ಮೋದಿ ಸರಕಾರದ ಎರಡು ವರ್ಷಧ ಅವಧಿ ಭಾಷಣಕ್ಕೆ ಸೀಮಿತ, ಸಾಧನೆ ಶೂನ್ಯ: ಕಾಂಗ್ರೆಸ್

ಗುರುವಾರ, 26 ಮೇ 2016 (15:17 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡು ವರ್ಷಗಳ ಅಧಿಕಾರವಧಿಯನ್ನು ಪೂರೈಸಿರುವುದರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಮೋದಿ ಸರಕಾರ ಎರಡು ವರ್ಷಗಳಲ್ಲಿ ಕೇವಲ ಭಾಷಣಗಳು ನಡೆದಿವೆಯೇ ಹೊರತು ಉತ್ತಮ ಅಡಳಿತ ನೀಡಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕರಾದ ಗುಲಾಮ್ ನಬಿ ಆಜಾದ್, ಮಲ್ಲಿಕಾರ್ಜುನ್ ಖರ್ಗೆ, ಕಪಿಲ್ ಸಿಬಲ್ ಮತ್ತು ರಣದೀಪ್ ಸುರ್ಜೇವಾಲಾ, ಮೋದಿ ಸರಕಾರ ಎರಡು ವರ್ಷಗಳಲ್ಲಿ ಬದಲಾವಣೆ ತಂದಿದೆ ಎನ್ನುವ ಬಿಜೆಪಿ ವಾದವನ್ನು ತಳ್ಳಿಹಾಕಿದರು.
 
ಮೋದಿ ಸರಕಾರ ಯಾವ ಸಾಧನೆ ಮಾಡಿದೆ ಎಂದು ಸಂಭ್ರಮಾಚರಣೆ ಮಾಡಲಾಗುತ್ತಿದೆ? ದೇಶದಲ್ಲಿ ಉದ್ಯೋಗಗಳ ಸೃಷ್ಟಿಯಾಗಿವೆಯೇ? ರೈತರು ಶೇ.50 ರಷ್ಟು ಲಾಭವನ್ನು ಪಡೆಯುತ್ತಿದ್ದಾರೆಯೇ? ದೇಶದಲ್ಲಿ ಸುರಕ್ಷಿತ ವಾತಾವಾರಣವಿದೆಯೇ? ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ.
 
ಪ್ರಧಾನಿ ಮೋದಿ ಪ್ರತಿ 45 ನಿಮಿಷಗಳಿಗೊಮ್ಮೆ ಭಾಷಣ ಮಾಡುತ್ತಾರೆ. ಆದರೆ,ಒಂದೇ ಒಂದು ಪ್ರಶ್ನೆಗೂ ಉತ್ತರಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಲೇವಡಿ ಮಾಡಿದರು.
 
ವಿದೇಶಿ ಬಂಡವಾಳ ಹೂಡಿಕೆ ಕುಸಿತ, ಆಹಾರ ಹಣದುಬ್ಬರ, ಉದ್ಯೋಗ ಸೃಷ್ಟಿಯಲ್ಲಿ ಕುಸಿತವಾಗಿದೆ. ಮೋದಿ ಸರಕಾರ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಘೋಷಿಸಿತ್ತು.ರಫ್ತು ವಹಿವಾಟಿನಲ್ಲಿ ಕುಸಿತವಾಗಿದೆ. ಕೃಷಿ ಕ್ಷೇತ್ರ ಧೂಳಿಪಟವಾಗಿದೆ. ರೈತರು ಬರಗಾಲದ ಸ್ಥಿತಿಯನ್ನು ಎದುರಿಸುತ್ತಿದ್ದರೂ ಮೋದಿ ಸರಕಾರ ಸಂಭ್ರಮಾಚರಣೆಯಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ