ದಿಲ್ ಬೋಲೆ ಹಡಿಪ್ಪಾ: ಕ್ರಿಕೆಟ್‌ನಲ್ಲಿ ಮಿಂಚಿದ ರಾಣಿ ಮುಖರ್ಜಿ!

ಬಹುನಿರೀಕ್ಷಿತ ಯಶ್ ರಾಜ್ ಬ್ಯಾನರ್ ಅಡಿಯ ದಿಲ್ ಬೋಲೆ ಹಡಿಪ್ಪಾ ಚಿತ್ರ ಬಿಡುಗಡೆಗೊಂಡಿದೆ. ಬಹುಕಾಲದ ನಂತರ ರಾಣಿ ಮುಖರ್ಜಿ ಮತ್ತೆ ಈ ಚಿತ್ರದ ಮೂಲಕ ಬಾಲಿವುಡ್ಡಿನಲ್ಲಿ ಸುದ್ದಿ ಮಾಡಿದ್ದಾರೆ. ಕಮೀನೆಯ ಯಶಸ್ಸಿನಿಂದ ಹುರುಪಾಗಿರುವ ಶಾಹಿದ್ ಕೂಡಾ ಈ ಚಿತ್ರದಲ್ಲಿ ಮತ್ತೆ ತನ್ನ ಎಂದಿನ ಇಮೇಜಿಗೆ ಮರಳಿದ್ದಾರೆ. ರಾಣಿ ಮುಖರ್ಜಿ ಸರ್ದಾರ್ಜಿಯ ವೇಷದಲ್ಲಿ ಕ್ರಿಕೆಟ್ ಆಡುವ ದೃಶ್ಯ ಈಗಾಗಲೇ ಎಲ್ಲೆಡೆ ಜನಪ್ರಿಯವಾಗಿತ್ತು. ಹಾಗಾಗಿ ಸಹಜವಾಗಿಯೇ ಚಿತ್ರದ ಬಗ್ಗೆ ಕುತೂಹಲವೂ ಇತ್ತು. ಆದರೆ ಪ್ರೇಕ್ಷಕರ ಕುತೂಹಲಕ್ಕೆ ರಾಣಿ ಹಾಗೂ ಶಾಹಿದ್ ತಣ್ಣೀರೆರಚುವುದಿಲ್ಲ.

IFM
ಪಂಜಾಬ್‌ನ ಒಂದು ಪುಟ್ಟ ಹಳ್ಳಿಯಲ್ಲಿ ವಾಘಾ ಗಡಿಯ ಬಳಿಯಲ್ಲಿ ಪ್ರತಿ ವರ್ಷ ಸ್ಥಳೀಯ ಜನರು ಕ್ರಿಕೆಟ್ ತಂಡ ಕಟ್ಟಿ ಕ್ರಿಕೆಟ್ ಪಂದ್ಯಾಟ ನಡೆಸುತ್ತಿರುತ್ತಾರೆ. ಸ್ಥಳೀಯ ಪಾಕಿಸ್ತಾನಿ ಜನರ ತಂಡದ ನಡುವೆ ನಡೆಯುವ ಈ ಕ್ರಿಕೆಟ್ ಪಂದ್ಯಾಟದಲ್ಲಿ ಈಗ್ಗೆ ಕೆಲವು ವರ್ಷಗಳಿಂದ ಅಮನ್ ಕಪ್ ಬೇರೆಯವರ ಪಾಲೇ ಆಗುತ್ತದೆ. ಪ್ರತಿ ಬಾರಿಯೂ ಸೋಲುಣ್ಣುವುದನ್ನು ಕಂಡು ಈ ಬಾರಿ ಹೇಗಾದರೂ ಮಾಡಿ ಕ್ರಿಕೆಟ್‌ನಲ್ಲಿ ಗೆಲ್ಲಬೇಕೆಂದು ಪಣತೊಡು ತಂಡದ ಮುಖ್ಯಸ್ಥ ಅನುಪಮ್ ಖೇರ್ ತನ್ನ ಮಗ ರೋಹನ್‌ನನ್ನು (ಶಾಹಿದ್ ಕಪೂರ್) ಇಂಗ್ಲೆಂಡಿನಿಂದ ಕರೆಸಲು ಯೋಚಿಸುತ್ತಾನೆ. ರೋಹನ್ ಇಂಗ್ಲೆಂಡಿನಲ್ಲಿ ಕ್ರಿಕೆಟ್ ತಂಡದ ಆಟಗಾರ. ಅಮ್ಮನ ಜತೆಗೆ ಇಂಗ್ಲೆಂಡಿನಲ್ಲಿರುವ ರೋಹನ್ ಅಪ್ಪನ ಬಳಿ ಮೊದಲು ಬರಲು ಒಪ್ಪದಿದ್ದರೂ ನಂತರ ಅಪ್ಪನ ಒತ್ತಡಕ್ಕೆ ಮಣಿದು ತಂಡದ ಕೋಚ್ ಹಾಗೂ ನಾಯಕನಾಗಿ ಭಾರತಕ್ಕೆ ಬರುತ್ತಾನೆ.

ಇಂತಿಪ್ಪ ಸಂದರ್ಭದಲ್ಲಿ ಕ್ರಿಕೆಟ್ ಎಂದರೆ ಪ್ರಾಣ ಬಿಡುವ ಪಂಜಾಬಿ ಹುಡುಗಿ ವೀರಾ ಕೌರ್ (ರಾಣಿ ಮುಖರ್ಜಿ) ಇದೇ ಕ್ರಿಕೆಟ್ ತಂಡಕ್ಕೆ ಸೇರಲು ಬಯಸುತ್ತಾಳೆ. ಆದರೆ ಹುಡುಗಿಯರಿಗೆ ತಂಡದಲ್ಲಿ ಸ್ಥಾನವಿಲ್ಲದ ಕಾರಣ ಆಕೆ ವೀರ್ ಪ್ರತಾಪ್ ಸಿಂಗ್ ಆಗಿ ತಂಡಕ್ಕೆ ಸೇರುತ್ತಾಳೆ. ಸಂಪೂರ್ಣ ಸರ್ದಾರ್ಜಿ ವೇಷ ತೊಡಲು ಆಕೆ ಕೆಲಸ ಮಾಡುತ್ತಿದ್ದ ಜಿಗ್ರಿ ಯಾರ್ ಡಾನ್ಸ್ ಕಂಪನಿಯಿಂದ ಉಡುಗೆ ತೊಡುಗೆಗಳನ್ನು ತಂದು ಸರ್ದಾರ್ಜಿ ವೇಷ ಹಾಕುತ್ತಾಳೆ. ನಂತರ ಚಿತ್ರದಲ್ಲಿ ಪ್ರೀತಿ, ತಪ್ಪು ತಿಳುವಳಿಕೆ ಎಲ್ಲಾ ನಡೆದು ಸುಖಾಂತ್ಯ ಕಾಣುತ್ತದೆ.
IFM


ದಿಲ್ ಬೋಲೆ ಹಡಿಪ್ಪಾ ಚಿತ್ರ 2006ರಲ್ಲಿ ಹೈಸ್ಕೂಲು ಹುಡುಗಿಯೊಬ್ಬಳು ಸೋಸರ್ ಟೀಮ್‌ಗೆ ತನ್ನ ಅಣ್ಣನ ಬದಲಾಗಿ ತಾನೇ ಸೇರಿ ವಿವಾದ ಸೃಷ್ಠಿಸಿದ್ದರಿಂದ ಪ್ರೇರಿತವಾಗಿದೆ. ಆದರೆ ಆ ಘಟನೆಯ ಎಳೆಯನ್ನು ಹಿಡಿದುಕೊಂಡು ಇಡೀ ಚಿತ್ರವನ್ನು ಪಂಜಾಬೀಕರಿಸಲಾಗಿದೆ.

ಯಶ್ ರಾಜ್ ಬ್ಯಾನರ್ ಇಂಥ ಫ್ಯಾಂಟಸಿ ಚಿತ್ರಗಳನ್ನು ಹುಟ್ಟುಹಾಕುವುದರಲ್ಲಿ ಸಿದ್ಧಹಸ್ತರು. ಯಶ್ ರಾಜ್ ಬ್ಯಾನರ್‌ಗೆ ಇಂಥ ಚಿತ್ರ ಸರಿಹೊಂದುತ್ತದೆ ಕೂಡಾ. ಯಾಕೆಂದರೆ ಅವರು ಇಂಥ ಬಗೆಯ ಚಿತ್ರಗಳಲ್ಲಿ ದಶಕಗಳ ಕಾಲ ಅನುಭವ ಪಡೆದಿದ್ದಾರೆ. ಹಾಗಾಗಿ ಕಥೆಯ ನಿರೂಪಣೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಬಿಗುವಿದೆ. ನಿರ್ದೇಶಕ ಅನುರಾಗ್ ಸಿಂಗ್ ದಿಲ್ ಬೋಲೆ ಹಡಿಪ್ಪಾ ಚಿತ್ರದಲ್ಲಿ ತಮ್ಮ ತಾಯ್ನೆಲವನ್ನು ದೇಶಭಕ್ತಿಯ ಬೀಡೆಂಬಂತೆ ಬಿಂಬಿಸಿದ್ದಾರೆ. ಈ ಹಿಂದೆ ಯಶ್ ರಾಜ್ ಫಿಲಂಸ್ ಬ್ಯಾನರ್ ಅಡಿಯ ಖ್ಯಾತ ಚಿತ್ರ ದಿಲ್ ವಾಲೇ ದುಲ್ಹನಿಯ ಲೇ ಜಾಯೇಂಗೇ ಚಿತ್ರದಲ್ಲೂ ಕೂಡಾ ಪಂಜಾಬನ್ನು ದೇಶಭಕ್ತಿಯ ತಾಣವೆಂಬಂತೆ ಸಂಭಾಷಣೆಯಲ್ಲಿ ಬಿಂಬಿಸಲಾಗಿತ್ತು.

ಚಿತ್ರದಲ್ಲಿ ಕೆಲವು ಭಾವುಕತೆಯ ದೃಶ್ಯಗಳು ಕೃತಕವಾದಂತೆ ಬಿಂಬಿತವಾಗಿದೆ. ಶೆರ್ಲಿನ್ ಛೋಪ್ರಾ ಹಾಗೂ ರಾಖಿ ಸಾವಂತ್ ಎಂಬ ಇಬ್ಬರು ಮಾದಕ ಸೆಕ್ಸೀ ಬೊಂಬೆಗಳು ಇಲ್ಲಿ ನಟನೆಗಿಂತಲೂ ಪ್ಲಾಸ್ಟಿಕ್ ಸ್ಟಾರ್‌ಗಳಂತೆ ಕಂಡಿದ್ದೇ ಚಿತ್ರದ ನೆಗೆಟಿವ್ ಪಾಯಿಂಟ್.

IFM
ಹಾಗಿದ್ದರೂ ಚಿತ್ರ ನಮ್ಮನ್ನು ಸೆರೆಹಿಡಿಯುವುದು ರಾಣಿ ಮುಖರ್ಜಿ ಎಂಬ ಪ್ರತಿಭಾವಂತೆಯ ಅಭಿನಯದಿಂದ. ಈವರೆಗೆ ರಾಣಿ ಕಾಣಿಸಿಕೊಂಡ ಚಿತ್ರಗಳಿಗಿಂತಲೂ ಸುಂದರವಾಗಿ ಅದ್ಭುತವಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿತ್ತು ರಾಣಿಗೆ ಪ್ಲಸ್ ಪಾಯಿಂಟ್. ಈ ಮೊದಲು ಈ ಚಿತ್ರದ ಜೋಡಿಗಳನ್ನು ಅಸಂಬದ್ಧ ಜೋಡಿ ಎಂದು ಟೀಕಿಸಿದವರೂ ಚಿತ್ರ ನೋಡಿ ಬಾಯಿ ಮುಚ್ಚಬೇಕು. ಶಾಹಿದ್‌ಗೆ ರಾಣಿ ವಯಸ್ಸಾದವಳಂತೆ ಕಾಣುತ್ತಾಳೆ ಎಂದಿದ್ದನ್ನು ಸ್ವತಃ ಚಿತ್ರದಲ್ಲಿ ರಾಣಿ ಸುಳ್ಳಾಗಿಸಿದ್ದಾರೆ. ರಾಣಿ ಹಾಗೂ ಶಾಹಿದ್ ಇಬ್ಬರ ಜೋಡಿ ಚಿತ್ರದಲ್ಲಿ ಅದ್ಬುತ. ಇವರಿಬ್ಬರ ನಡುವಿನ ಕೆಮಿಸ್ಟ್ರಿ ಕೂಡಾ ಅಷ್ಟೇ ಅದ್ಭುತ. ಕೊನೆಯಲ್ಲಿ ಹುಡುಗಿಯರನ್ನೂ ಕನಸು ಕಾಣಲು ಬಿಡಿ ಎಂದು ರಾಣಿ ಕ್ಲೈಮ್ಯಾಕ್ಸ್‌ನಲ್ಲಿ ಹೇಳುವ ವಾಕ್ಯ ಎಲ್ಲರ ಮನದಲ್ಲೂ ಅಚ್ಚೊತ್ತುತ್ತದೆ. ಪ್ರೀತಂ ಚಕ್ರವರ್ತಿ ಹಾಗೂ ಜೂಲಿಯಸ್ ಪಾಕಿಯಂ ಅವರ ಸಂಗೀತವೂ ಕೇಳುವಂತಿದೆ.

ಒಟ್ಟಾರೆ, ದಿಲ್ ಬೋಲೆ ಹಡಿಪ್ಪಾ ಚಿತ್ರ ಒಂದು ಸುಂದರ ದಿನವನ್ನು ಸಂತೋಷವಾಗಿ ಮಜಾ ಮಾಡಿಕೊಂಡು ಕಳೆಯಬೇಕೆಂದಿದ್ದರೆ ಧಾರಾಳವಾಗಿ ನೋಡಬಹುದು. ರಾಣಿ, ಶಾಹಿದ್ ಜೋಡಿ ಖಂಡಿತಾ ನಿಮ್ಮನ್ನು ಮೋಡಿ ಮಾಡದೆ ಬಿಡುವುದಿಲ್ಲ.

ವೆಬ್ದುನಿಯಾವನ್ನು ಓದಿ