ಬಹುನಿರೀಕ್ಷಿತ ಕೈಟ್ಸ್: ಹೃತಿಕ್ ಡ್ಯಾನ್ಸ್, ಸಾಹಸ ಮೋಡಿ

ಚಿತ್ರ- ಕೈಟ್ಸ್
ನಿರ್ದೇಶನ- ಅನುರಾಗ್ ಬಸು
ನಿರ್ಮಾಣ- ರಾಕೇಶ್ ರೋಷನ್, ಸುನೈನಾ ರೋಷನ್
ತಾರಾಗಣ- ಹೃತಿಕ್ ರೋಷನ್, ಬರ್ಬರಾ ಮೋರಿ, ಕಂಗನಾ ರಾಣಾವತ್, ಕಬೀರ್ ಬೇಡಿ
ಸಂಗೀತ- ರಾಜೇಶ್ ರೋಷನ್

ಬಹುದೊಡ್ಡ ಬಜೆಟ್, ಹೃತಿಕ್‌ನ ಸ್ಟಾರ್ ಗಿರಿ, ದೊಡ್ಡ ನಟರ ತಾರಾಗಣ, ಹೆಸರಾಂತ ನಿರ್ದೇಶಕ ನಿರ್ಮಾಪಕರ ಬಣ ಹೀಗೆ ಎಲ್ಲವೂ ಕೈಟ್ಸ್ ಎಂಬ ಚಿತ್ರದ ಮೂಲಕ ಕಳೆದೊಂದು ವರ್ಷದಿಂದ ಸದ್ದು ಮಾಡುತ್ತಲೇ ಇತ್ತು. ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ಚಿತ್ರೀಕರಣಗೊಂಡು ಭಾರೀ ಸುದ್ದಿ ಮಾಡಿದ್ದ ಕೈಟ್ಸ್ ಚಿತ್ರ ಕೊನೆಗೂ ಬಿಡುಗಡೆಯಾಗಿದೆ.

ಕೈಟ್ಸ್ ಚಿತ್ರ ತ್ರಿಭಾಷಾ ಚಿತ್ರವಾಗಿದ್ದು ಇದು ಏಕಕಾಲದಲ್ಲಿ ಹಿಂದಿ ಇಂಗ್ಲೀಷ್ ಹಾಗೂ ಸ್ಪ್ಯಾನಿಷ್ ಭಾಷೆಯಲ್ಲಿ ನಿರ್ಮಾಣಗೊಂಡ ಚಿತ್ರ. ಪ್ರೇಕ್ಷಕರನ್ನು ಎರಡು ತಾಸು ಹಿಡಿದಿಡಬೇಕಾದ ತಂತ್ರಗಳನ್ನೆಲ್ಲ ಇಲ್ಲಿ ಬಳಸಲಾದರೂ, ಚಿತ್ರದ ಬಗ್ಗೆ ನೀರಸ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್ ಆದರೂ, ನಂತರದ ದಿನಗಳಲ್ಲಿ ಕಲೆಕ್ಷನ್‌‌ಗೆ ಮುಳುವಾಗಿದೆ. ಹೃತಿಕ್ ರೋಷನ್ ಚಿತ್ರವೊಂದು ಬಿಡುಗಡೆ ಕಾಣದೆ ಭರ್ಜರಿ ಎರಡು ವರ್ಷಗಳೇ ಸಂದಿವೆ. ಜೋಧಾ ಅಕ್ಬರ್ ನಂತರ ಬಿಡುಗಡೆಯಾದ ಹೃತಿಕ್ ಚಿತ್ರವಿದು. ಹಾಗಾಗಿ ನಿರೀಕ್ಷೆ ಜೋರಾಗಿಯೇ ಇತ್ತು.
IFM


ಚಿತ್ರದಲ್ಲಿ ನಾಯಕ ಜಯ್ (ಹೃತಿಕ್) ಲಾಸ್ ವೇಗಸ್‌ನಲ್ಲಿ ಸಾಲ್ಸಾ ನೃತ್ಯ ಶಿಕ್ಷಕ. ಜಿನಾ (ಕಂಗನಾ ರಾಣಾವತ್) ಅವನ ವಿದ್ಯಾರ್ಥಿನಿ. ಅಷ್ಟೇ ಅಲ್ಲ, ಆಕೆ ಮೆಕ್ಸಿಕೋದ ಕುಖ್ಯಾತ ಗ್ಯಾಗ್‌ಸ್ಟರ್‌ನ ಮಗಳು ಕೂಡಾ. ಗ್ರೀನ್ ಕಾರ್ಡ್‌ಗಾಗಿ ನಾಯಕ ಆಕೆಯನ್ನು ಮದುವೆಯಾಗಲು ತೀರ್ಮಾನಿಸುತ್ತಾನೆ. ಈ ಸಂದರ್ಭ ಜಿನಾಳ ಅಣ್ಣ ಟೋನಿಯ ಗರ್ಲ್‌ಫ್ರೆಂಡ್ ನತಾಷಾ (ಬರ್ಬರಾ ಮೋರಿ)ಳತ್ತ ಜಯ್ ಆಕರ್ಷಿತನಾಗುತ್ತಾನೆ. ಚಿತ್ರ ಹೀಗೆ ತಿರುವು ಪಡೆದುಕೊಂಡ ನಂತರ ರೋಚಕ ಹರಿವು ಪಡೆಯುತ್ತದೆ.

ಚಿತ್ರದಲ್ಲಿ ಬಾಲಿವುಡ್ ಹಿಂದೆಂದೂ ಕಾಣದಂತಹ ರೋಚಕ ಮೈನವಿರೇಳಿಸುವ ಸಾಹಸ ದೃಶ್ಯಗಳಿವೆ. ಅಷ್ಟೇ ಅಲ್ಲ, ಅದಕ್ಕೆ ತಕ್ಕುದಾದ ತಾಂತ್ರಿಕತೆಯೂ ಇದೆ. ಹಾಗಾಗಿ ಇದು ಹಾಲಿವುಡ್ ಚಿತ್ರಗಳಂತೆ ಭಾಸವಾಗುತ್ತದೆ. ಹಾಲಿವುಡ್ ಮಾದರಿಯಲ್ಲೇ ನಿರ್ಮಿಸಲಾದ ಈ ಚಿತ್ರಕ್ಕೆ ಹೃತಿಕ್ ಅಪ್ಪ ರಾಕೇಶ್ ಸಾಕಷ್ಟು ಬೆವರು ಹರಿಸಿದ್ದಾರೆ ಕೂಡಾ.

ಈಗಾಗಲೇ ಕೈಟ್ಸ್ ಚಿತ್ರ ಬಿಡುಗಡೆಗೂ ಮೊದಲು ಹೆಚ್ಚು ಸುದ್ದಿ ಮಾಡಿದ್ದು ಪ್ರಣಯ ಸನ್ನಿವೇಶಗಳಿಂದಲೂ ಕೂಡಾ. ಹೃತಿಕ್ ಹಾಗೂ ಬರ್ಬರಾ ಮೋರಿ ನಡುವಿನ ಪ್ರಣಯ ಸನ್ನಿವೇಶಗಳೂ ಕೂಡಾ ಸಾಕಷ್ಟು ಚರ್ಚಿತವಾದವುಗಳು. ಹೃತಿಕ್ ಹಾಗೂ ಬರ್ಬರಾ ಚುಂಬನದ ಹಾಗೂ ಪ್ರಣಯದ ದೃಶ್ಯಗಳಲ್ಲಿ ಸಾಕಷ್ಟು ತನ್ಮಯರಾಗಿಯೇ ನಟಿಸಿದ್ದಾರೆ. ದೃಶ್ಯ ನೋಡಿದರೆ ನೋಡುಗರ ಮೈಬಿಸಿಯೇರುವುದು ಸುಳ್ಳಲ್ಲ. ಆದರೂ, ಹಿಂದಿ ಭಾಷೆಯಲ್ಲಿ ಇಂಗ್ಲೀಷ್ ಅವತರಣಿಕೆಯಷ್ಟು ಬೋಲ್ಡ್ ದೃಶ್ಯಗಳಿಲ್ಲ. ಅವೆಲ್ಲವಕ್ಕೂ ಕತ್ತರಿ ಹಾಕಲಾಗಿದೆ. ಹಾಗಾಗಿ ಪೂರ್ತಿ ಬೆತ್ತಲಾಗುವ ದೃಶ್ಯಗಳು ಹಿಂದಿಯಲ್ಲಿಲ್ಲ.

ಇನ್ನುಳಿದಂತೆ, ಚಿತ್ರದ ಸಂಗೀತ ಕೇಳುಗನನ್ನು ಕುಣಿಸುತ್ತದೆ. ರಾಜೇಶ್ ರೋಷನ್ ಅವರನ್ನು ಚಿತ್ರದ ಸಂಗೀತಕ್ಕಾಗಿ ಹೊಗಳಲೇ ಬೇಕು. ಇನ್ನುಳಿದಂತೆ, ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಚಿತ್ರದಲ್ಲಿರುವ ಹೃತಿಕ್‌ನ ಡ್ಯಾನ್ಸ್ ಮೋಡಿ. ಹೃತಿಕ್ ಸಾಲ್ಸಾದ ಮೂಲಕ ಮತ್ತೊಮ್ಮೆ ತಮ್ಮ ಅಮೋಘ ನೃತ್ಯ ಪ್ರದರ್ಶನವನ್ನೇ ನೀಡಿದ್ದು, ನೋಡುಗರ ಕಣ್ಣು ತಣಿಸುತ್ತದೆ. ಹೃತಿಕ್ ಈ ಚಿತ್ರಕ್ಕಾಗಿ ತನ್ನ ಅಂಗಸೌಷ್ಟವವನ್ನೂ ಹೆಚ್ಚಿಸಿಕೊಂಡು ಇನ್ನೂ ಚೆನ್ನಾಗಿ ಕಾಣುತ್ತಾರೆ. ಆ ಮೂಲಕ ಯುವತಿಯರ ನಿದ್ದೆಗೆಡಿಸುತ್ತಾರೆ. ಮಾನಸಿಕ ಅಸ್ವಸ್ಥೆ ಪಾತ್ರದಲ್ಲಿ ಕಂಗನಾ ರಾಣಾವತ್ ಎಂದಿನಂತೆ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಬರ್ಬರಾ ಅಭಿನಯಕ್ಕೂ ಮೋಸವಿಲ್ಲ. ಹೃತಿಕ್ ಅಭಿನಯದ ಬಗ್ಗೆ ಎರಡು ಮಾತೇ ಇಲ್ಲ. ನೃತ್ಯದ ಬಗ್ಗೆ ಎಷ್ಟು ಹೊಗಳಿದರೂ ಸಾಲದು. ಚಿತ್ರ ಹೇಳಲೇಬೇಕಾದ ಮತ್ತೊಂದು ಪ್ಲಸ್ ಪಾಯಿಂಟ್ ಅಯ್ನಾಂಕ ಬೋಸ್ ಅವರ ಛಾಯಾಗ್ರಹಣ. ಚಿತ್ರದ ಜೀವಾಳ ಅಡಗಿರುವುದೇ ಛಾಯಾಗ್ರಹಣದಲ್ಲಿ ಎಂದರೂ ತಪ್ಪಿಲ್ಲ. ಚಿತ್ರದ ಶ್ರೇಯಸ್ಸಿನಲ್ಲಿ ಬೋಸ್ ಅವರ ಪಾಲು ದೊಡ್ಡದಿದೆ.

ಒಟ್ಟಾರೆ ಕೈಟ್ಸ್ ಪಕ್ಕಾ ಬಾಲಿವುಡ್ ಚಿತ್ರ ಎಂದು ಹೇಳಲಾಗದಿದ್ದರೂ, ಒಂದು ಉತ್ತಮ ಪ್ರಯತ್ನ. ಕಥೆಯಲ್ಲೇನೂ ಹೊಸತನವಿಲ್ಲದಿದ್ದರೂ, ತಾಂತ್ರಿಕತೆ, ಕ್ಯಾಮರಾ ಕೈಚಳಕ, ನೃತ್ಯದಿಂದ ಮನಸೂರೆಗೊಳ್ಳುತ್ತದೆ. ಒಮ್ಮೆ ನೋಡಲು ಅಡ್ಡಿಯಿಲ್ಲ.
IFM