ಸೇನಾಪಡೆಗಳಿಂದ ಪಾಕಿಸ್ತಾನ ಮೂಲದ ಉಗ್ರನ ಬಂಧನ

ಬುಧವಾರ, 27 ಜುಲೈ 2016 (14:12 IST)
ಸೇನಾಪಡೆಗಳೊಂದಿಗೆ ನಡೆದ ಉಗ್ರರ ಎನ್‌ಕೌಂಟರ್‌ನಲ್ಲಿ ಉಗ್ರನೊಬ್ಬನನ್ನು ಜೀವಂತವಾಗಿ ಸೆರೆಹಿಡಿಯಲಾಗಿದ್ದು, ಸೆರೆಹಿಡಿದ ಉಗ್ರ ಪಾಕಿಸ್ತಾನ ಮೂಲದವನು ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
 
ಉಗ್ರ ಬಹಾದ್ದೂರ್ ಅಲಿ ಪಾಕಿಸ್ತಾನದ ಲಾಹೋರ್ ನಿವಾಸಿಯಾಗಿದ್ದಾನೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಹಂಸರಾಜ್ ಆಹಿರ್ ತಿಳಿಸಿದ್ದಾರೆ.
 
ಕುಪ್ವಾರಾ ಜಿಲ್ಲೆಯ ನೌಗಾಮ್ ಸೆಕ್ಟರ್‌ನಲ್ಲಿ ಸೇನಾಪಡೆಗಳು ಮತ್ತು ಲಷ್ಕರ್-ಎ-ತೊಯಿಬಾ ಸಂಘಟನೆಯ ಉಗ್ರರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರು ಹತರಾಗಿದ್ದು ಒಬ್ಬನನ್ನು ಜೀವಂತವಾಗಿ ಸೆರೆಹಿಡಿಯಲಾಗಿತ್ತು.
 
22 ವರ್ಷ ವಯಸ್ಸಿನ ಬಹದ್ದೂರ್ ಅಲಿ ಅಲಿಯಾಸ್ ಸೈಫುಲ್ಲಾ ಲಷ್ಕರ್-ಎ-ತೊಯಿಬಾ ಉಗ್ರಗಾಮಿ ಸಂಘಟನೆಯ ಗೆರಿಲ್ಲಾ ಯುದ್ಧಧ ವಿಭಾಗದಲ್ಲಿ ತರಬೇತಿ ಪಡೆದಿದ್ದನು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. 
 
ಉಗ್ರನಿಂದ ಮೂರು ಎಕೆ-47 ರೈಫಲ್‌ಗಳು ಮತ್ತು 23 ಸಾವಿರ ರೂಪಾಯಿಗಳನ್ನು ಭಾರತೀಯ ಕರೆನ್ಸಿಯನ್ನು ಸೇನಾಪಡೆಗಳು ವಶಕ್ಕೆ ತೆಗೆದುಕೊಂಡಿವೆ.   
 
ಕಳೆದ ಎರಡು ತಿಂಗಳುಗಳ ಅವಧಿಯಲ್ಲಿ ಸೇನಾಪಡೆಗಳು ಪಾಕಿಸ್ತಾನ ಮೂಲದ ಇಬ್ಬರು ಉಗ್ರರನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿವೆ. ಉಗ್ರರು ಪಾಕಿಸ್ತಾನ ಆಕ್ರಮಿತ ಕಾಶ್ಮಿರದ ತೀಥ್‌ವಾಲ್ ಪ್ರದೇಶದಿಂದ ಭಾರತದ ಗಡಿಯೊಳಗೆ ನುಸುಳಿದ್ದರು ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
 
ಉಗ್ರರು ಮೊದಲು ತೀಥ್‌ವಾಲ್ ಪ್ರದೇಶದಿಂದ ತಂಗದಾರ್ ಸೆಕ್ಟರ್‌ಗೆ ತೆರಳಿದ್ದರು. ನಂತರ ಲೀಪಾ ಕಣಿವೆಯನ್ನು ಪ್ರವೇಶಿಸಿ ನಂತರ ಅರಣ್ಯ ಪ್ರದೇಶದೊಳಗೆ ಅಡಗಿದ್ದರು. ಉಗ್ರರು ಅರಣ್ಯದೊಳಗೆ ಅಡಗಿರುವ ಮಾಹಿತಿ ಪಡೆದ ಸೇನಾಪಡೆಗಳು ದಾಳಿ ನಡೆಸಿ ನಾಲ್ವರು ಉಗ್ರರನ್ನು ಹತ್ಯೆಗೈದಿದ್ದರು.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ