ಆಮ್ನೆಸ್ಟಿಗೆ ಕ್ಲೀನ್ ಚಿಟ್?

ಶುಕ್ರವಾರ, 26 ಆಗಸ್ಟ್ 2016 (08:12 IST)
ದೇಶದ್ರೋಹ ಆರೋಪವನ್ನು ಪುಷ್ಟೀಕರಿಸುವ ಯಾವ ಸಾಕ್ಷ್ಯವೂ ಸಿಕ್ಕಿಲ್ಲವಾದ್ದರಿಂದ ಆಮ್ನೆಸ್ಟಿ ಸಂಸ್ಥೆಗೆ ಕ್ಲೀನ್ ಚೀಟ್ ಸಿಗುವ ಸಾಧ್ಯತೆಗಳಿವೆ.

ಎಬಿವಿಪಿ, ಆಮ್ನೆಸ್ಟಿ ಸಂಸ್ಥೆ ನೀಡಿರುವ ಮತ್ತು ಪೊಲೀಸರು ಸಂಗ್ರಹಿಸಿರುವ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, 25 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ದೇಶದ್ರೋಹವನ್ನು ಸಾಬೀತು ಪಡಿಸುವ ಯಾವುದೇ ದಾಖಲೆಗಳು ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. 
 
ಅಷ್ಟೇ ಅಲ್ಲದೇ ಎಬಿವಿಪಿ ಕಾರ್ಯಕರ್ತ ಜಯಪ್ರಕಾಶ್ ಅವರು ಬೇರೊಬ್ಬರು ಹೇಳಿದ್ದ ಊಹಾತ್ಮಕ ವಿಚಾರಗಳನ್ನು ದೂರಿನಲ್ಲಿ ನೀಡಿದ್ದಾರೆ. ಜತೆಗೆ ಅವರು ನೀಡಿರುವ ದೂರಿನಲ್ಲಿ  ಸಾಕಷ್ಟು ಗೊಂದಲಗಳಿವೆ. ಪಾಕಿಸ್ತಾನ, ಐಎಸ್ಐ ಪರ ಘೋಷಣೆ ಕೂಗಿದ್ದಕ್ಕೆ ಸಾಕ್ಷಿಯಾಗಿ ಯಾವುದೇ ವಿಡಿಯೋ ಇಲ್ಲ ಎಂದು ತಿಳಿದು ಬಂದಿದೆ.
 
ನಗರದ ವಸಂತನದರದಲ್ಲಿರುವ ದಿ ಯುನೈಟೆಡ್ ಥಿಯಾಲಜಿಕಲ್ ಕಾಲೇಜಿನಲ್ಲಿ ಆಮ್ನೆಸ್ಟಿ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕಳೆದ ಕೆಲ ದಿನಗಳ ಹಿಂದೆ ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
 
ಇದನ್ನು ಪ್ರತಿಭಟಿಸಿ ಎಬಿವಿಪಿ ವ್ಯಾಪಕ ಪ್ರತಿಭಟನೆಯನ್ನು ಕೈಗೊಂಡಿತ್ತು. ಅಷ್ಟೇ ಅಲ್ಲದೇ ಆಮ್ನೆಸ್ಟಿ ಸಂಸ್ಥೆ ವಿರುದ್ಧ ದೇಶದ್ರೋಹ, ಕೋಮುಗಲಭೆ ಸೃಷ್ಟಿಸಿದ ಆರೋಪ ಹೊರಿಸಿ ಎಫ್ಐಆರ್ ದಾಖಲಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ