ನವಜೋತ್ ಸಿಧುವನ್ನು ಸೆಳೆದುಕೊಳ್ಳಲು ಕಾಂಗ್ರೆಸ್ ಪ್ರಯತ್ನ

ಶುಕ್ರವಾರ, 19 ಆಗಸ್ಟ್ 2016 (09:40 IST)
ಆಪ್ ಸೇರುವ ಇಂಗಿತದೊಂದಿಗೆ ಬಿಜೆಪಿ ತೊರೆದಿದ್ದ ಕ್ರಿಕೆಟಿಗ ಪರಿವರ್ತಿತ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರನ್ನು ತನ್ನತ್ತ ಸೆಳೆದುಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ.
 
ಬಿಜೆಪಿ ವಿರುದ್ಧ ಅಸಮಧಾನ ವ್ಯಕ್ತ ಪಡಿಸಿ ಹೊರಬಂದಿದ್ದ ಸಿಧು ಆಪ್ ಸೇರಲು ನಿರ್ಧರಿಸಿದ್ದರು ಮತ್ತು ಆಪ್ ಮುಂದೆ ಕೆಲವು ಶರತ್ತುಗಳನ್ನಿಟ್ಟಿದ್ದರು. ವರದಿಗಳ ಪ್ರಕಾರ ಕ್ರಿಕೆಟರ್ ಪರಿವರ್ತಿತ ರಾಜಕಾರಣಿ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಹೆಸರು ಘೋಷಿಸಬೇಕು ಮತ್ತು ತಮ್ಮ ಪತ್ನಿ ನವಜೋತ್ ಕೌರ್ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸೀಟು ನೀಡಬೇಕೆಂದು ಆಪ್ ನಾಯಕತ್ವದ ಮುಂದೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.ಆದರೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವುದಕ್ಕೆ ಆಪ್ ಖಡಾಖಂಡಿತವಾಗಿ ನಿರಾಕರಿಸಿತ್ತು.  
 
ಜತೆಗೆ ಆಪ್ ಸಂವಿಧಾನ ಒಂದೇ ಕುಟುಂಬದ ಇಬ್ಬರಿಗೆ ಟಿಕೆಟ್ ನೀಡುವುದಕ್ಕೆ ಅವಕಾಶವನ್ನು ನೀಡುವುದಿಲ್ಲ. ಹೀಗಾಗಿ ಅವರ ಪತ್ನಿಗೆ ಸೀಟು ಸಿಗುವುದು ಸಹ ಗಗನ ಕುಸುಮ.
 
ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸಿಧು ಕಾಂಗ್ರೆಸ್ ಸೇರಿದಂತೆ ಇತರ ಪಕ್ಷವನ್ನು ಸೇರುವ ದಾರಿಯನ್ನು ಸಹ ತೆರೆದಿಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ. 
 
ಅದಕ್ಕೆ ಕಾದು ಕುಳಿತಂತಿರುವ ಕಾಂಗ್ರೆಸ್ ಸಹ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸಿದ್ಧ ಎಂದು ಹೇಳಿದೆ.
 
ಮುಖ್ಯಮಂತ್ರಿ ಅಭ್ಯರ್ಥಿ ಮಾಡುವುದು ಕಷ್ಟಸಾದ್ಯವಾಗಿದ್ದು 2-3 ವರ್ಷಗಳ ಬಳಿಕ ಅಮೃತಸರ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವುದಾಗಿ ತಿಳಿಸಿದೆ.
 
ಪ್ರಸ್ತುತ ಅಮೃತಸರ್ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಕೈಯ್ಯಲ್ಲಿದೆ.
 
ತಮ್ಮ ಆಹ್ವಾನಕ್ಕೆ ಒಪ್ಪಿದರೆ ಸಿಧು ಚರ್ಚೆಗೆ ಬರಲಿ. ಆ ಬಳಿಕ ಎಲ್ಲವನ್ನು ನಿರ್ಧರಿಸಲು ಸಾಧ್ಯ ಎಂದು ಕಾಂಗ್ರೆಸ್ ಹೇಳಿದೆ. 
 

ವೆಬ್ದುನಿಯಾವನ್ನು ಓದಿ