ಭೂಗತ ಪಾತಕಿ, ತಿಹಾರ್ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ರಾಜೇಂದ್ರ ಸದಾಶಿವ್ ನಿಖಲ್ಜೆ ಅಲಿಯಾಸ್ ಛೋಟಾ ರಾಜನ್, ನಕಲಿ ಪಾಸ್ ಪೋರ್ಟ್ ಬಳಸಿದ ಪ್ರಕರಣದಲ್ಲಿ ದೋಷಿಯೆಂದು ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ. ಛೋಟಾ ರಾಜನ್ ಸೇರಿ ಅವನಿಗೆ ಸಹಕರಿಸಿದ ಮೂವರು ಸರ್ಕಾರಿ ಅಧಿಕಾರಿಗಳು ದೋಷಿಗಳೆಂದು ವಿಶೇಷ ನ್ಯಾಯಾಧೀಶ ವೀರೇಂದರ್ ಕುಮಾರ್ ಗೋಯಲ್ ತೀರ್ಪಿತ್ತಿದ್ಧಾರೆ.
ಮೋಹನ್ ಕುಮಾರ್ ಎಂಬುವವರ ಹೆಸರಲ್ಲಿ ನಕಲಿ ಪಾಸ್ ಪೋರ್ಟ್ ಪಡೆದಿದ್ದ ಛೋಟಾ ರಾಜನ್ ಅದರಲ್ಲೇ ಹಲವು ದೇಶಗಳಿಗೆ ಸಂಚಾರ ನಡೆಸಿದ್ದ. ಈತನಿಗೆ ಮೂವರು ಹಿರಿಯ ಅಧಿಕಾರಿಗಳು ಸಹಕಾರ ನೀಡಿದ್ದರು. ಈ ಬಗ್ಗೆ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು.
ನಾಲ್ವರು ಅಪರಾಧಿಗಳ ವಿರುದ್ಧ ಐಪಿಸಿ ಸೆಕ್ಷನ್ 420, 471, 468, 467, 419 ಮತ್ತು 120ಬಿ ಅಡಿಯಲ್ಲಿ ದೋಷಿಗಳೆಂದು ಘೋಷಿಸಲಾಗಿದೆ.ಛೋಟಾ ರಾಜನ್ ಸದ್ಯ, ತಿಹಾರ್ ಜೈಲಿನಲ್ಲಿದ್ದು, ಅಧಿಕಾರಿಗಳು ಜಾನು ಪಡೆದು ಹೊರಗಿದ್ದಾರೆ.
1998-99ರಲ್ಲಿ ಮೋಹನ್ ಕುಮಾರ್ ಹೆಸರಲ್ಲಿ ಅಧಿಕಾರಿಗಳಾದ ಜಯಶ್ರೀ ದತ್ತಾತ್ರೇಯ ರಹಟೆ, ದೀಪಕ್ ನಟ್ವರ್ ಲಾಲ್, ಲಲಿತಾ ಲಕ್ಷ್ಮಣ್ ನಕಲಿ ಪಾಸ್ ಪೋರ್ಟ್ ನೀಡಿದ್ದರು. ಅಕ್ಟೋಬರ್ 2015ರಲ್ಲೇ ಛೋಟಾ ರಾಜನ್`ನನ್ನ ಇಂಡೋನೇಶಿಯಾ ಪೊಲೀಸರು ಬಂಧಿಸಿದ್ದರು. ನವೇಂಬರ್ 2015ರಂದು ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಸುಲಿಗೆ, ಮಾದಕ ವಸ್ತು ಸಾಗಣೆ ಸೇರಿದಂತೆ ಮಹಾರಾಷ್ಟ್ರ, ದೆಹಲಿ, ಗುಜರಾತ್, ಉತ್ತರಪ್ರದೇಶದಲ್ಲಿ ಛೋಟಾರಾಜನ್ ವಿರುದ್ಧ 70 ಪ್ರಕರಣಗಳಿವೆ.