ರಾಜಸ್ಥಾನ: ಜಡ್ಜ್ ಚೇಂಬರ್‌ನಲ್ಲಿಯೇ ಗುಂಡಿನ ದಾಳಿ ನಡೆಸಿದ ಆರೋಪಿಗಳು

ಮಂಗಳವಾರ, 2 ಆಗಸ್ಟ್ 2016 (17:35 IST)
ರಾಜಸ್ಥಾನದ ಹನುಮಾನ್‌ಗಢ್ ಜಿಲ್ಲೆಯ ಕೋರ್ಟ್‌ನ ನ್ಯಾಯಮೂರ್ತಿಗಳ ಚೇಂಬರ್‌ನಲ್ಲಿಯೇ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿ  ಒಬ್ಬ ವ್ಯಕ್ತಿಯನ್ನು ಗಾಯಗೊಳಿಸಿದ ಭೀಕರ ಘಟನೆ ವರದಿಯಾಗಿದೆ.
 
ಹನಮಾನಗಢ್ ಕೋರ್ಟ್‌ನಲ್ಲಿ ಕಲಾಪಗಳು ಎಂದಿನಂತೆ ನಡೆಯುತ್ತಿರುವಾಗ, ಕೇಳಿಬಂದ ಗುಂಡಿನ ಶಬ್ದಗಳು ಅಲ್ಲಿಯೇ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ತಲ್ಲಣಗೊಳಿಸಿವೆ.
 
ಇಬ್ಬರು ವ್ಯಕ್ತಿಗಳು ದೇಶಿಯ ಪಿಸ್ತೂಲ್ ತೆಗೆದುಕೊಂಡು ನ್ಯಾಯಮೂರ್ತಿಗಳ ಚೇಂಬರ್‌ಗೆ ನುಗ್ಗಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ. 
 
ಗುಂಡಿನ ಶಬ್ದದಿಂದ ಜಾಗೃತರಾದ ಪೊಲೀಸರು ಗುಂಡಿನ ದಾಳಿ ನಡೆಸಿ ಪರಾರಿಯಾಗುತ್ತಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 
 
ಸ್ಥಳೀಯ ಕಾಂಗ್ರೆಸ್ ನಾಯಕ ಬಲರಾಮ್ ಬಕಾರಿಯಾನನ್ನು ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಬಕಾರಿಯಾ ಗೆಳೆಯ ಕೂಡಾ ಕೋರ್ಟ್‌ನಲ್ಲಿ ಉಪಸ್ಥಿತನಿದ್ದ ಎನ್ನಲಾಗಿದೆ. 
 
ಇಬ್ಬರು ವ್ಯಕ್ತಿಗಳಾದ ಧರ್ಮೇಂದ್ರ ಮತ್ತು ಸುಖ್ಬೀರ್ ಅಲಿಯಾ ಮಹಾಂತಾ ತಮ್ಮ ಸಹೋದರನ ಹತ್ಯೆಯ ರೂವಾರಿಯಾದ ಬಲರಾಮನನ್ನು ಹತ್ಯೆ ಮಾಡುವ ಉದ್ದೇಶದಿಂದ ಕೋರ್ಟ್‌ಗೆ ಆಗಮಿಸಿದ್ದಾರೆ. 
 
ಬಲರಾಮ್ ಕೋರ್ಟ್ ಒಳಗೆ ಪ್ರವೇಶಿಸುತ್ತಿದ್ದಂತೆ ಸುಖ್ಬೀರ್ ಗುಂಡಿನ ದಾಳಿ ನಡೆಸಿದ್ದಾನೆ. ಆ ಸಂದರ್ಭದಲ್ಲಿ ಬಲರಾಮ್‌ ಗೆಳೆಯ ಹರೀಶ್ ಸಿಂಗ್ ಅಡ್ಡಬಂದಿದ್ದಾನೆ. ಕೋರ್ಟ್‌ನಲ್ಲಿ ಉಂಟಾದ ಗೊಂದಲದ ಲಾಭ ಪಡೆದು  ಧರ್ಮೇಂದ್ರ ಮತ್ತು ಸುಖ್ಬೀರ್ ಪರಾರಿಯಾಗಲು ಪ್ರಯತ್ನಿಸಿದ್ದಾರೆ. 
 
ಆದರೆ, ಪೊಲೀಸರು ಜನರ ಸಹಾಯದಿಂದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಲರಾಮ್ ಇಂದು ನೀನು ಬಚಾವ್ ಆಗಿದ್ದೀಯಾ, ಒಂದಲ್ಲಾ ಒಂದು ದಿನ ನಾನು ನಿನ್ನನ್ನು ಕೊಲ್ಲುತ್ತೇನೆ ಎಂದು ಸುಖ್ಬೀರ್ ಗುಡುಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ