ಮಯನ್ಮಾರ್‌ನಲ್ಲಿ 6.8 ತೀವ್ರತೆಯ ಭೂಕಂಪ, ಬಂಗಾಳ್, ಬಿಹಾರ್, ಆಸ್ಸಾಂನಲ್ಲೂ ಕಂಪನದ ಅನುಭವ

ಬುಧವಾರ, 24 ಆಗಸ್ಟ್ 2016 (17:01 IST)
ಕೇಂದ್ರ ಮಯನ್ಮಾರ್‌ನಲ್ಲಿ ಬುಧವಾರ 6.8 ಪ್ರಮಾಣದಲ್ಲಿ ಪ್ರಬಲ ಭೂಕಂಪವಾಗಿದೆ ಎಂದು ಯುಎಸ್.ಜಿಯೋಲಾಜಿಕಲ್ ಸರ್ವೇ( ಯುಎಸ್‌ಜಿಎಸ್) ಮಾಹಿತಿ ನೀಡಿದೆ. ಭೂಕಂಪನದ ಪರಿಣಾಮ ದೇಶಾದ್ಯಂತ ಕಟ್ಟಡಗಳು ಅಲುಗಾಡಿವೆ ಎಂದು ತಿಳಿದು ಬಂದಿದೆ. 

 
ಮೈಕ್ಟಿಲಾ ಪಟ್ಟಣದ ಪಶ್ಚಿಮಕ್ಕೆ 143 ಕೀಲೋಮೀಟರ್‌ವರೆಗೆ, 84 ಕೀಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಮಾಹಿತಿ ಲಭಿಸಿದೆ. 
 
ಭಾರತದ ಪಶ್ಚಿಮ ಬಂಗಾಳ, ಜಾರ್ಖಂಡ, ಬಿಹಾರ್ ಮತ್ತು ಆಸ್ಸಾಂನಲ್ಲೂ  ಕಂಪನದ ಅನುಭವವಾಗಿದೆ. ಕಂಪನದ ಅನುಭವವಾದ ಕೂಡಲೇ ಕೋಲ್ಕತ್ತಾದಲ್ಲಿ ಮೆಟ್ರೋ ಸೇವೆಯನ್ನು ನಿಲ್ಲಿಸಲಾಗಿದೆ. 
 
ಎಲ್ಲಿಯೂ ಸಾವು ನೋವಿನ ವರದಿಯಾಗಿಲ್ಲ. 
 
ಕೇಂದ್ರ ಇಟಲಿಯಲ್ಲಿ ಬುಧವಾರ ಮುಂಜಾನೆ ಭಾರೀ ಭೂಕಂಪ ಸಂಭವಿಸಿದ್ದು ಕನಿಷ್ಠ  ಆರು ಜನರು ದುರ್ಮರವನ್ನಪ್ಪಿದ್ದಾರೆ. ಮುಂಜಾನೆ 03:36 ( 01:36 GMT)ರ ಸುಮಾರಿಗೆ ಪೆರುಗಿಯಾ ನಗರದ ಆಗ್ನೇಯಕ್ಕೆ ಭೂಮಿ ಕಂಪಿಸಿದ್ದು, ಮೊದಲ ಕಂಪನ ರಿಕ್ಟರ್ ಮಾಪಕದಲ್ಲಿ  6.2 ರಷ್ಟಿತ್ತು. ಬಳಿಕ ಅನೇಕ ಬಾರಿ ಕಂಪನ ಮುಂದುವರೆಯಿತು ಎಂದು ಮಾಹಿತಿ ಲಭಿಸಿದೆ.
 
ಕಟ್ಟಡಗಳ ಅಡಿಯಲ್ಲಿ ಹಲವರು ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ