'ಕ್ಯಾಟ'ನ್ನೇ ನುಂಗಿದ 'ಮೌಸ್': ಸುಷ್ಮಾ ವ್ಯಂಗ್ಯ

ಬುಧವಾರ, 2 ಡಿಸೆಂಬರ್ 2009 (09:33 IST)
ಸರ್ವರ್ ದೋಷದಿಂದಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ(ಕ್ಯಾಟ್) ಪರೀಕ್ಷೆಗಾಗಿ ಆಗಮಿಸಿದ ಸಾವಿರಾರು ವಿದ್ಯಾರ್ಥಿಗಳು ದೇಶಾದ್ಯಂತ ತೊಂದರೆ ಅನುಭವಿಸಿದ ವಿಚಾರ ಲೋಕಸಭೆಯಲ್ಲಿ ಪ್ರಸ್ತಾಪಗೊಂಡಿದ್ದು, ವಿಪಕ್ಷ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಲೋಕಸಭೆಯಲ್ಲಿ ವಿಪಕ್ಷ ಉಪನಾಯಕಿ ಸುಶ್ಮಾ ಸ್ವರಾಜ್ ಅವರು ಕ್ಯಾಟ್ ಮೌಸ್‌ಗೆ ಬಲಿಯಾಯಿತು ಎಂದು ವ್ಯಂಗ್ಯವಾಡಿದರು.

ಸುಷ್ಮಾ ಅವರು ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು, ಈ ಬೆಳವಣಿಗೆ ಪರೀಕ್ಷೆ ಬರೆಯಲು ತಯಾರಾಗಿ ಬಂದಿದ್ದ ಹಲವು ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಆಘಾತ ಉಂಟು ಮಾಡಿದೆ ಎಂದು ಹೇಳಿದರು. ಸರ್ವರ್ ಸಂಪರ್ಕ ಪಡೆಯವಲ್ಲಿನ ವೈಫಲ್ಯ ಅಥವಾ ಪ್ರಶ್ನೆ ಪತ್ರಿಕೆಯಲ್ಲಿನ ನಾಲ್ಕು ಆಯ್ಕೆಗಳಲ್ಲಿ ಎರಡನ್ನು ನೋಡಲು ಆಗದೇ ಇರುವುದು ವಿದ್ಯಾರ್ಥಿಗಳಿಗೆ ಆಘಾತ ಉಂಟುಮಾಡಿದೆ ಎಂದು ಹೇಳಿದರು.

ಈ ಮಧ್ಯೆ, ಕ್ಯಾಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗಾದ ತೊಂದರೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಸರ್ಕಾರ, ಇಂತಹ ಸಮಸ್ಯೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದೆ.

"ಸರ್ವರ್ ದೋಷದ ಕಾರಣ 45,367 ವಿದ್ಯಾರ್ಥಿಗಳ ಪೈಕಿ 8,297 ಮಂದಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಸಮಸ್ಯೆ ಕಂಡುಬಂದಿರುವ ಪ್ರದೇಶಗಳಲ್ಲಿ ಮರುಪರೀಕ್ಷೆ ನಡೆಸುವ ನಿರ್ಧಾರವನ್ನು ಐಐಎಂಗಳಿಗೆ ಬಿಡಲಾಗಿದೆ" ಎಂದು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಈ ಸಂದರ್ಭದಲ್ಲಿ ನುಡಿದರು.

ವೆಬ್ದುನಿಯಾವನ್ನು ಓದಿ