ನವದೆಹಲಿ:ಒಂದೆಡೆ ಪಾಕಿಸ್ತಾನ ಇನ್ನೊಂದೆಡೆ ಚೀನಾ ದೇಶಗಳು ಗಡಿಯಲ್ಲಿ ಯುದ್ಧೋತ್ಸಾಹದಲ್ಲಿದ್ದು, ಒಂದೊಮ್ಮೆ ಈ ಸಂದರ್ಭದಲ್ಲಿ ಯುದ್ಧವೇನಾದರೂ ನಡೆದರೆ ಭಾರತೀಯ ಸೇನೆಯಲ್ಲಿ ಶಸ್ತ್ರಾಸ್ತ್ರಗಳ ಅಭಾವ ಇದ್ದು, ಶೇ.40ರಷ್ಟು ಶಸ್ತ್ರಾಸ್ತ್ರಗಳ ಕೊರತೆ ಇದೆ ಎಂದು ಮಹಾಲೇಖಪಾಲ(ಸಿಎಜಿ) ವರದಿ ನೀಡಿದೆ.
ಅಂದರೆ ಅಕಸ್ಮಾತ್ ಯುದ್ಧ ನಡೆದರೆ ಕೇವಲ ಹತ್ತೇ ದಿನದಲ್ಲಿ ಭಾರತದ ಬಳಿ ಇರುವ ಶಸ್ತ್ರಾಸ್ತ್ರಗಳು ಖಾಲಿಯಾಗುತ್ತವೆ. ಭಾರತೀಯ ಸೇನೆಯ ಬಳಿ ಇರುವ ಶಸ್ತ್ರಾಸ್ತ್ರಗಳ ಬಗ್ಗೆ ಲೆಕ್ಕ ಪರಿಶೋಧನಾ ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವರದಿಯಲ್ಲಿ ಯುದ್ಧ ನಡೆದರೆ ಭಾರತೀಯ ಸೇನೆಗೆ 152 ವಿಧದ ಶಸ್ತ್ರಾಸ್ತ್ರಗಳು ತುರ್ತಾಗಿ ಬೇಕಾಗುತ್ತದೆ. ಆದರೆ ಈ ಪೈಕಿ 61 ವಿಧದ ಶಸ್ತ್ರಾಸ್ತ್ರಗಳು ಸತತ 10 ದಿನ ಯುದ್ಧ ನಡೆದರೆ ಖಾಲಿಯಾಗುತ್ತವೆ. 31 ವಿಧದ ಶಸ್ತ್ರಾಸ್ತ್ರಗಳ ದಾಸ್ತಾನು ತೃಪ್ತಿದಾಯಕವಾಗಿದೆಯಾದರೂ ಉಳಿದ 60 ವಿಧದ ಶಸ್ತ್ರಾಸ್ತ್ರಗಳ ಪ್ರಮಾಣ ಕಡಿಮೆ ಪ್ರಮಾಣದಲ್ಲಿವೆ ಎಂದು ತಿಳಿಸಿದೆ.