ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರಕ್ಕೆ ಭಾರೀ ಹಿನ್ನಡೆ

ಬುಧವಾರ, 15 ಮಾರ್ಚ್ 2023 (07:53 IST)
ನವದೆಹಲಿ : ಭೋಪಾಲ್ ಅನಿಲ ದುರಂತ ಪ್ರಕರಣದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಕೇಂದ್ರಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
 
ಭೋಪಾಲ್ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ 1984ರಲ್ಲಿ ವಿಷಕಾರಿ ಮೀಥೈಲ್ ಐಸೊಸೈನೇಟ್ ಅನಿಲ ಸೋರಿಕೆಯಾಗಿತ್ತು. ಈ ಅನಿಲ ದುರಂತದಲ್ಲಿ 3,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಈ ದುರಂತ ವಿಶ್ವದ ಅತ್ಯಂತ ಕೆಟ್ಟ ಕೈಗಾರಿಕಾ ವಿಪತ್ತುಗಳಲ್ಲಿ ಒಂದಾಗಿತ್ತು.

ಈ ಪ್ರಕರಣವನ್ನು ಮತ್ತೆ ತೆರೆಯಬೇಕು. ಅನಿಲ ಸೋರಿಕೆಯಿಂದ ತೊಂದರೆಗೀಡಾದ ಸಂತ್ರಸ್ತರಿಗೆ ಹೆಚ್ಚುವರಿಯಾಗಿ 7,844 ಕೋಟಿ ರೂ.ವನ್ನು ಅಮೆರಿಕ ಮೂಲದ ಯೂನಿಯನ್ ಕಾರ್ಬೈಡ್ನ ಉತ್ತರಾಧಿಕಾರಿ ಸಂಸ್ಥೆಗಳು ನೀಡಬೇಕು ಎಂದು ಕೇಂದ್ರವು ಸುಪ್ರೀಂ ಕೋರ್ಟ್ನ ಮೊರೆ ಹೋಗಿತ್ತು. ಅಷ್ಟೇ ಅಲ್ಲದೇ ಅನಿಲ ದುರಂತದಿಂದ ಜೀವ ಹಾನಿ ಮತ್ತು ಪರಿಸರಕ್ಕೆ ಅಗಾಧ ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎಂದು ವಾದಿಸಿತ್ತು.

ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಅಭಯ್ ಎಸ್ ಓಕಾ, ವಿಕ್ರಮ್ನಾಥ್ ಮತ್ತು ಜೆ.ಕೆ ಮಹೇಶ್ವರಿ ಅವರನ್ನು ಒಳಗೊಂಡ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಅರ್ಜಿಗೆ ಸಂಬಂಧಿಸಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.

ಯೂನಿಯನ್ ಕಾರ್ಬೈಡ್ ಕಾರ್ಪೋರೇಷನ್ ಸಂಸ್ಥೆಗೆ ಹೆಚ್ಚಿನ ಹೊಣೆಗಾರಿಕೆಯನ್ನು ಹೊರಿಸುವುದು ಅಗತ್ಯವಿಲ್ಲ. ಪ್ರಕರಣವನ್ನು ಮರು ಆರಂಭಿಸುವುದು ಮತ್ತಷ್ಟು ಜಟಿಲತೆಗೆ ಕಾರಣವಾಗುವುದಲ್ಲದೆ, ಅರ್ಹ ಸಂತ್ರಸ್ತರಿಗೆ ತೊಂದರೆಯುಂಟು ಮಾಡಲಿದೆ ಎಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ