ದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಎಲ್ಲಾ ಪಕ್ಷಗಳು ಬಿರುಸಿನ ಮತಬೇಟೆ ನಡೆಸುತ್ತಿವೆ. ಈ ಮಧ್ಯೆ ಸಮಾಜವಾದಿ ಪಕ್ಷ ಆಡಳಿತರೂಢ ಎಎಪಿ ಪಕ್ಷಕ್ಕೆ ಬೆಂಬಲ ಘೋಷಿಸಿದೆ.
ಬಿಜೆಪಿಯನ್ನು ಮಣಿಸಲಿಕ್ಕಾಗಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯವಾಗಿ ಪ್ರಬಲವಾಗಿರುವ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಬೆಂಬಲ ನೀಡುತ್ತೇವೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರ ಇಲ್ಲಿ ಹೇಳಿದರು.
ಇಂಡಿಯಾ ಒಕ್ಕೂಟ ಅಖಂಡವಾಗಿದೆ ಎಂದು ಪ್ರತಿಪಾದಿಸಿದ ಎಸ್‌ಪಿ ವರಿಷ್ಠ, ದೆಹಲಿಯಲ್ಲಿ ಕಾಂಗ್ರೆಸ್‌ಗಿಂತ ಎಎಪಿ ಪ್ರಬಲವಾಗಿದೆ ಎನ್ನುವ ಮೂಲಕ ಕೈ ಪಕ್ಷಕ್ಕೂ ಟಾಂಗ್ ನೀಡಿದ್ದಾರೆ.
ಬಿಜೆಪಿ ವಿರುದ್ಧ ಹೋರಾಡುವ ಸಾಮರ್ಥ್ಯವಿದ್ದರೂ, ಆ ನೆಲದಲ್ಲಿ ಯಾವ ಪ್ರಾದೇಶಿಕ ಪಕ್ಷ ಪ್ರಬಲವಾಗಿರುತ್ತದೆ ಅದರ ಕೈ ಬಲಪಡಿಸುವುದೇ ಪ್ರತಿಪಕ್ಷಗಳ ಮೈತ್ರಿಕೂಟ ರಚನೆಯ ಹಿಂದಿನ ಮೂಲ ತತ್ವವಾಗಿದೆ. ಇದಕ್ಕೆ ಬದ್ಧವಾಗಿ ಎಎಪಿ ಬೆಂಬಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಕಾಂಗ್ರೆಸ್ ಪರಸ್ಪರ ಮುಖಾಮುಖಿಯಾಗುತ್ತಿವೆ. ಎಎಪಿ ಅಲ್ಲಿ ಪ್ರಬಲವಾಗಿರುವುದರಿಂದ ಮೈತ್ರಿಕೂಟದ ಎಲ್ಲ ಪಕ್ಷಗಳು ಆಮ್ ಆದ್ಮಿ ಪಕ್ಷವನ್ನೇ ಬೆಂಬಲಿಸಬೇಕು ಎಂಬುದು ನನ್ನ ಸಲಹೆ. ಬಿಜೆಪಿಯನ್ನು ಸೋಲಿಸುವುದೇ ನಮ್ಮೆಲ್ಲರ ಗುರಿ ಎಂದು ಹೇಳಿದರು.