ಕ್ರಿಶ್ಚಿಯನ್ ಮಿಷನರಿಗಳ ಧರ್ಮ ಪ್ರಚಾರ ಕಾನೂನುಬಾಹಿರವಲ್ಲ : ಸುಪ್ರೀಂ

ಮಂಗಳವಾರ, 2 ಮೇ 2023 (13:57 IST)
ಚೆನ್ನೈ : ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರ ಮಾಡುವ ಮಿಷನರಿಗಳು ಕಾನೂನುಬಾಹಿರ ಅಥವಾ ಅಸಾಂವಿಧಾನಿಕವಲ್ಲ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.
 
ಸಂವಿಧಾನದ 25ನೇ ವಿಧಿಯು ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಧಾರ್ಮಿಕ ನಂಬಿಕೆಯನ್ನು ಪ್ರಚಾರ ಮಾಡುವ ಮತ್ತು ಇತರರಿಗೆ ಬೋಧಿಸುವ ಹಕ್ಕನ್ನು ನೀಡುತ್ತದೆ. ಮಿಷನರಿಗಳು ಸಾರ್ವಜನಿಕ ಸುವ್ಯವಸ್ಥೆ ಅಥವಾ ನೈತಿಕತೆಯ ವಿರುದ್ಧವಾಗಿಲ್ಲ. ಆದರೆ ಬೆದರಿಕೆ, ವಂಚನೆ, ಉಡುಗೊರೆಗಳ ಮೂಲಕ, ಮಾಟಮಂತ್ರ ಅಥವಾ ಮೂಢನಂಬಿಕೆಯ ಮೂಲಕ ಆಮಿಷ ಒಡ್ಡುವ ಧಾರ್ಮಿಕ ಮತಾಂತರವು ಅನ್ಯಾಯ ಮತ್ತು ಶೋಷಣೆ ಎನಿಸಿಕೊಳ್ಳುತ್ತದೆ ಎಂದು ಉಲ್ಲೇಖಿಸಿದೆ. 

ಧರ್ಮವನ್ನು ಪ್ರಸರಿಸುವ ಕಾರ್ಯವು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯಕ್ಕೆ ವಿರುದ್ಧವಾಗಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಮಿಳುನಾಡು ಸರ್ಕಾರ ತಿಳಿಸಿದೆ. ಭಾರತ ಜಾತ್ಯತೀತ ರಾಷ್ಟ್ರವಾಗಿ ಪ್ರತಿಯೊಬ್ಬ ಪ್ರಜೆಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಇದರಿಂದ ವ್ಯಕ್ತಿ ಯಾವುದೇ ಧರ್ಮವನ್ನು ಅನುಸರಿಸುವ ಹಕ್ಕನ್ನು ಹೊಂದಿರುವುದರಿಂದ ಆತನ ನಿರ್ಧಾರವನ್ನು ತಡೆಯಲಾಗುವುದಿಲ್ಲ ಎಂದಿದೆ.

ದೇಶದಲ್ಲಿ ಹಲವಾರು ಧರ್ಮಗಳು ಆಚರಣೆಯಲ್ಲಿವೆ. ಅಲ್ಲದೆ ವ್ಯಕ್ತಿ ತನಗೆ ಬೇಕಾದ ಧರ್ಮವನ್ನು ಆಯ್ದುಕೊಳಬಹುದು. ತನ್ನ ಧರ್ಮವನ್ನು ಶಾಂತಿಯುತವಾಗಿ ಆಚರಿಸಲು ಮತ್ತು ಪ್ರಚಾರ ಮಾಡಲು ಅವಕಾಶವಿದೆ ಇದನ್ನು ಹತ್ತಿಕ್ಕಲಾಗುವುದಿಲ್ಲ. ಮತಾಂತರ ವಿರೋಧಿ ಕಾನೂನುಗಳು ಅಲ್ಪಸಂಖ್ಯಾತರ ವಿರುದ್ಧ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ