ಸುಬ್ರಹ್ಮಣ್ಯಂ ಸ್ವಾಮಿ ವಿರುದ್ಧ ಬಿಜೆಪಿ ಅಸಮಾಧಾನ: ಶಿಸ್ತು ಕ್ರಮಕ್ಕೆ ಚಿಂತನೆ

ಶುಕ್ರವಾರ, 24 ಜೂನ್ 2016 (20:05 IST)
ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಬಿಜೆಪಿ ಹೈಕಮಾಂಡ್ ಕೆಂಗೆಣ್ಣಿಗೆ ಗುರಿಯಾಗಿದೆ.  
 
ಬಿಜೆಪಿ ಪಕ್ಷದ ನಿಯಮದಂತೆ ಶಿಸ್ತು ಪಾಲಿಸುವುದನ್ನು ಕಲಿಯಿರಿ ಎಂದು ಸಚಿವ ಅರುಣ್ ಜೇಟ್ಲಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸ್ವಾಮಿ, ನನಗೆ ಶಿಸ್ತು ಕಲಿ ಎಂದು ಹೇಳಿದರೆ ರಕ್ತಪಾತವಾದಿತು ಎಂದು ಗುಡುಗಿ ತಿರುಗೇಟು ನೀಡಿದ್ದಾರೆ.
 
ಬಿಜೆಪಿ ಸಂಸದ ಸ್ವಾಮಿ ವಿರುದ್ಧ ಬಿಜೆಪಿ ಶಿಸ್ತು ಕ್ರಮ ಜರುಗಿಸುವ ಅವಸರ ತೋರುವುದಿಲ್ಲ. ಕಾದು ನೋಡುವ ತಂತ್ರ ಅನುಸರಿಸುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
 
ಪರೋಕ್ಷವಾಗಿ ಆರೆಸ್ಸೆಸ್ ಬೆಂಬಲ ಪಡೆದಿರುವ ಸುಬ್ರಹ್ಮಣ್ಯಂ ಸ್ವಾಮಿ ವಿರುದ್ಧ ಬಿಜೆಪಿ ಶಿಸ್ತು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿಲ್ಲ. ಆರೆಸ್ಸೆಸ್ ಕೂಡಾ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ಹಿರಿಯ ಬಿಜೆಪಿ ನಾಯಕರು ತಿಳಿಸಿದ್ದಾರೆ.
 
ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯಂ ಮತ್ತು ಆರ್ಥಿಕ ಸಚಿವಾಲಯದ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತಾ ದಾಸ್ ವಿರುದ್ಧ ಯಾವುದೇ ಹೇಳಿಕೆ ನೀಡುವ ಮುನ್ನ ಪಕ್ಷದ ಶಿಸ್ತು ಪಾಲಿಸುವುದು ಮುಖ್ಯ ಎಂದು ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ, ಸುಬ್ರಹ್ಮಣ್ಯಂ ಸ್ವಾಮಿಗೆ ಸಲಹೆ ನೀಡಿದ್ದರು. 
 
ಸಚಿವ ಅರುಣ್ ಜೇಟ್ಲಿ ಸಲಹೆಯಿಂದ ಆಕ್ರೋಶಗೊಂಡ ಬಿಜೆಪಿ ಸಂಸದ ಸುಬ್ರಹ್ಮಣ್ಯಂ ಸ್ವಾಮಿ,  ಕೆಲವರು ನನಗೆ ಶಿಸ್ತಿನ ಬಗ್ಗೆ ಸಲಹೆ ನೀಡುತ್ತಾರೆ. ಒಂದು ವೇಳೆ ನಾನು ಶಿಸ್ತು ಪಾಲಿಸದಿದ್ದಲ್ಲಿ ರಕ್ತಪಾತವಾಗುತ್ತಿತ್ತು ಎಂದು ಸಚಿವ ಅರುಣ್ ಜೇಟ್ಲಿಗೆ ತಿರುಗೇಟು ನೀಡಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ