ಸಿವಿಸಿ: ಚವಾಣ್ ಮೇಲೆ ಪ್ರಧಾನಿ ಗೂಬೆ ಕೂರಿಸಿದ ಪಿಎಂ

ಮಂಗಳವಾರ, 8 ಮಾರ್ಚ್ 2011 (18:47 IST)
ಸಿವಿಸಿ ನೇಮಕಾತಿ ವಿವಾದದ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಪುನರುಚ್ಚರಿಸಿದರೂ, ಇದಕ್ಕೆಲ್ಲಾ ಹೊಣೆ ಸಿಬ್ಬಂದಿ ಸಚಿವಾಲಯದ ಮಾಜಿ ರಾಜ್ಯ ಸಚಿವ ಪೃಥ್ವಿರಾಜ್ ಚವಾಣ್ ಎಂದರಲ್ಲದೆ, ಚವಾಣ್ ಕಳುಹಿಸಿದ ಟಿಪ್ಪಣಿಯಲ್ಲಿ ಪಿ.ಜೆ.ಥಾಮಸ್ ಮೇಲೆ ಭ್ರಷ್ಟಾಚಾರ ಪ್ರಕರಣ ದಾಖಲಾಗಿರುವ ವಿಷಯ ಇರಲೇ ಇಲ್ಲ ಎಂದಿದ್ದಾರೆ.

ರಾಜ್ಯಸಭೆಯಲ್ಲಿ ಮಂಗಳವಾರ ಪ್ರತಿಪಕ್ಷಗಳ ತೀವ್ರ ವಾಗ್ಬಾಣಗಳಿಗೆ ಉತ್ತರಿಸಿದ ಮನಮೋಹನ್ ಸಿಂಗ್, ಥಾಮಸ್ ನೇಮಕವನ್ನು ಸುಪ್ರೀಂ ಕೋರ್ಟ್ ಇದೀಗ ರದ್ದುಗೊಳಿಸಿದೆ. ಹೀಗಾಗಿ ತಪ್ಪು ತೀರ್ಮಾನ ಕೈಗೊಂಡಿದ್ದಕ್ಕೆ ಜವಾಬ್ದಾರಿ, ಹೊಣೆ ಹೊತ್ತುಕೊಳ್ಳುವೆ ಎಂದು ಹೇಳಿದರು.

ಸಮಿತಿಯ ಸಭೆಗೆ ಹೋಗುವ ಮೊದಲು ಥಾಮಸ್ ವಿರುದ್ಧ ಪಾಮೋಲಿನ್ ಹಗರಣದ ಕೇಸಿತ್ತು ಎಂಬುದು ನನಗೆ ಗೊತ್ತೇ ಇರಲಿಲ್ಲ ಎಂದ ಪ್ರಧಾನಿ, ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರು ಇದನ್ನು ಗಮನಕ್ಕೆ ತಂದ ಬಳಿಕವಷ್ಟೇ ವಿಷಯ ತಿಳಿಯಿತು ಎಂದರು.

ಇದಕ್ಕೆ ಮೊದಲು ತೀವ್ರ ವಾಕ್ಪ್ರಹಾರ ನಡೆಸಿದ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಮತ್ತು ಸಿಪಿಎಂ ಮುಖಂಡ ಸೀತಾರಾಮ ಯೆಚೂರಿ, ಭ್ರಷ್ಟಾಚಾರದ ಕೇಸು ಇದ್ದರೂ ಕೂಡ ಥಾಮಸ್ ಹೆಸರನ್ನು ಶಾರ್ಟ್‌ಲಿಸ್ಟ್‌ನಲ್ಲಿ ಸೇರಿಸಿದ್ದು ಯಾರು, ಇತರ ಇಬ್ಬರು ಸ್ವಚ್ಛ ಚಾರಿತ್ರ್ಯದ ಅಧಿಕಾರಿಗಳ ಹೆಸರುಗಳಿದ್ದರೂ, ಥಾಮಸ್ ಅವರನ್ನೇ ಆರಿಸಿದ್ದೇಕೆ ಎಂದು ಪ್ರಶ್ನಿಸಿದರಲ್ಲದೆ, ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಿದವರನ್ನು ಹೊಣೆಯಾಗಿಸಬೇಕು ಎಂದು ಆಗ್ರಹಿಸಿದರು.

ಪೃಥ್ವಿರಾಜ್ ಚವಾಣ್ ಅವರು ಹಾಲಿ ಮಹಾರಾಷ್ಟ್ರದ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ