ಪಂಜಾಬ್ ಚುನಾವಣೆ: ಸದ್ಯದಲ್ಲೇ ಆಪ್ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆ
ಸೋಮವಾರ, 1 ಆಗಸ್ಟ್ 2016 (16:03 IST)
2017ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದಿಂದ ಕಣಕ್ಕಿಳಿಸುತ್ತಿರುವ 23 ಅಭ್ಯರ್ಥಿಗಳ ಪಟ್ಟಿಯನ್ನು ಆಪ್ ಸದ್ಯವೇ ಘೋಷಿಸಲಿದೆ.
ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಒಪ್ಪಿಗೆ ಪಡೆದ ಬಳಿಕ ಅಭ್ಯರ್ಥಿಗಳ ಘೋಷಣೆಯಾಗಲಿದೆ.
23 ವಿಧಾನಸಭಾ ಕ್ಷೇತ್ರಗಳಿಗೆ ಆಪ್ ಕಾರ್ಯಕರ್ತರು ಸುಮಾರು 500 ಹೆಸರುಗಳನ್ನು ಶಿಫಾರಸ್ಸು ಮಾಡಿದ್ದರು.
ಪಕ್ಷದ ಅನುವೀಕ್ಷಣ ಸಮಿತಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ 5 ರಿಂದ 7 ಹೆಸರುಳುಳ್ಳ 130 ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು ರಾಜಕೀಯ ವ್ಯವಹಾರಗಳ ಸಮಿತಿಗೆ ಕಳುಹಿಸಿ ಕೊಟ್ಟಿದೆ.
ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಆಪ್ ರಾಷ್ಟ್ರೀಯ ವಕ್ತಾರ ಸಂಜಯ್ ಸಿಂಗ್, ಫರಿದ್ ಕೋಟ್ ಸಂಸದ ಸಧು ಸಿಂಗ್, ಸಂಗ್ರೂರ್ ಸಂಸದ ಭಗ್ವತ್ ಮನ್, ಪಂಜಾಬ್ ಸುಚಾ ಸಿಂಗ್ ಚೋಟೇಪುರ್ ಮತ್ತು ರಾಷ್ಟ್ರೀಯ ಸಂಘಟನಾ ರಚನಾ ಕಾರ್ಯದರ್ಶಿ ದುರ್ಗೇಶ್ ಪಾಥಕ್ ಇದ್ದಾರೆ.
2014ರ ಲೋಕಸಭಾ ಚುನಾವಣೆಯ ಚೊಚ್ಚಲ ಪ್ರಯತ್ನದಲ್ಲಿ ಪಂಜಾಬ್‌ನಲ್ಲಿ ಆಪ್ 4 ಸ್ಥಾನಗಳನ್ನು ಗೆದ್ದುಕೊಂಡಿದ್ದು 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ- ಎಸ್ಎಡಿ ನೇತೃತ್ವದ ಮೈತ್ರಿಕೂಟದಿಂದ ಅಧಿಕಾರವನ್ನು ಕಿತ್ತುಕೊಳ್ಳುವ ಪ್ರಯತ್ನದಲ್ಲಿದೆ.