ವಾರಂತ್ಯಕ್ಕೆ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷದ ಮೈತ್ರಿ ಘೋಷಣೆ

ಶುಕ್ರವಾರ, 6 ಜನವರಿ 2017 (13:31 IST)
ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ದೆಹಲಿಯಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲಿದ್ದು, ಮುಂದಿನ ವಾರ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಕುರಿತಂತೆ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
 
ಸಮಾಜವಾದಿ ಪಕ್ಷದ ಬಿಕ್ಕಟ್ಟಿನಲ್ಲಿ ತಂದೆ ಮುಲಾಯಂ ಸಿಂಗ್ ವಿರುದ್ಧ ಮೇಲುಗೈ ಸಾಧಿಸಿರುವ ಸಿಎಂ ಅಖಿಲೇಶ್, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಭೇಟಿ ಮಾಡಲಿದ್ದು 90-105 ಸೀಟುಗಳ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಸಮಾಜವಾದಿ ಪಕ್ಷದ ಮೂಲಗಳು ತಿಳಿಸಿವೆ.
 
ಉತ್ತರಪ್ರದೇಶದ ವಿಧಾನಸಭೆಗೆ ಏಳು ಹಂತದ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ, ಅಖಿಲೇಶ್, ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿಯವರೊಂದಿಗೆ ಚರ್ಚೆ ನಡೆಸಿದ್ದು ವಿದೇಶದಿಂದ ರಾಹುಲ್ ಮರಳಿದೊಡನೆ ಚರ್ಚೆ ಆರಂಭವಾಗಲಿದೆ ಎನ್ನಲಾಗಿದೆ. 
 
ಮುಂಬರುವ 2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿಯನ್ನು ಮುಲಾಯಂ ಸಿಂಗ್ ಯಾದವ್ ತಳ್ಳಿಹಾಕಿದ್ದಾರೆ. 
 
ಒಂದು ವೇಳೆ ಸಮಾಜವಾದಿ ಪಕ್ಷದ ಬಿಕ್ಕಟ್ಟು ಇತ್ಯರ್ಥವಾಗದಿದ್ದಲ್ಲಿ ಅತಿ ಹೆಚ್ಚು ಶಾಸಕರ ಬಲವನ್ನು ಹೊಂದಿರುವ ಅಖಿಲೇಶ್ ಗುಂಪಿನೊಂದಿಗೆ ಮೈತ್ರಿ ಹೊಂದಲು ಕಾಂಗ್ರೆಸ್ ಚಿಂತನೆ ನಡೆಸಿದೆ.
 
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಮೈತ್ರಿ ರಚನೆಯಾದಲ್ಲಿ ಮುಸ್ಲಿಂ ಸಮುದಾಯದ ಬಹತೇಕ ಮತಗಳು ವಾಲುವ ಸಾಧ್ಯತೆಗಳಿವೆ. ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಕೂಡಾ ಮುಸ್ಲಿಂ ಸಮುದಾಯವನ್ನು ಓಲೈಸುವುದರಲ್ಲಿ ಹಿಂದೆ ಬಿದ್ದಿಲ್ಲವೆನ್ನುವುದು ಗಮನಾರ್ಹವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ