ಏನು ಪೈಲಟ್ ಹೆಂಗಸಾ?...ಹಾಗಾದ್ರೆ ನಾನು ಪ್ರಯಾಣಿಸಲ್ಲ!

ಭಾನುವಾರ, 27 ಫೆಬ್ರವರಿ 2011 (12:05 IST)
'ಏನು ಈ ವಿಮಾನದ ಪೈಲಟ್ ಹೆಂಗಸಾ...? ಹಾಗಾದ್ರೆ ನಾನು ಪ್ರಯಾಣಿಸಲ್ಲ ಎಂದು ಪ್ರಯಾಣಿಕನೊಬ್ಬ ರಚ್ಚೆ ಹಿಡಿದ ಪರಿಣಾಮ ದೆಹಲಿ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ ವಿಮಾನವೊಂದು ಸುಮಾರು ಒಂದೂವರೆ ಗಂಟೆ ತಡವಾಗಿ ಹಾರಾಟ ನಡೆಸಿದ ವಿಚಿತ್ರ ಘಟನೆಯೊಂದು ನಡೆದಿದೆ.

ಇಂಡಿಗೋ ಸಂಸ್ಥೆಗೆ ಸೇರಿದ ವಿಮಾನ ದೆಹಲಿಯಿಂದ ಮುಂಬೈಗೆ ಶುಕ್ರವಾರ ಬೆಳಿಗ್ಗೆ 8-10ಕ್ಕೆ ಹೊರಡಬೇಕಿತ್ತು. ಆದರೆ ಅದು ಹಾರಾಟ ಆರಂಭಿಸಿದ್ದು 9.40ಕ್ಕೆ. ಒಂದೆಡೆ ದಟ್ಟ ಮಂಜಿನಿಂದಾಗಿ ವಿಮಾನ ವಿಳಂಬವಾಗಿತ್ತು.

ಮಂಜಿನಿಂದಾಗಿ ವಿಮಾನ 9ಗಂಟೆಗೆ ಹೊರಡಲು ಅನುವಾದಾಗ. ವಿಮಾನದ ಪೈಲಟ್ ಹೆಸರು ಹೇಳುತ್ತಿದ್ದಂತೆಯೇ ಕಿರಿಕ್ ಪ್ರಯಾಣಿಕನೊಬ್ಬ, ಏನು ಈ ವಿಮಾನಕ್ಕೆ ಮಹಿಳೆ ಪೈಲಟ್...ಹಾಗಾದ್ರೆ ನಾನು ಇದರಲ್ಲಿ ಪ್ರಯಾಣಿಸಲ್ಲ ಎಂದು ರಗಳೆ ಮಾಡಿರುವುದಾಗಿ ಸಹ ಪ್ರಯಾಣಿಕರಾದ ಪಾರ್ಥಾ ಗುಹಾ ಐಎಎನ್ಎಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪೈಲಟ್ ಮಹಿಳೆ ಎಂದು ತಿಳಿಯುತ್ತಿದ್ದಂತೆಯೇ ಈ ಅಸಾಮಿ, ನಾನು ಸಾಯಬೇಕಿಲ್ಲ. ಮನೆಯನ್ನೇ ನೆಟ್ಟಗೆ ಸರಿದೂಗಿಸಲು ಬಾರದ ಹೆಂಗಸು, ವಿಮಾನ ಹಾರಿಸುತ್ತಾಳಾ ಎಂದು ಸಹ ಪ್ರಯಾಣಿಕರ ಜತೆಗೇ ವಾಗ್ವಾದಕ್ಕಿಳಿದಿದ್ದ!

ತದನಂತರ ಈ ಪ್ರಯಾಣಿಕ ಗಗನಸಖಿಯರನ್ನು ಕರೆದು, ಮಹಿಳಾ ಪೈಲಟ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಮೂಲಕ ಜಗಳಕ್ಕೆ ಬಿದ್ದಿದ್ದ. ಆಗ ಸಿಟ್ಟುಗೊಂಡ ಸಿಬ್ಬಂದಿಗಳು, ಹೀಗೆ ಗಲಾಟೆ ಮಾಡಿದ್ರೆ ವಿಮಾನದಿಂದ ಹೊರ ಹಾಕುವುದಾಗಿಯೂ ಬೆದರಿಕೆ ಹಾಕಿದರು. ಇದರಿಂದಾಗಿ ಸುಮಾರು 40 ನಿಮಿಷ ಹಾಳಾಗಿತ್ತು. ಜತೆಗೆ ಸಹ ಪ್ರಯಾಣಿಕರು ಸಾಕಷ್ಟು ಕಿರಿಕಿರಿ ಅನುಭವಿಸಿದ್ದರು.

ಕೊನೆಗೂ ಲಗೇಜ್ ಸಹಿತ ಹೊರಹಾಕುವುದಾಗಿ ಎಚ್ಚರಿಕೆ ನೀಡಿದ ಮೇಲೆ ಪ್ರಯಾಣಿಕ ತೆಪ್ಪಗೆ ಕುಳಿತ ಮೇಲೆಯೇ ವಿಮಾನ ಹಾರಾಟ ಆರಂಭಿಸಿತ್ತು. ಈ ಕಿರಿಕ್ ಪ್ರಯಾಣಿಕ ಮಾನಸಿಕವಾಗಿ ಅಸ್ವಸ್ಥನಾಗಿರುವುದಾಗಿ ವಿಮಾನ ನಿಲ್ದಾಣದ ಅಧಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ