27 ಸಾಲ್ ಯುಪಿ ಬೇಹಾಲ್: ಕಾಂಗ್ರೆಸ್‌ನಿಂದ ಮೂರು ದಿನಗಳ ಬಸ್ ಯಾತ್ರೆ

ಶುಕ್ರವಾರ, 22 ಜುಲೈ 2016 (16:31 IST)
ಮುಂದಿನ ವರ್ಷದ ಆರಂಭದಲ್ಲಿ ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಲು ಕಾಂಗ್ರೆಸ್ ಪಕ್ಷ ಜುಲೈ 23 ರಂದು ದೆಹಲಿಯಿಂದ ಕಾನ್ಪುರ್‌ವರೆಗೆ ಬಸ್ ಯಾತ್ರೆ ಹಮ್ಮಿಕೊಂಡಿದೆ.
 
ದೆಹಲಿಯಿಂದ ಸುಮಾರು 600 ಕಿ.ಮೀ ದೂರದಲ್ಲಿರುವ ಕಾನ್ಪುರ್‌ವರೆಗೆ ಬಸ್ ಯಾತ್ರೆ ಹಮ್ಮಿಕೊಳ್ಳಲಾಗಿದ್ದು 27 ಸಾಲ್ ಯುಪಿ ಬೇಹಾಲ್ ಎನ್ನುವ ಶೀರ್ಷಿಕೆಯನ್ನು ಹೊಂದಿದೆ. ಬಸ್ ಯಾತ್ರೆಗೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಚಾಲನೆ ನೀಡಲಿದ್ದಾರೆ. ರಾಹುಲ್ ಕೂಡಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಲಕ್ನೋದಲ್ಲಿ ಜುಲೈ 29 ರಂದು ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಸಭೆ ನಡೆಯಲಿದ್ದು ರಾಹುಲ್ ಗಾಂಧಿ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಘಟಕದ ಅಧ್ಯಕ್ಷ ಸಂಜಯ್ ಸಿಂಗ್ ತಿಳಿಸಿದ್ದಾರೆ. 
 
ಕಳೆದ 27 ವರ್ಷಗಳ ಅವಧಿಯಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಬಿಜೆಪಿ ಪಕ್ಷಗಳು ರಾಜ್ಯದಲ್ಲಿ ದುರಾಡಳಿತ ನಡೆಸಿ ರಾಜ್ಯವನ್ನು ಸಂಪೂರ್ಣವಾಗಿ ಅಭಿವೃದ್ಧಿಹೀನವಾಗಿಸಿವೆ. ಪ್ರತಿಯೊಬ್ಬ ಮತದಾರನ್ನು ಎರಡರಿಂದ ಮೂರು ಬಾರಿ ಭೇಟಿಯಾಗುವಂತಹ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಿದ್ದೇವೆ ಎಂದರು. 
 
ಮೂರು ದಿನಗಳ ಬಸ್ ಯಾತ್ರೆಯಲ್ಲಿ ಗುಲಾಮ್ ನಬಿ ಆಜಾದ್, ರಾಜ್ ಬಬ್ಬರ್ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಶೀಲಾ ದೀಕ್ಷಿತ್ ಸೇರಿದಂತೆ ಹಿರಿಯ ನಾಯಕರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ