2008ರ ಕರ್ನಾಟಕ ಚರ್ಚ್ ದಾಳಿಯ ಹಿಂದೆ ಸಂಘ ಪರಿವಾರ ಮತ್ತು ಬಿಜೆಪಿ ಕೈವಾಡವಿಲ್ಲ ಎಂದು ನ್ಯಾಯಾಂಗ ತನಿಖಾ ವರದಿಯು ಕ್ಲೀನ್ ಚಿಟ್ ನೀಡಿದ ಬೆನ್ನಿಗೆ ಬಂದಿರುವ ವರದಿಯಿದು. ಈ ಚರ್ಚ್ ದಾಳಿ ನಡೆಸಿದ್ದು ನಾನೇ ಎಂದು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಹೇಳಿದ್ದಾನೆ ಎಂದು ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
PTI
ಹಾಗೆಂದು 2007ರ ಸಂಜೋತಾ ರೈಲು ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ ಎಂದು 'ಇಂಡಿಯನ್ ಎಕ್ಸ್ಪ್ರೆಸ್' ಆಂಗ್ಲ ಪತ್ರಿಕೆ ವರದಿ ಮಾಡಿದೆ. ತಪ್ಪೊಪ್ಪಿಗೆ ಹೇಳಿಕೆಯ ಪ್ರತಿ ಕೂಡ ತನ್ನಲ್ಲಿದೆ ಎಂದು ಪತ್ರಿಕೆ ಹೇಳಿಕೊಂಡಿದೆ.
ಕರ್ನಾಟಕ ಚರ್ಚ್ ದಾಳಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಕೈವಾಡವಿದೆ ಎಂದು ಈ ಹಿಂದೆ ಸೇನಾ ಗುಪ್ತಚರ ಮಾಹಿತಿ ಕೂಡ ಹೇಳಿತ್ತು ಎಂದು ವರದಿಯಾಗಿತ್ತು. ಕ್ರೈಸ್ತರು ಹಿಂದೂಗಳನ್ನು ಮತಾಂತರ ಮಾಡುತ್ತಿರುವುದನ್ನು ವಿರೋಧಿಸಿ ಈ ದಾಳಿಗಳು ನಡೆದಿದ್ದವು ಎಂದು ಹೇಳಲಾಗಿತ್ತು.
ಈಗ ರಾಷ್ಟ್ರೀಯ ತನಿಖಾ ದಳದ ಮೂಲಕ ಸ್ವತಃ ಸಾಧ್ವಿಯೇ ಹೇಳಿಕೆ ನೀಡಿದ್ದಾರೆ. ಮಾಲೆಗಾಂವ್ ಸ್ಫೋಟದ ಆರೋಪಿ ಕರ್ನಲ್ ಪುರೋಹಿತನೇ ಕರ್ನಾಟಕ ಚರ್ಚ್ ದಾಳಿಯ (2008ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದಿತ್ತು) ನೈಜ ಸೂತ್ರಧಾರ ಎಂದು ಅವರು ಹೇಳಿದ್ದಾರೆ.
'ನಾನು ಪುರೋಹಿತನನ್ನು ಮೊದಲ ಭೇಟಿ ಮಾಡಿದ್ದು 2008ರ ಏಪ್ರಿಲ್ ತಿಂಗಳಲ್ಲಿ ನಡೆದ ಅಭಿನವ್ ಭಾರತ್ ಸಭೆಯಲ್ಲಿ. ಇದು ಮಾಲೆಗಾಂವ್ ಸ್ಫೋಟದ ನಾಲ್ಕು ತಿಂಗಳು ಮೊದಲು ನಡೆದಿತ್ತು. ಆಗ ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ' ಎಂದು ಸಾಧ್ವಿ ಹೇಳಿದ್ದಾರೆ.
ಆದರೆ ಇದನ್ನು ರಾಷ್ಟ್ರೀಯ ತನಿಖಾ ದಳ ಒಪ್ಪಿಕೊಳ್ಳಲು ನಿರಾಕರಿಸಿದೆ. ಸಾಧ್ವಿ ಹೇಳುತ್ತಿರುವುದು ಸುಳ್ಳು ಎಂದು ಸಾಬೀತುಪಡಿಸಲು ತನ್ನಲ್ಲಿ ಪುರಾವೆಗಳಿವೆ ಎಂದು ವರದಿಯಲ್ಲಿ ಹೇಳಿಕೊಂಡಿದೆ. ಸಾಧ್ವಿ ಬಂಧನವಾಗುತ್ತಿದ್ದಂತೆ ಪುರೋಹಿತ್ ತನ್ನೆಲ್ಲ ಸಹಚರರಿಗೆ ಕಳುಹಿಸಿದ್ದ ಎಸ್ಎಂಎಸ್ ದಾಖಲೆಯಿದೆ ಎಂದಿದೆ.
ತಕ್ಷಣವೇ ಎಲ್ಲರೂ ಭೂಗತರಾಗಬೇಕು ಎಂದು ಈ ಸಂದೇಶದಲ್ಲಿ ಹೇಳಲಾಗಿತ್ತು. ಹಾಗಾಗಿ ಸಾಧ್ವಿ ಹೇಳುತ್ತಿರುವುದು ಸುಳ್ಳು. ಮಾಲೆಗಾಂವ್ ಸ್ಫೋಟದಲ್ಲಿ ಆಕೆಯ ಪಾತ್ರವೂ ಇದೆ ಎನ್ನುವುದು ತನಿಖಾ ದಳದ ಶಂಕೆ.
ಸಾಧ್ವಿ ಸೆರೆಯಾದದ್ದು 2008ರ ಅಕ್ಟೋಬರ್ 7ರಂದು. ಅದಕ್ಕೆ ಎರಡು ದಿನ ಮೊದಲು ನಡೆದಿದ್ದ ಸಭೆಯೊಂದರಲ್ಲಿ ಪುರೋಹಿತ್ ತನ್ನ 'ಸಾಧನೆ'ಗಳನ್ನು ಅವರಲ್ಲಿ ಹೇಳಿಕೊಂಡಿದ್ದನಂತೆ.
'ಪುರೋಹಿತನನ್ನು 2008ರ ಮಾಲೆಗಾಂವ್ ಸ್ಫೋಟ ನಡೆದ ಒಂದು ವಾರದ ನಂತರ ಭೇಟಿ ಮಾಡಿದ್ದೆ. ಒರಿಸ್ಸಾ (ಕಂಧಮಾಲ್ ಕೋಮುಗಲಭೆ) ಮತ್ತು ಕರ್ನಾಟಕಗಳಲ್ಲಿ (ಚರ್ಚುಗಳ ಮೇಲೆ ದಾಳಿ) ಅಶಾಂತಿ ಪರಿಸ್ಥಿತಿ ಸೃಷ್ಟಿಸಿರುವುದರ ಹಿಂದಿನ ಪ್ರಮುಖ ವ್ಯಕ್ತಿಯೇ ನಾನು. ಅಲ್ಲದೆ, ಸ್ಫೋಟಗಳಂತಹ ದೊಡ್ಡ ದೊಡ್ಡ ಕೃತ್ಯಗಳನ್ನು ನಾನು ನಡೆಸುತ್ತಿದ್ದೇನೆ ಎಂದು ಹೇಳಿದ್ದ. ತಾನು ಹೇಳುತ್ತಿರುವುದು ನಿಜ ಎಂದು ಸಾಬೀತುಪಡಿಸಲು ಆತ ನನಗೆ ರೈಲ್ವೆ ಟಿಕೆಟುಗಳನ್ನು ಕೂಡ ತೋರಿಸಿದ್ದ'
'ನಾನು ಪುರೋಹಿತ್ ಹಿಂದೆ ಬಿದ್ದದ್ದು ಹಣಕ್ಕಾಗಿ. ಜಬಲ್ಪುರ್ನಲ್ಲಿ ಆಶ್ರಮ ನಿರ್ಮಿಸುವ ಸಲುವಾಗಿ ನಾನು ಪುರೋಹಿತನಲ್ಲಿ ಒಂದು ಲಕ್ಷ ರೂಪಾಯಿ ಕೇಳಿದ್ದೆ. ಆದರೆ ಆತ ಹಣ ಕೊಡಲು ಹಿಂದೆ-ಮುಂದೆ ನೋಡಿದ್ದ. ನಾನು ಆತನನ್ನು ಎಂಟರಿಂದ ಹತ್ತು ಬಾರಿ ಭೇಟಿ ಮಾಡಿದ್ದೇನೆ. ಎಲ್ಲಾ ಭೇಟಿಗಳು ಆಶ್ರಮ ನಿರ್ಮಾಣಕ್ಕಾಗಿನ ಹಣಕ್ಕಾಗಿ'
'ಮಾಲೆಗಾಂವ್ ಸ್ಫೋಟದ ನಂತರ ಭೇಟಿಯಾದಾಗ, ಪುರೋಹಿತ್ ಹಣ ನೀಡುತ್ತೇನೆ ಎಂದ. ಆದರೆ ನಾನು ಅದನ್ನು ಬೇಡ ಎಂದೆ. ಅಲ್ಲದೆ, ನೀನು ನಡೆಸಿರುವ ಸ್ಫೋಟಗಳು-ಕುಕೃತ್ಯಗಳ ಕುರಿತು ನನ್ನಲ್ಲಿ ಯಾಕೆ ಹೇಳಿಕೊಳ್ಳುತ್ತಿದ್ದೀಯಾ ಎಂದು ಕೂಡ ಪ್ರಶ್ನಿಸಿದ್ದೆ'
ಈ ವರದಿಯನ್ನು ರಾಷ್ಟ್ರೀಯ ತನಿಖಾ ದಳವು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿದೆ.