ಪ್ರಸಾದ ತಿಂದು 150 ಜನ ಆಸ್ಪತ್ರೆ ಪಾಲು

ಶನಿವಾರ, 11 ಫೆಬ್ರವರಿ 2017 (17:35 IST)
ದೇವಸ್ಥಾನದಲ್ಲಿ ನೀಡಲಾಗಿದ್ದ ಪ್ರಸಾದ ತಿಂದು ಮಕ್ಕಳು ಸೇರಿದಂತೆ ಸುಮಾರು 150 ಜನರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. 
 

ಶುಕ್ರವಾರ ರಾತ್ರಿ ಜಿಲ್ಲೆಯ ಪಚಾನೆ ಗ್ರಾಮದಲ್ಲಿ ಉರುಸ್ ನಡೆಯುತ್ತಿತ್ತು. ಉತ್ಸವದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರಿಗೆ ಸಿಹಿ ಪ್ರಸಾದವನ್ನು ವಿತರಿಸಲಾಗಿತ್ತು. ಅದನ್ನು ತಿಂದ ಬಳಿಕ ಸುಮಾರು 150 ಜನರು ವಾಂತಿಬೇಧಿ ಸೇರಿದಂತೆ ವಿಷಾಹಾರ ಸೇವನೆಯ ಪರಿಣಾಮ ಕಾಣಿಸಿಕೊಳ್ಳುವ ತೊಂದರೆಗೊಳಗಾದರು. ತಕ್ಷಣ ಅವರನ್ನು ಮಾವಲ್ ತೆಹ್ಸಿಲ್‌ನ ವಿವಿಧ ಆಸ್ಪತ್ರೆಗೆ ಸೇರಿಸಲಾಯಿತು. 
 
ಮೊದ ಮೊದಲು ಕೆಲವು ಜನರಿಗಷ್ಟೇ ಸಮಸ್ಯೆ ಕಾಣಿಸಿಕೊಂಡಿತು. ಬಳಿಕ ಆಸ್ಪತ್ರೆಗೆ ಅಸ್ವಸ್ಥರ ದಂಡೇ ಹರಿದು ಬಂತು. ಹೀಗಾಗಿ ಗ್ರಾಮದಲ್ಲೇ ಮೆಡಿಕಲ್ ಕ್ಯಾಂಪ್ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು 
ಆರೋಗ್ಯ ಅಧಿಕಾರಿ ಡಾ. ಚಂದ್ರಕಾಂತ್ ಲೋಹರ ತಿಳಿಸಿದ್ದಾರೆ. 
 
ಹೆಚ್ಚಿನ ಜನರು ಚಿಕಿತ್ಸೆ ಪಡೆದ ಬಳಿಕ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಸುಮಾರು 50ಕ್ಕೂ ಹೆಚ್ಚು ಜನರು ಈಗಲೂ ಆಸ್ಪತ್ರೆಯಲ್ಲಿದ್ದಾರೆ. ಪರಿಸ್ಥಿತಿ ಈಗ ಹತೋಟಿಯಲ್ಲಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
 
ಪ್ರಸಾದವನ್ನು ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
 

ವೆಬ್ದುನಿಯಾವನ್ನು ಓದಿ