ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಪ್ರೇರಣಾ ಟ್ರಸ್ಟ್‌ಗೆ ನೀಡಲಾದ ದೇಣಿಗೆಯನ್ನು ಹಗರಣ ಎಂದು ಬಣ್ಣಿಸಿ ಲೋಕಸಭೆಯಲ್ಲಿ ಬುಧವಾರ ಗದ್ದಲವೆಬ್ಬಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವರ್ತನೆಯನ್ನು ಖಂಡಿಸಿದ ಬಿಜೆಪಿ ಸಂಸದರು ಗುರುವಾರ ಸಂಸತ್ತಿನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ, ಅಪ್ಪ-ಮಕ್ಕಳಿಗೆ ಧಿಕ್ಕಾರ ಕೂಗಿದರು.
ಗುರುವಾರ ಬೆಳಿಗ್ಗೆ ನಡೆದ ಧರಣಿಯ ನೇತೃತ್ವವನ್ನು ಕರ್ನಾಟಕದ ಸಂಸದರಾದ ಡಿ.ವಿ.ಸದಾನಂದ ಗೌಡ ಮತ್ತು ಬಿ.ವೈ.ರಾಘವೇಂದ್ರ ವಹಿಸಿದ್ದು, ಸಂಸದರೆಲ್ಲರೂ ದೇವೇಗೌಡ ಹಾಗೂ ಮಗ ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮತ್ತು ಅದಕ್ಕೂ ಮೊದಲು ದೇವೇಗೌಡರೊಂದಿಗೆ ಸೇರಿಕೊಂಡು ಕರ್ನಾಟಕವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ ಸಂಸದರು, ಇಬ್ಬರಿಗೂ ಧಿಕ್ಕಾರ ಕೂಗಿದರು.
ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದ ಗೌಡ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮವರಿಗೆ 48 ಸೈಟುಗಳನ್ನು ಕೊಡಿಸಿದ್ದಾರೆ. ಮೈಸೂರಿನಲ್ಲಿ ಕೂಡ 40ರಷ್ಟು ಸೈಟುಗಳನ್ನು ದೇವೇಗೌಡರ ಕುಟುಂಬದವರಿಗೇ ವಿತರಿಸಲಾಗಿದ್ದು, ಇದರಿಂದಾಗಿ ರಾಜ್ಯ ಸರಕಾರಕ್ಕೆ ನೂರಾರು ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ. ಈ ಬಗ್ಗೆ ಕೇಂದ್ರ ಸರಕಾರವು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
6 ತಿಂಗಳಲ್ಲಿ 167 ಕೋಟಿ ಎಲ್ಲಿಂದ... ಕಳೆದ ಆರು ತಿಂಗಳಲ್ಲಿ ಕುಮಾರಸ್ವಾಮಿಯ ಬೆಂಗಳೂರು ಮಿನರ್ವ ವೃತ್ತದಲ್ಲಿರುವ ಬ್ಯಾಂಕ್ ಖಾತೆಗೆ 167 ಕೋಟಿ ರೂಪಾಯಿ ಜಮೆಯಾಗಿದೆ. ಈ ಬಗ್ಗೆ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ಅಲ್ಲದೆ, ಅಕ್ರಮ ಗಣಿಗಾರಿಕೆಯಲ್ಲಿ ಕೂಡ ಕುಮಾರಸ್ವಾಮಿ ಪಾಲುದಾರರಾಗಿರುವ ಬಗ್ಗೆ ಎಲ್ಲ ದಾಖಲೆಗಳೂ ಇರುವುದರಿಂದ ಕೇಂದ್ರ ಸರಕಾರವು ಅವರ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ ಎಂದವರು ಒತ್ತಾಯಿಸಿದರು.