ಕೇಂದ್ರ ಸರ್ಕಾರ ದೂರಲು ಹೋಗಿ ಕಾಂಗ್ರೆಸ್ ನಿಂದ ಎಡವಟ್ಟು: ಕ್ಷಮೆಯಾಚನೆ

ಭಾನುವಾರ, 4 ಜೂನ್ 2017 (11:06 IST)
ನವದೆಹಲಿ:ಕೇಂದ್ರದ ಎನ್ ಡಿಎ ಸರ್ಕಾರವನ್ನು ಟೀಕಿಸುವ ಉದ್ದೇಶದಿಂದ ಉತ್ತರಪ್ರದೇಶ ರಾಜ್ಯ ಕಾಂಗ್ರೆಸ್ ಘಟಕ ಹೊರತಂದ ಕಿರುಪುಸ್ತಕದಲ್ಲಿ ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ನಮೂದಿಸಿ ಕಾಂಗ್ರೆಸ್ ಎಡವಟ್ಟಿಗೆ ಗುರಿಯಾಗಿದೆ.
 
ಕಾಂಗ್ರೆಸ್ ನಿಂದ ಆಗಿರುವ ಆಚಾತುರ್ಯಕ್ಕೆ ತೀವ್ರ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗತೊಡಗಿದ್ದು, ಪಕ್ಷ ಬಹಿರಂಗವಾಗಿ ಕ್ಷಮೆಯಾಚಿಸಿದೆ. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸರ್ಕಾರದ ವೈಫಲ್ಯಗಳ ಬಗ್ಗೆ ಬರೆಯಲಾದ ಪುಸ್ತಕವನ್ನು ಮುಖಂಡ ಗುಲಾಂ ನಬಿ ಆಜಾದ್ ಲಖನೌದಲ್ಲಿ ಬಿಡುಗಡೆ ಮಾಡಿದ್ದರು. ಆದರೆ, ಭಾರತದ ನಕಾಶೆಯಲ್ಲಿ ಭಾರತದ ಬಳಿಯಿರುವ ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ನಮೂದಿಸಿರುವುದು ಈ ವೇಳೆ ಬೆಳಕಿಗೆ ಬಂದಿತ್ತು. 
 
ಅಚಾತುರ್ಯ ಕುರಿತಂತೆ ಕಾಂಗ್ರೆಸ್ ನಾಯಕರು ಕ್ಷಮೆಯಾಚಿಸಿದ್ದು, ಮುದ್ರಣ ದೋಷದಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ. ಘಟನೆ ಕುರಿತಂತೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, ಕಾಂಗ್ರೆಸ್ ಪಾಕಿಸ್ತಾನದ ಭಾಷೆಯನ್ನು ಮಾತನಾಡುತ್ತಿದೆಯೇ? ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ಬಣ್ಣಿಸಿರುವುದು ಆಘಾತಕಾರಿ ಎಂದು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ