ಕಾಶ್ಮೀರ ಹಿಂಸಾಚಾರಕ್ಕೆ ಪಾಕ್ ನೇರ ಹೊಣೆ: ಮುಫ್ತಿ

ಶನಿವಾರ, 27 ಆಗಸ್ಟ್ 2016 (12:18 IST)
ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪಾಕಿಸ್ತಾನವೇ ನೇರ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ  ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ ಸಿಎಂ ಪಾಕಿಸ್ತಾನದ ವಿರುದ್ಧ ಕಿಡಿಕಾರಿದರು. 
 
ಪಾಕ್ ಪದೇ ಪದೇ ನಮ್ಮನ್ನು ಕೆಣಕುತ್ತಿದೆ. ನಮ್ಮ ವಿಚಾರದಲ್ಲಿ ಮಧ್ಯಪ್ರವೇಶಿಸುವುದು ಒಳ್ಳೆಯದಲ್ಲ, ಸರಿಯೂ ಅಲ್ಲ ಎಂದು ಅವರು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. 
 
ನಮ್ಮ ಪ್ರಧಾನಿ ಎರಡು ದೇಶಗಳ ನಡುವೆ ಬಾಂಧವ್ಯ ವೃದ್ಧಿಗೆ ಯತ್ನಿಸಿದರೆ ಪಾಕ್ ಭಯೋತ್ಪಾದನೆ ಮೂಲಕ ಉತ್ತರ ನೀಡುತ್ತಿದೆ. ಬಹಿರಂಗವಾಗಿಯೇ ಪಾಕ್ ಎಲ್ಲವನ್ನು ಮಾಡುತ್ತಿದೆ. ಅವರು ನಮ್ಮ ಗೃಹ ಸಚಿವರನ್ನು ನಡೆಸಿಕೊಂಡ ರೀತಿ ಸಹ ತಪ್ಪು ಎಂದು ಮುಫ್ತಿ ಗುಡುಗಿದ್ದಾರೆ.
 
ಕಾಶ್ಮೀರಲ್ಲಿನ ಪರಿಸ್ಥಿತಿ ನಿಭಾಯಿಸಲು ಪಿಡಿಪಿ-ಬಜೆಪಿ ಸರ್ಕಾರ ಬದ್ಧ ಎಂದ ಅವರು, ಕಾಶ್ಮೀರ ಸಮಸ್ಯೆಗೆ ವಾಜಪೇಯಿ ಸೂತ್ರದಂತೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಫ್ತಿ ಭರವಸೆ ನೀಡಿದ್ದಾರೆ. 
 
ಕಾಶ್ಮೀರದ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತ ಪಡಿಸಿರುವ ಪ್ರಧಾನಿ ಎಲ್ಲಾ ರೀತಿಯ ನೆರವಿನ ಭರವಸೆಯನ್ನು ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. 
 
 
 
 
 
 

ವೆಬ್ದುನಿಯಾವನ್ನು ಓದಿ