ನಿಯಂತ್ರಣಕ್ಕೆ ಬಾರದ ಹಿಂಸಾಚಾರ; ಇಂದು ರಾಜನಾಥ್ ಜಮ್ಮು ಕಾಶ್ಮೀರಕ್ಕೆ

ಬುಧವಾರ, 24 ಆಗಸ್ಟ್ 2016 (10:33 IST)
ಜಮ್ಮು ಕಾಶ್ಮಿರದಲ್ಲಿ ಹಿಂಸಾಚಾರ 47ನೇ ದಿನಕ್ಕೆ ತಲುಪಿದ್ದು ಪರಿಸ್ಥಿತಿಯ ಅವಲೋಕನಕ್ಕಾಗಿ ಕೇಂದ್ರ ಗೃಹ  ಸಚಿವ ರಾಜನಾಥ್ ಸಿಂಗ್  ಇಂದಿನಿಂದ ಎರಡು ದಿನಗಳ ಕಾಲ ಜಮ್ಮು ಕಾಶ್ಮೀರದಲ್ಲಿರಲಿದ್ದಾರೆ.
 
ಕಣಿವೆನಾಡಿನಲ್ಲಿ ರಾಜಕಾರಣಿಗಳು, ಸಿವಿಲ್ ಸೊಸೈಟಿ ಸದಸ್ಯರನ್ನು ಭೇಟಿಯಾಗಲಿರುವ ಗೃಹ ಸಚಿವರು ಪ್ರಸ್ತುತ ನಡೆಯುತ್ತಿರುವ ಪರಿಸ್ಥಿತಿಗೆ ನೀಡಬೇಕಾದ ಪರಿಹಾರದ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
 
ಅವರೊಂದಿಗೆ ಗೃಹ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಮಹರ್ಷಿ ಕೂಡಾ ಜಮ್ಮು ಕಾಶ್ಮೀರಕ್ಕೆ ತೆರಳಲಿದ್ದಾರೆ.
 
ಕಳೆದ ಜುಲೈ 9 ರಂದು ಸೇನಾಪಡೆಗಳು ಹಿಜ್ಬುಲ್ ಮುಜಾಹಿದಿನ್ ಉಗ್ರ ಬುರ್ಹಾನ್ ವಾನಿಯನ್ನು ಎನ್‌ಕೌಂಟರ್ ಮಾಡಿದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮಿರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇಲ್ಲಿಯವರೆಗೆ 66 ನಾಗರಿಕರು ಮತ್ತು ಇಬ್ಬರು ಪೊಲೀಸರು ಮತ್ತು 68 ಮಂದಿ ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಈ ತಿಂಗಳಲ್ಲಿ ಸಿಂಗ್ ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೆಯ ಬಾರಿ. ಕಳೆದ ವಾರ ಅವರು ರಾಷ್ಟ್ರ ರಾಜಧಾನಿಯಲ್ಲಿ ಕಾಶ್ಮೀರದ ವಿರೋಧ ಪಕ್ಷದ ನಾಯಕರ ಜತೆ ಸರಣಿ  ಸಭೆ ನಡೆಸಿದ್ದರು. ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜತೆ ಸಹ ಚರ್ಚೆ ನಡೆಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ