ತುಳು, ಕೊಡವ ಸೇರಿ 38 ಭಾಷೆಗಳ ಮಾನ್ಯತೆಯಿನ್ನೂ ಪೆಂಡಿಂಗ್

ಮಂಗಳವಾರ, 1 ಡಿಸೆಂಬರ್ 2009 (18:14 IST)
NRB
ತುಳು ಹಾಗೂ ಕೊಡವ ಭಾಷೆ ಸೇರಿದಂತೆ ಸಂವಿಧಾನದ 8ನೆ ಪರಿಚ್ಛೇದಕ್ಕೆ 38 ಭಾಷೆಗಳನ್ನು ಸೇರಿಸುವಂತೆ ವಿವಿಧ ಸಂಘಟನೆಗಳು ರಾಜ್ಯ ಸರ್ಕಾರಗಳು ಮಾಡಿರುವ ಮನವಿಗಳು ಸರ್ಕಾರದ ಮುಂದೆ ಬಾಕಿ ಇವೆ ಎಂದು ಸಂಸತ್ತಿನಲ್ಲಿ ಹೇಳಲಾಗಿದೆ. ಈ ಪಟ್ಟಿಯಲ್ಲಿ ಇಂಗ್ಲೀಷ್ ಭಾಷೆಯೂ ಸೇರಿದೆ.

"ತುಳು ಸೇರಿದಂತೆ ಇನ್ನಷ್ಟು ಭಾಷೆಗಳನ್ನು ಸಂವಿಧಾನದ 8ನೆ ಪರಿಚ್ಛೇದದಲ್ಲಿ ಸೇರಿಸುವಂತೆ ವಿವಿಧ ಸಂಘಟನೆಗಳು ಹಾಗೂ ರಾಜ್ಯ ಸರ್ಕಾರಗಳು ಮಾಡಿರುವ ಹಲವಾರು ಪ್ರಾತಿನಿಧ್ಯ ಅಥವಾ ವಿನಂತಿಗಳನ್ನು ಈ (ಗೃಹ) ಸಚಿವಾಲಯ ಸ್ವೀಕರಿಸಿದೆ. ಪ್ರಸ್ತುತ 38 ಭಾಷೆಗಳನ್ನು ಸೇರಿಸುವ ಬೇಡಿಕೆಗಳು ಬಾಕಿಯುಳಿದಿವೆ ಎಂಬುದಾಗಿ ಗೃಹಇಲಾಖೆಯ ರಾಜ್ಯಸಚಿವ ಅಜಯ್ ಮಕೇನ್ ತಿಳಿಸಿದ್ದಾರೆ. ಅವರು ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡುತ್ತಿದ್ದರು.

ಅಂಗೀಕಾರಕ್ಕೆ ಬಾಕಿಯುಳಿದಿರುವ ಭಾಷೆಗಳೆಂದರೆ, ಅಂಗಿಕ, ಬಂಜಾರ, ಬಜಿಕ, ಭೋಜ್‌ಪುರಿ, ಭೋಟಿ, ಭೋಟಿಯ, ಬುಂದೇಲ್‌ಖಂಡಿ, ಛತ್ತೀಸ್‌ಗರಿ, ಧತ್ಕಿ, ಇಂಗ್ಲೀಷ್, ಗರ್ವಾಲಿ(ಪಹರಿ), ಗೊಂಡಿ, ಗುಜ್ಜರ್ ಅಥವಾ ಗುಜ್ಜಾರಿ, ಹೋ, ಕಾಚಚ್ಚಿ, ಕಂಮ್ಟಪುರಿ, ಖಾಸಿ, ಕೊಡವ, ಕೋಕ್ ಬರಕ್, ಕುಮೌನಿ(ಪಹರಿ) ಮತ್ತು ಕುರಕ್.

ಇತರ ಭಾಷೆಗಳೆಂದರೆ, ಲೆಪ್ಚಾ, ಲಿಂಬು, ಮಿಜೋ(ಲುಶಾಯ್), ಮಗಹಿ, ಮುಂದರಿ, ನಾಗ್ಪುರಿ, ನಿಕೋಬರ್ಸಿ, ಪಹರಿ(ಹಿಮಾಚಲಿ), ಪಾಲಿ, ರಾಜಸ್ಥಾನಿ, ಸಂಬಾಲ್ಪುರಿ ಅಥವಾ ಕೋಸಾಲಿ, ಶೌರ್‌ಸೇನಿ(ಪ್ರಾಕೃತ್), ಸಿರೈಕಿ, ತೆನ್ಯಿಡಿ ಹಾಗೂ ತುಳು ಎಂಬುದಾಗಿ ಸಚಿವರು ತಿಳಿಸಿದರು.

ಈ ಭಾಷೆಗಳ ಸೇರ್ಪಡೆ ಕುರಿತ ನಿರ್ಧಾರವನ್ನು ಸೀತಾಕಾಂತ್ ಮೊಹಾಪಾತ್ರ ಆಯೋಗದ ಶಿಫಾರಸ್ಸುಗಳ ಆಧಾರದಲ್ಲಿ ಕೈಗೊಳ್ಳಲಾಗುವುದು ಎಂದು ನುಡಿದ ಅವರು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಭಾಷೆಗಳನ್ನು ಸೇರಿಸಲು ಯಾವುದೇ ಸಮಯಮಿತಿಯನ್ನು ನಿರ್ಧರಿಸಲಾಗಿಲ್ಲ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ