆಯುವ ಸ್ಥಳಕ್ಕೆ ಧಾವಿಸಿದಾಗ ಎಲ್ಲೊಂದು ಶಾಕ್ ಕಾದಿರುತ್ತದೆ. ಅದೇನು ಎಂದು ಚಿತ್ರ ಕ್ಲೈಮ್ಯಾಕ್ಸ್ ನೀಡುತ್ತದೆ.

ಲಂಡನ್, ಪ್ಯಾರಿಸ್, ರೋಮ್, ಆಮ್ಸೆರ್ಡಾಮ್ ಹೀಗೆ ವಿಶ್ವ ಪರ್ಯಟನೆಯನ್ನೇ ಮಾಡಿಕೊಂಡು ಚಿತ್ರತಂಡ ಶೂಟಿಂಗನ್ನು ಸಂಪೂರ್ಣವಾಗಿ ಮುಗಿಸಿದೆ. ಐಪೆಲ್ ಗೋಪುರದೆದುರಲ್ಲಿ ಸಲ್ಮಾನ್ ಆಸಿನ್ ಎದುರು ಮುಂಗಾಲು ಊರಿ ಪ್ರೇಮ ಭಿಕ್ಷೆ ಬೇಡಿದ್ದಾನೆ! ಹೀಗೆ ಬೇಡಿದ್ದು ಚಿತ್ರದ ಶೂಟಿಂಗ್‌ಗಾಗಿಯಾದರೂ, ಸಲ್ಮಾನ್ ಕಣ್ಣು ಆಸಿನ್ ಮೇಲೆ ಬಿದ್ದಿತ್ತು ಎಂಬುದೂ ಸುಳ್ಳಲ್ಲ. ಅದೇನೇ ಇರಲಿ. ಚಿತ್ರದಿಂದಾಗಿ ಆಸಿನ್‍ ಒಬ್ಬ ಉತ್ತಮ ಗೆಳೆಯನಾಗಿ ಅಜಯ್ ದೇವಗ್ ಸಿಕ್ಕಿದ್ದಾನೆ. ಇಂತಿಪ್ಪ ಹಲವು ಸುದ್ದಿಗಳನ್ನು ದಿನದಿವೂ ಮಾಡುತ್ತಿರುವ ಲಂಡನ್ ಡ್ರೀಮ್ಸ್ ಚಿತ್ರ ಅಕ್ಟೋಬರ್ 30ರಂದು ತೆರೆ ಕಾಣಲಿದೆ.

ವೆಬ್ದುನಿಯಾವನ್ನು ಓದಿ