ಆಪ್ ಶಾಸಕರಿಗೆ 25 ಕೋಟಿ ಆಫರ್: ಬಿಜೆಪಿ ಮೇಲೆ ಕೇಜ್ರಿವಾಲ್ ಆರೋಪ

Krishnaveni K

ಶನಿವಾರ, 27 ಜನವರಿ 2024 (11:23 IST)
ನವದೆಹಲಿ: ಸರ್ಕಾರ ಬೀಳಿಸಲು ಬಿಜೆಪಿ ನಮ್ಮ ಶಾಸಕರಿಗೆ 25 ಕೋಟಿ ರೂ. ಆಫರ್ ನೀಡಿತ್ತು ಎಂದು ದೆಹಲಿ ಸಿಎಂ ಅರವಿಂದ್ರ ಕೇಜ್ರಿವಾಲ್ ಆರೋಪಿಸಿದ್ದಾರೆ.

‘ಇತ್ತೀಚೆಗೆ ಒಬ್ಬರು ನಮ್ಮ ಏಳು ಶಾಸಕರನ್ನು ಸಂಪರ್ಕಿಸಿ ಮೊದಲು ಕೇಜ್ರಿವಾಲ್ ರನ್ನು ಅರೆಸ್ಟ್ ಮಾಡಿಸೋಣ. ಬಳಿಕ ಶಾಸಕರ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ಸರ್ಕಾರ ಬೀಳಿಸೋಣ ಎಂದು ಆಫರ್ ನೀಡಿದ್ದರು. ದೆಹಲಿಯಲ್ಲಿ ಆಮ್‍ ಆದ್ಮಿ ಪಕ್ಷದ ನೇತೃತ್ವದಲ್ಲಿರುವ ಸರ್ಕಾರ ಉರುಳಿಸಲು 25 ಕೋಟಿ ರೂ.ಗಳ ಆಮಿಷವೊಡ್ಡಲಾಗಿತ್ತು’ ಎಂದು ಕೇಜ್ರಿವಾಲ್ ಸೋಷಿಯಲ್ ಮೀಡಿಯಾ ಪುಟದಲ್ಲಿ ಗಂಭೀರ ಆರೋಪ ಹೊರಿಸಿದ್ದಾರೆ.

ಆದರೆ ನಮ್ಮ ಎಲ್ಲಾ ಶಾಸಕರೂ ಬಿಜೆಪಿಯವರ ಆಫರ್ ತಿರಸ್ಕರಿಸಿದರು ಎಂದು ಕೇಜ್ರಿವಾಲ್ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಅಬಕಾರಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ವಿರುದ್ಧ ಇಡಿ ಪದೇ ಪದೇ ನೋಟಿಸ್ ನೀಡುತ್ತಿರುವ ಬೆನ್ನಲ್ಲೇ ಅವರು ಇಂತಹದ್ದೊಂದು ಬಾಂಬ್ ಸಿಡಿಸಿದ್ದಾರೆ.

ತಮ್ಮ ಮೇಲೆ ಸರ್ಕಾರವೇ ಷಡ್ಯಂತ್ರ ಮಾಡಿ ಅಬಕಾರಿ ಅಕ್ರಮ ಹಗರಣದಲ್ಲಿ ಸಿಲುಕಿಸಿ ಅರೆಸ್ಟ್ ಮಾಡಿಸಲು ತಂತ್ರ ಮಾಡುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ದೇವರು ಮತ್ತು ಜನ ಯಾವತ್ತೂ ನಮ್ಮೊಂದಿಗಿದ್ದಾರೆ. ಹೀಗಾಗಿ ಅವರ ಇದುವರೆಗಿನ ಪ್ರಯತ್ನ ವಿಫಲವಾಗಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

ದೆಹಲಿ ಜನತೆ ಆಮ್ ಆದ್ಮಿ ಪಕ್ಷದ ಮೇಲೆ ಅಪಾರ ವಿಶ್ವಾಸ ಮತ್ತು ಪ್ರೀತಿ ಹೊಂದಿದೆ. ದೆಹಲಿಯ ಒಳಿತಿಗಾಗಿ ಬಿಜೆಪಿ ಏನೂ ಮಾಡಿಲ್ಲ. ಹೀಗಾಗಿ ಬಿಜೆಪಿಯವರ ನಾಟಕವೆಲ್ಲಾ ಜನಕ್ಕೆ ಗೊತ್ತಿದೆ ಎಂದು ಅವರು ದೂರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ