'ರಾಹುಲ್ ಕಿ ಪತಾ ಬತಾವೋ, ಏಕ್ ಲಾಖ್ ರೂಪಯಾ ಪಾವೋ' (ರಾಹುಲ್ ವಿಳಾಸ ತಿಳಿಸಿ, ಒಂದು ಲಕ್ಷ ರೂಪಾಯಿ ಬಹುಮಾನ ಪಡೆಯಿರಿ) ಎಂದು ಮಧ್ಯಪ್ರದೇಶ್ ಬಿಜೆಪಿ ವಕ್ತಾರ ವಿಜೇಂದ್ರ ಸಿಂಗ್ ಸಿಸೋಡಿಯಾ ಘೋಷಿಸಿದ್ದಾರೆ.
ಕೆಲ ತಿಂಗಳುಗಳ ಹಿಂದೆ ರಾಹುಲ್ ವಿದೇಶಕ್ಕೆ ಹೋದಾಗ ಅವರು ಬ್ರೈನ್ ಸ್ಟೊರ್ಮಿಂಗ್ ಸೆಷನ್‌ಗೆಂದು ಹೋಗಿದ್ದಾರೆ. ಹೆಚ್ಚು ಎನರ್ಜಿಯೊಂದಿಗೆ ಮರಳಿ ಬರಲಿದ್ದಾರೆ ಎಂದು ಕಾಂಗ್ರೆಸ್ ಹೇಳಿತ್ತು. ಬಳಿಕ ರಾಹುಲ್ ಥೈಲ್ಯಾಂಡ್, ಮಲೇಶಿಯಾ, ಬ್ಯಾಂಕಾಕ್, ಸಿಂಗಾಪುರಕ್ಕೆ ಹೋಗಿದ್ದಾರೆ ಎನ್ನಲಾಯಿತು. ಈಗ ತಮ್ಮ ಎನರ್ಜಿ ಲೆವಲ್ ತಗ್ಗಿದೆ ಎಂದು ರಾಹುಲ್ ಅವರಿಗೆ ಅನ್ನಿಸಿರಬೇಕು. ಅದಕ್ಕೆ ಚಾರ್ಜ್ ಮಾಡಿಕೊಳ್ಳಲು ವಿದೇಶಕ್ಕೆ ಹೋಗಿದ್ದಾರೆ. ಅವರೆಲ್ಲಿ ಹೋಗಿದ್ದಾರೆ? ಯಾರನ್ನವರು ಭೇಟಿ ಮಾಡುತ್ತಿದ್ದಾರೆ? ಹೇಗೆ ಚಾರ್ಜ್ ಪಡೆಯುತ್ತಾರೆ? ಎಷ್ಟು ದಿನ ಚಾರ್ಜ್ ಆಗುತ್ತಾರೆ? ದೇಶ ಅದನ್ನು ತಿಳಿಯಬಯಸುತ್ತದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ನಾಯಕನ ಘೋಷಣೆಗೆ ಹರಿತವಾಗಿಯೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ರವಿ ಸೆಕ್ಸೆನಾ, ಬಿಜೆಪಿ ನಾಯಕರಿಗೆ ರಾಹುಲ್ ಫೋಬಿಯಾ. ವಿಶೇಷ ಭದ್ರತೆ ಹೊಂದಿರುವ ರಾಹುಲ್ ಎಲ್ಲಿಗೆ ಹೋಗಿರುತ್ತಾರೆ ಎಂದು ಗೃಹ ಇಲಾಖೆಗೆ ತಿಳಿದಿರುತ್ತದೆ. ಹೀಗಾಗಿ ರಾಹುಲ್ ವಿಳಾಸವನ್ನು ಕೇಂದ್ರ ಗೃಹ ಸಚಿವರ ಬಳಿ ಕೇಳಿ ತಿಳಿದು ಅವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡಲಿ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.