ಹೆಚ್ಚುತ್ತಿರುವ ಆಪ್ ಪ್ರಭಾವಕ್ಕೆ ಬೆದರಿ ಆನಂದಿ ಬೆನ್ ಪದತ್ಯಾಗ: ಕೇಜ್ರಿವಾಲ್

ಮಂಗಳವಾರ, 2 ಆಗಸ್ಟ್ 2016 (14:53 IST)
ಸದಾ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಿಳಿಯಲು ಯಾವುದೇ ಅವಕಾಶಗಳನ್ನು ತಪ್ಪಿಸಿಕೊಳ್ಳದ ಆಪ್ ನಾಯಕ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಗುಜರಾತ್‌ನಲ್ಲಿ  ಬಿಜೆಪಿ ಮುಖ್ಯಮಂತ್ರಿ ಆನಂದಿ ಬೆನ್ ರಾಜೀನಾಮೆ ನೀಡಲು ಪರೋಕ್ಷವಾಗಿ ಆಪ್ ಕಾರಣವೆಂದಿದ್ದಾರೆ. ರಾಜ್ಯದಲ್ಲಿ ಬೆಳೆಯುತ್ತಿರುವ ಆಪ್ ಪ್ರಭಾವಕ್ಕೆ ಹೆದರಿ ಅವರು ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ ಎಂದು ಸಿಎಂ ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಜನಪ್ರಿಯತೆ ಆನಂದಿ ಬೆನ್ ಅವರು ಪದತ್ಯಾಗ ಮಾಡಲು ಒತ್ತಡ ಹೇರಿದೆ ಎಂದು ಆಪ್ ನಾಯಕ ಟ್ವೀಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಭೃಷ್ಟಾಚಾರದ ವಿರುದ್ಧ ಹೋರಾಡುವ ಆಪ್ ರಾಜಕೀಯ ಸಂಕಲ್ಪ ಕೂಡ ಪಟೇಲ್ ನಿರ್ಗಮನಕ್ಕೆ ಕಾರಣವಾಗಿದೆ ಎಂದವರ ಇನ್ನೊಂದು ಟ್ವೀಟ್ ಹೇಳುತ್ತದೆ.

ನವೆಂಬರ್ ತಿಂಗಳಲ್ಲಿ ತನಗೆ 75 ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಲು ಸಿದ್ಧಳಾಗಿದ್ದೇನೆ ಎಂದು ಸೋಮವಾರ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದ ಆನಂದಿ ಬೆನ್ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನದಿಂದ ಬಿಡುಗಡೆ ಕೋರಿ 2 ತಿಂಗಳ ಹಿಂದೆಯೇ ಮನವಿ ಮಾಡಿಕೊಂಡಿದ್ದೆ. ನವೆಂಬರ್ ತಿಂಗಳಿನಲ್ಲಿ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಯಲು ಇದು ತುಂಬಾ ಸರಿಯಾದ ಸಮಯವಾಗಿದೆ.  ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗಾಗಿ ಹೊಸ ನಾಯಕತ್ವ ವಹಿಸಿಕೊಳ್ಳುವವರಿಗೆ ಹೆಚ್ಚಿನ ಸಮಯಾವಕಾಶ ಮಾಡಿಕೊಡುತ್ತೇನೆ ಎಂದು ಆನಂದಿಬೆನ್ ಫೇಸ್‍ಬುಕ್‌ಲ್ಲಿ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ