2 ಲಸಿಕೆ ಪಡೆದರೆ ಸೋಂಕು ತಗಲುವ ಸಾಧ್ಯತೆ ಅರ್ಧಕ್ಕರ್ಧ ಇಳಿಕೆ

ಶನಿವಾರ, 14 ಆಗಸ್ಟ್ 2021 (13:13 IST)
ನವದೆಹಲಿ(ಆ.14): ದೇಶದಲ್ಲಿ ಕೊರೋನಾ ಲಸಿಕೆ ಪಡೆದವರಿಗೆ ಸೋಂಕು ತಗಲುವ ಪ್ರಮಾಣ ಶೇ.0.05ಕ್ಕಿಂತ ಕಡಿಮೆಯಿದೆ ಎಂಬ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ. ದೇಶದಲ್ಲಿ ಈವರೆಗೆ 53.14 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಒಂದು ಅಥವಾ ಎರಡು ಡೋಸ್ ಲಸಿಕೆ ಪಡೆದವರಲ್ಲಿ ಈವರೆಗೆ 2.6 ಲಕ್ಷ ಜನರಿಗೆ, ಅಂದರೆ ಶೇ.0.048ರಷ್ಟುಜನರಿಗೆ ಮಾತ್ರ ಕೊರೋನಾ ಬಂದಿದೆ. ಇವರಲ್ಲಿ 1,71,511 ಜನರು ಒಂದು ಡೋಸ್ ಮಾತ್ರ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಲಸಿಕೆ ಪಡೆದ ನಂತರ ಸೋಂಕು ತಗಲಿದರೆ ಅಂತಹವರಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯ ಬೀಳುವುದು ತುಂಬಾ ಕಡಿಮೆ, ಸಾವಿನ ಪ್ರಮಾಣವಂತೂ ಇನ್ನೂ ಕಡಿಮೆ ಎಂದು ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿತ್ತು. ಅದರ ಬೆನ್ನಲ್ಲೇ ಈಗ ಲಸಿಕೆ ಪಡೆದವರಿಗೆ ಸೋಂಕು ತಗಲುವ ಪ್ರಮಾಣ ಕೂಡ ಕಡಿಮೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸುತ್ತಿವೆ. ದೇಶದಲ್ಲಿ ಸದ್ಯ ನೀಡಲಾಗುತ್ತಿರುವ ಕೋವಿಶೀಲ್ಡ್, ಕೋವ್ಯಾಕ್ಸಿನ್ ಮತ್ತು ಸ್ಪುಟ್ನಿಕ್ ಮೂರೂ ಲಸಿಕೆಗಳು ಸಮಾನವಾಗಿ ಕೊರೋನಾದಿಂದ ರಕ್ಷಣೆ ನೀಡುತ್ತಿವೆ ಎಂದು ಹೇಳಲಾಗಿದೆ.
ಇನ್ನೊಂದು ಮಹತ್ವದ ಸಂಗತಿಯೆಂದರೆ, ಎರಡೂ ಡೋಸ್ ಲಸಿಕೆ ಪಡೆದವರಿಗೆ ಕೊರೋನಾ ಸೋಂಕು ತಗಲುವ ಪ್ರಮಾಣ ಒಂದೇ ಡೋಸ್ ಲಸಿಕೆ ಪಡೆದವರಿಗೆ ತಗಲುವ ಪ್ರಮಾಣಕ್ಕಿಂತ ಶೇ.50ರಷ್ಟುಕಡಿಮೆ ಎಂಬ ವಿಷಯವೂ ಬೆಳಕಿಗೆ ಬಂದಿದೆ. ಇನ್ನು, ಲಸಿಕೆ ಪಡೆದ ನಂತರ ಸೋಂಕು ತಗಲಿದ ಶೇ.86ರಷ್ಟುಜನರಲ್ಲಿ ಡೆಲ್ಟಾರೂಪಾಂತರಿಯೇ ಕಂಡುಬಂದಿದೆ. ಹೀಗಾಗಿ ಲಸಿಕೆ ಪಡೆದ ನಂತರ ಸೋಂಕು ತಗಲಿದವರ ಮಾದರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗುತ್ತಿದೆ.
ಕೇರಳದಲ್ಲಿ ಅಪಾಯ ಹೆಚ್ಚು
ಲಸಿಕೆ ಪಡೆದವರಿಗೂ ಸೋಂಕು ತಗಲುವ ಪ್ರಮಾಣ ಕೇರಳದಲ್ಲಿ ಅತಿಹೆಚ್ಚಿದೆ. ಆ ರಾಜ್ಯದಲ್ಲಿ ಇಂತಹ ಸುಮಾರು 40,000ಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿರುವುದು ಕೇಂದ್ರ ಸರ್ಕಾರವನ್ನು ಚಿಂತೆಗೀಡುಮಾಡಿದೆ. ಪಟ್ಟಣಂತಿಟ್ಟಜಿಲ್ಲೆಯೊಂದರಲ್ಲೇ ಲಸಿಕೆ ಪಡೆದವರ ಪೈಕಿ 20,000ಕ್ಕೂ ಹೆಚ್ಚು ಜನರಿಗೆ ಸೋಂಕು ತಗಲಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ