ಸಂಪೂರ್ಣ ಆಕ್ಷನ್ ಚಿತ್ರ ಸಲ್ಮಾನ್‌ರ 'ವಾಂಟೆಡ್'

IFM
ಯುವರಾಜ್, ಹೀರೋಸ್, ಹೆಲೋ... ಸೇರಿದಂತೆ ಸಾಲು ಸಾಲು ಫ್ಲಾಪ್ ಚಿತ್ರಗಳನ್ನೇ ನೀಡಿದ ಸಲ್ಮಾನ್‌ ಖಾನ್ ಮತ್ತೆ ಬಂದಿದ್ದಾರೆ. ವಾಂಟೆಡ್ ಚಿತ್ರದ ಮೂಲಕ. ವಾಂಟೆಡ್ ಚಿತ್ರ ಭೂಗತ ಲೋಕದ ಗ್ಯಾಂಗ್ಸ್ಟರ್‌ಗಳ ಕಥಾನಕವನ್ನು ಹೊಂದಿದೆ. ಇಲ್ಲಿ ರಾಧೆ (ಸಲ್ಮಾನ್ ಖಾನ್) ಒಬ್ಬ ಭಾರೀ ಗ್ಯಾಂಗ್‌ಸ್ಟರ್. ಯಾವುದೇ ಮುಲಾಜಿಲ್ಲದೆ ಇನ್ನೊಬ್ಬರನ್ನು ಕಚಕಚನೆ ಕತ್ತರಿಸಿಹಾಕಬಲ್ಲ ಭಯವೇ ಇಲ್ಲದ ವ್ಯಕ್ತಿ. ಅಷ್ಟೇ, ಹಣದ ಬಗ್ಗೆಯೂ ಅಂಥ ನಾಚಿಕೆ ಇಲ್ಲದಂಥ ವ್ಯಕ್ತಿ. ಜತೆಗೆ ಅಪಾರ ಬುದ್ಧಿಮತ್ತೆಯನ್ನೂ ಹೊಂದಿರುವ ಕ್ರಿಮಿನಲ್.

ಗಣಿಭಾಯಿ (ಪ್ರಕಾಶ್ ರೈ) ಬಳಿ ಕೆಲಸ ಮಾಡುವ ರಾಧೆ ಗಣಿ ಭಾಯಿಯ ಎಲ್ಲಾ ಶತ್ರುಗಳನ್ನು ಏಕಾಂಗಿಯಾಗಿ ಮಣಿಸುತ್ತಾನೆ. ಇಂತಿಪ್ಪ ರಾಧೆಗೆ ಹೀಗಾಗಿ ಶತ್ರುಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಹೀಗಿದ್ದಾಗ ಒಮ್ಮೆ ಸುಂದರಳಾದ ಜಾಹ್ನವಿ (ಆಯೇಶಾ ಟಕಿಯಾ)ಗೆ ರಾಧೆ ಮೇಲೆ ಪ್ರೀತಿ ಅಂಕುರಿಸುತ್ತದೆ. ರಾಧೆಯನ್ನು ಪ್ರೀತಿಸುವ ಹುಡುಗಿ ಜಾಹ್ನವಿ ಕೂಡಾ ಆತನಲ್ಲಿ ಹೇಳೋದು ಹೀಗೆ... 'ಗೂಂಡೋಸೇ ಜ್ಯಾದಾ ಮುಝೇ ತುಂಸೇ ಢರ್ ಲ್ತಾ ಹೆ'. ಇದೇ ಸಂದರ್ಭ ಇನ್ಸ್‌ಪೆಕ್ಟರ್ ತಲ್ಪಡೆ (ಮಹೇಶ್ ಮಂಜ್ರೇಕರ್)ಯ ಕಾಮುಕ ದೃಷ್ಟಿ ಕೂಡಾ ಜಾಹ್ನವಿಯ ಮೇಲೆ ಬೀಳುತ್ತದೆ. ಅಮ್ಮ ಹಾಗೂ ಮಗಳ ಜತೆಗೆ ತಾನು ಮಲಗಬೇಕೆಂಬ ಕೆಟ್ಟ ಹವಣಿಕೆಯ ವ್ಯಕ್ತಿ ತಲ್ಪಡೆ. ಆದರೆ ಜಾಹ್ನವಿ ರಾಧೆಯನ್ನು ಪ್ರೀತಿಸುತ್ತಿದ್ದಾಳೆಂಬ ವಿಚಾರ ತಲ್ಪಡೆಗೆ ಗೊತ್ತಿರುವುದಿಲ್ಲ.
IFM


ಹೀಗೆ ಮುಂಬೈ ನಗರಿಯಲ್ಲಿ ಗ್ಯಾಂಗ್‌ಸ್ಟರ್‌ಗಳ ಹಾವಳಿ ಹೆಚ್ಚಾಗುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಡಲು ಜನರು ಹವಣಿಸುತ್ತಾರೆ. ಹೀಗಾಗಿ ಕಮಿಷನರ್ ಅಷ್ರಫ್ ಖಾನ್ ಮುಂಬೈ ನಗರಿಯನ್ನು ಕ್ರೈಂ ಮುಕ್ತ ನಗರವನ್ನಾಗಿ ರೂಪಿಸಲು 200 ಮಂದಿ ಕ್ರಿಮಿನಲ್‌ಗಳನ್ನು ಬಂಧಿಸುತ್ತಾನೆ. ಮುಂದೇನಾಗುತ್ತದೆ ಹಾಗೂ ರಾಧೆಯ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತದೆ ಎಂಬುದನ್ನು ನೋಡಲ ಚಿತ್ರ ವೀಕ್ಷಿಸಬೇಕು.

ಇದು ಪಕ್ಕಾ ಆಕ್ಷನ್ ಸಿನಿಮಾ ಪ್ರಿಯರಿಗೆ ಹೇಳಿ ಮಾಡಿಸಿದ ಚಿತ್ರ. ಅಷ್ಟೇ ಅಲ್ಲ ಸಲ್ಮಾನ್ ಖಾನ್ ಅವರ ಅಭಿಮಾನಿಗಳು ಕೂಡ ಕಣ್ಣವೆಯಿಕ್ಕದೆ ತಲ್ಲೀನರಾಗಿ ನೋಡಬಲ್ಲ ಚಿತ್ರವಿದು. ತೆಲುಗಿನ ಪೋರಿಕಿ ಚಿತ್ರವನ್ನು ಯಥಾವತ್ತಾಗಿ ಭಟ್ಟಿಯಿಳಿಸಿದ್ದಾರೆ ನಿರ್ದೇಶಕ ಪ್ರಭುದೇವ್. ತೆಲುಗಿನಲ್ಲಿ ಚಿತ್ರ ಮಾಡಿ, ನಟಿಸಿ ನಂತರ ತಮಿಳಿನಲ್ಲೂ ರಿಮೇಕ್ ಮಾಡಿ ಈಗ ಹಿಂದಿಗೆ ವಾಂಟೆಡ್ ಆಗಿ ಬದಲಾಯಿಸಿದ್ದಾರೆ ಪ್ರಭುದೇವ್. ಆದರೆ ಹಿಂದಿಯಲ್ಲಿ ಪ್ರಭುದೇವ್ ಅವರ ಚೊಚ್ಚಲ ನಿರ್ದೇಶನವಿದು. ಚಿತ್ರದ ಕಥೆಯ ಬಿಗುವಿಗೆ ಕೊರತೆಯಾಗದಂತೆ ಅದ್ಭುತವಾಗಿ ಚಿತ್ರವನ್ನು ನಿರೂಪಿಸಿದ ಶ್ರೇಯಸ್ಸೂ ಕೂಡಾ ಪ್ರಭುದೇವ್‌ಗೆ ಸಲ್ಲಬೇಕು.

IFM
ಚಿತ್ರದ ಫೈಟ್ ದೃಶ್ಯಗಳೂ ಅಷ್ಟೇ. ಅದ್ಭುತವಾಗಿ ತೋರಿಸಿದ ಸಾಹಸ ನಿರ್ದೇಶಕ ವಿಜಯನ್‌ಗೆ ಪ್ರಣಾಮ ಸಲ್ಲಿಸಲೇಬೇಕು. ಶಿರಾಜ್ ಅಹ್ಮದ್ ಅವರ ಸಂಭಾಷಣೆ ಕೂಡಾ ಪ್ರೇಕ್ಷಕರಿಂದ ವಿಶಲ್, ಚಪ್ಪಾಳೆಗಳನ್ನು ಗಿಟ್ಟಿಸುವಲ್ಲಿ ಯಶಸ್ವಿಯಾಗುತ್ತದೆ. ಚಿತ್ರದಲ್ಲಿ ಕೆಲವು ಅದ್ಭುತ ಹಾಡುಗಳೂ ಇವೆ. ಮೇರಾ ಹಿ ಜಲ್ವಾ ಹಾಡು ಕುಣಿಸುತ್ತದೆ. ವಿಲನ್ ಪ್ರಕಾಶ್ ರೈ ನಗಿಸುತ್ತಾರೆ. ಆದರೆ ಮಹೇಶ್ ಮಂಜ್ರೇಕರ್ ಚಿತ್ರದುದ್ದಕ್ಕೂ ತಮ್ಮ ಕಡೆ ಪ್ರೇಕ್ಷಕನ ಗಮನ ಸೆಳೆಯುತ್ತಾರೆ.

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಆಕ್ಷನ್ ಹೀರೋಗಳು ಆಕ್ಷನ್ ಸಿನಿಮಾಗಳಲ್ಲಿ ನಿರೀಕ್ಷೆ ಕಳೆದುಕೊಂಡಿದ್ದಾರೆ ಅನಿಸುತ್ತದೆ. ಯಾಕೆಂದರೆ ಆಕ್ಷನ್ ಹೀರೋಗಳಾದ ಅಕ್ಷಯ್ ಕುಮಾರ್, ಅಜಯ್ ದೇವಗನ್ ಮತ್ತಿತರರು ಆಕ್ಷನ್ ಸಿನಿಮಾವನ್ನು ಬಿಟ್ಟು ಲವರ್ ಬಾಯ್, ಕಾಮಿಡಿ ಹೀರೋಗಳಾಗಿ ತಮ್ಮ ಇಮೇಜನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಮತ್ತೊಬ್ಬ ಆಕ್ಷನ್ ಹೀರೋ ಸನ್ನಿ ಡಿಯೋಲ್ ಸದ್ಯ ಬಾಲಿವುಡ್‌ನಿಂದ ಮರೆಯಾದಂತೆಯೇ ಕಾಣುತ್ತಿದೆ. ಆದರೂ ಕಳೆದ ವರ್ಷ ಹಿಂಸೆಯ ಪ್ರತಿರೂಪವಿರುವ ಗಜನಿ ಚಿತ್ರದಲ್ಲಿ ಅಮೀರ್ ಖಾನ್ ಸಿಕ್ಸ್ ಪ್ಯಾಕ್‌ನಲ್ಲಿ ಕಂಗೊಳಿಸಿ ಬಾಲಿವುಡ್‌ನಲ್ಲಿ ತನ್ನದೇ ಹೊಸ ಇಮೇಜ್‌ನ ಹವಾ ಸೃಷ್ಟಿಸಿದ್ದರು. ಇಂಥ ಸಂದರ್ಭ ಬಂದ ಸಂಪೂರ್ಣ ಆಕ್ಷನ್ ಚಿತ್ರದಲ್ಲಿ ಸಲ್ಮಾನ್ ಮತ್ತೆ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ