ಅಧಿವೇಶನ ಬಳಿಕ ರಾಜ್ಯಾದಂತ ಬಿಎಸ್ವೈ ಯಾತ್ರೆ

ಗುರುವಾರ, 2 ಸೆಪ್ಟಂಬರ್ 2021 (13:26 IST)
ಬೆಂಗಳೂರು(ಸೆ.2) : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಹುತೇಕ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿವೇಶನದ ನಂತರ ರಾಜ್ಯ ಪ್ರವಾಸ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದೇ 13ರಿಂದ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಬಳಿಕ ಯಡಿಯೂರಪ್ಪ ರಾಜ್ಯಾದ್ಯಂತ ಪಕ್ಷ ಸಂಘಟನೆಯ ಹೆಸರಿನಲ್ಲಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.

ವಾರದಲ್ಲಿ ಎರಡು ಜಿಲ್ಲೆ ಹಾಗೂ ಐದಕ್ಕೂ ಹೆಚ್ಚು ತಾಲ್ಲೂಕುಗಳಿಗೆ ಭೇಟಿ ನೀಡಲಿರುವ ಅವರು, ಪ್ರವಾಸದ ಸಂದರ್ಭದಲ್ಲಿ ಶಾಸಕರು ಮತ್ತು ಸಚಿವರನ್ನು ಸಹ ಆಹ್ವಾನಿಸಿದ್ದಾರೆ.ತಮ್ಮ ರಾಜ್ಯ ಪ್ರವಾಸಕ್ಕಾಗಿ ಸುಮಾರು ಒಂದು ಕೋಟಿ ಬೆಲೆಬಾಳುವ ಅತ್ಯಾಧುನಿಕ ಸೌಲಭ್ಯವುಳ್ಳ ಕಾರನ್ನು ಖರೀದಿ ಮಾಡಿರುವ ಬಿಎಸ್ವೈ ಕಲ್ಯಾಣ ಕರ್ನಾಟಕದಿಂದಲೇ ಪ್ರವಾಸವನ್ನು ಆಸರಂಭಿಸಲ್ಲಿದ್ದಾರೆ.
ಕಲ್ಯಾಣ ಕರ್ನಾಟಕ ಮುಗಿದ ನಂತರ ಕಿತ್ತೂರು ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲೂ ಪ್ರವಾಸ ನಡೆಸಲಿರುವ ಅವರು, ತಾವು ಎರಡು ವರ್ಷ ಮುಖ್ಯಮಂತ್ರಿಯಾಗಿದ್ದ ವೇಳೆ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ಜನತೆಗೆ ಮನವರಿಕೆ ಮಾಡಿಕೊಡಲಿದ್ದಾರೆ. ಯಾವುದೇ ಸಂದರ್ಭದಲ್ಲೂ ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ಇದರ ಜತೆಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿಗಳಿಗೂ ಮುಹೂರ್ತ ನಿಗದಿಯಾಗುವ ಮುನ್ಸೂಚನೆ ಸಿಕ್ಕಿದೆ.
ಚುನಾವಣೆ ನಡೆಸಲು ಈಗಾಗಲೇ ಹೈಕೋರ್ಟ್ ಹಸಿರು ನಿಶಾನೆ ತೋರಿರುವುದರಿಂದ ಆಯೋಗ ಕೂಡ ಅಗತ್ಯ ಸಿದ್ಧತೆ ನಡೆಸಿಕೊಂಡಿದೆ. ಈ ಎಲ್ಲವನ್ನೂ ಗಮನದಲ್ಲಿಟ್ಟಿಕೊಂಡಿರುವ ಯಡಿಯೂರಪ್ಪ ಅಧಿವೇಶನ ಮುಗಿದ ಬಳಿಕ ರಾಜ್ಯ ಪ್ರವಾಸಕ್ಕೆ ಭರದ ಸಿದ್ಧತೆ ನಡೆಸಿದ್ದಾರೆ. ಆದರೆ, ಬಿಎಸ್ವೈ ಅವರ ಪ್ರವಾಸಕ್ಕೆ ಅಪಸ್ವರವೂ ಎದ್ದಿದೆ. ಪಕ್ಷದ ಚಿಹ್ನೆಯಡಿ ಪ್ರವಾಸ ಕೈಗೊಳ್ಳಲು ಸೂಚನೆ ನೀಡಬೇಕೆಂದು ಅವರ ವಿರೋಧಿ ಬಣ ದೆಹಲಿ ನಾಯಕರಿಗೆ ಮನವಿ ಮಾಡಿದೆ.
ಯಡಿಯೂರಪ್ಪ ಅವರ ಪ್ರವಾಸಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ರಾಜ್ಯದ ಉಸ್ತುವಾರಿ ಅರುಣ್ಸಿಂಗ್ ಹಸಿರು ನಿಶಾನೆ ತೋರಿರುವುದರಿಂದ ಬಹುತೇಕ ಅಧಿವೇಶನ ಮುಗಿದ ಬಳಿಕ ಅವರು ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ದುಮುಕಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ